ನವದೆಹಲಿ: ರೈಲು ಅಪಘಾತಗಳಲ್ಲಿ ಯಾರಾದರೂ ಮೃತಪಟ್ಟರೆ ಅಥವಾ ಗಾಯಗೊಂಡರೆ ನೀಡುವ ಪರಿಹಾರದ ಮೊತ್ತವನ್ನು ರೈಲ್ವೆ ಮಂಡಳಿ 10 ಪಟ್ಟು ಹೆಚ್ಚಿಸಿದೆ.
ರೈಲು ಅಪಘಾತಗಳ ಪರಿಹಾರವನ್ನು 2012 ಮತ್ತು 2013 ರಲ್ಲಿ ಕೊನೆಯದಾಗಿ ಪರಿಷ್ಕರಿಸಲಾಗಿತ್ತು.
"ರೈಲು ಅಪಘಾತಗಳು ಮತ್ತು ಅಹಿತಕರ ಘಟನೆಗಳಲ್ಲಿ ಮೃತಪಟ್ಟವರ ಕುಟುಂಬಕ್ಕೆ ಮತ್ತು ಗಾಯಗೊಂಡ ಪ್ರಯಾಣಿಕರಿಗೆ ನೀಡುತ್ತಿದ್ದ ಪರಿಹಾರದ ಮೊತ್ತವನ್ನು ಪರಿಷ್ಕರಿಸಲು ನಿರ್ಧರಿಸಲಾಗಿದೆ" ಎಂದು ಸೆಪ್ಟೆಂಬರ್ 18 ರ ಸುತ್ತೋಲೆಯಲ್ಲಿ ತಿಳಿಸಲಾಗಿದೆ.
"ಮಾನವಸಹಿತ ಲೆವೆಲ್ ಕ್ರಾಸಿಂಗ್ ಗೇಟ್ ಅಪಘಾತದಲ್ಲಿ ರೈಲ್ವೆಯ ಪ್ರಾಥಮಿಕ ಹೊಣೆಗಾರಿಕೆಯಿಂದಾಗಿ ಅಪಘಾತಕ್ಕೀಡಾದ ರಸ್ತೆ ಬಳಕೆದಾರರಿಗೆ" ನೀಡುವ ಪರಿಹಾರವನ್ನು ಸಹ ಹೆಚ್ಚಿಸಲಾಗಿದೆ ಮತ್ತು ಇದು ಸೆಪ್ಟೆಂಬರ್ 18 ರಿಂದ ಅನ್ವಯಿಸುತ್ತದೆ ಸುತ್ತೋಲೆ ತಿಳಿಸಿದೆ.
ಸುತ್ತೋಲೆಯ ಪ್ರಕಾರ, ರೈಲು ಮತ್ತು ಮಾನವಸಹಿತ ಲೆವೆಲ್ ಕ್ರಾಸಿಂಗ್ ಅಪಘಾತಗಳಲ್ಲಿ ಮೃತ ಪ್ರಯಾಣಿಕರ ಸಂಬಂಧಿಕರಿಗೆ ನೀಡುತ್ತಿದ್ದ ಪರಿಹಾರದ ಮೊತ್ತವನ್ನು 5 ಲಕ್ಷ ರೂಪಾಯಿಗೆ ಮತ್ತು ತೀವ್ರವಾಗಿ ಗಾಯಗೊಂಡವರಿಗೆ ನೀಡುತ್ತಿದ್ದ ಪರಿಹಾರವನ್ನು 2.5 ಲಕ್ಷ ರೂಪಾಯಿಗೆ ಹೆಚ್ಚಿಸಲಾಗಿದೆ. ಸಣ್ಣ ಪುಟ್ಟ ಗಾಯಗಳಾಗಿರುವ ಪ್ರಯಾಣಿಕರಿಗೆ 50,000 ರೂ. ನೀಡಲಾಗುವುದು ಎಂದು ರೈಲ್ವೆ ಮಂಡಳಿ ಹೇಳಿದೆ.
ಈ ಹಿಂದೆ ಪರಿಹಾರದ ಮೊತ್ತ ಕ್ರಮವಾಗಿ 50,000, 25,000 ಮತ್ತು 5,000 ರೂ. ಇತ್ತು.
ಅಹಿತಕರ ಘಟನೆಗಳಲ್ಲಿ ಮೃತಪಟ್ಟ, ಗಂಭೀರವಾಗಿ ಗಾಯಗೊಂಡ ಮತ್ತು ಸಣ್ಣಪುಟ್ಟ ಗಾಯಗೊಂಡ ಪ್ರಯಾಣಿಕರ ಅವಲಂಬಿತರಿಗೆ ಕ್ರಮವಾಗಿ 1.5 ಲಕ್ಷ, 50,000 ಮತ್ತು 5,000 ರೂ.ಗಳನ್ನು ನೀಡಲಾಗುವುದು ಎಂದು ಸುತ್ತೋಲೆಯಲ್ಲಿ ತಿಳಿಸಲಾಗಿದೆ. ಮುಂಚೆ ಈ ಮೊತ್ತವು ಕ್ರಮವಾಗಿ 50,000, 25,000 ಮತ್ತು 5,000 ರೂ. ಇತ್ತು.