ನವದೆಹಲಿ: ವಸಾಹತುಶಾಹಿ ಯುಗದ ದೇಶದ್ರೋಹ ಕಾನೂನಿನ ಸಾಂವಿಧಾನಿಕ ಸಿಂಧುತ್ವ ಪ್ರಶ್ನಿಸಿ ಸಲ್ಲಿಸಿರುವ ಅರ್ಜಿಗಳ ವಿಚಾರಣೆಯು ಸುಪ್ರೀಂ ಕೋರ್ಟ್‌ನಲ್ಲಿ ಸೆಪ್ಟೆಂಬರ್ 12ರಂದು ನಡೆಯಲಿದೆ.
ಮುಖ್ಯ ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ್, ನ್ಯಾಯಮೂರ್ತಿಗಳಾದ ಜೆ.ಬಿ. ಪಾರ್ದೀವಾಲಾ ಮತ್ತು ಮನೋಜ್ ಮಿಶ್ರಾ ಅವರಿರುವ ತ್ರಿಸದಸ್ಯ ಪೀಠವು, ಈ ವಿಚಾರಣೆ ನಡೆಸಲಿದೆ.
ಭಾರತೀಯ ದಂಡ ಸಂಹಿತೆಯ ಸೆಕ್ಷನ್ 124ಎ (ದೇಶದ್ರೋಹ) ಸಿಂಧುತ್ವ ಪ್ರಶ್ನಿಸಿದ್ದ ಅರ್ಜಿಗಳ ವಿಚಾರಣೆಯನ್ನು 2022ರ ಮೇ 1ರಂದು ಸುಪ್ರೀಂ ಕೋರ್ಟ್ ಕೈಗೆತ್ತಿಕೊಂಡಿತ್ತು. ಅತ್ಯಂತ ಹಳೆಯದಾದ ಈ ಕಾನೂನಿನ ಸಾಂವಿಧಾನಿಕ ಊರ್ಜಿತಕ್ಕೆ ಸಂಬಂಧಿಸಿದಂತೆ ಉನ್ನತಮಟ್ಟದ ಮರುಪರಿಶೀಲನೆಯು ಪ್ರಗತಿಯಲ್ಲಿದೆ ಎಂದು ಮೇ 11ರಂದು ಕೇಂದ್ರದ ಪರವಾಗಿ ಅಟಾರ್ನಿ ಜನರಲ್ ಕೆ. ವೆಂಕಟರಮಣಿ ಅವರು ನ್ಯಾಯಪೀಠಕ್ಕೆ ಪ್ರಮಾಣ ಪತ್ರ ಸಲ್ಲಿಸಿದ್ದರು. ಹಾಗಾಗಿ, ವಿಚಾರಣೆಯನ್ನು ಮುಂದೂಡಲಾಗಿತ್ತು.
ಕೇಂದ್ರದ ಮನವಿ ಆಲಿಸಿದ್ದ ನ್ಯಾಯಪೀಠವು, ಮರುಶೀಲನಾ ಪ್ರಕ್ರಿಯೆಯು ಪೂರ್ಣಗೊಳ್ಳುವವರೆಗೂ ಐಪಿಸಿ ಸೆಕ್ಷನ್ 124ಎ ಅಡಿ ಹೊಸದಾಗಿ ಎಫ್‌ಐಆರ್ ದಾಖಲಿಸಬಾರದು ಎಂದು ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಗೆ ಸೂಚಿಸಿತ್ತು. ಅಲ್ಲದೇ, ಈ ಸೆಕ್ಷನ್‌ನಡಿ ಪ್ರಗತಿಯಲ್ಲಿರುವ ತನಿಖೆಗಳು, ಬಾಕಿ ವಿಚಾರಣೆ ಸೇರಿದಂತೆ ಎಲ್ಲಾ ಪ್ರಕ್ರಿಯೆಗಳಿಗೂ ತಡೆ ನೀಡಿತ್ತು.
ಬ್ರಿಟಿಷರ ಆಳ್ವಿಕೆಯಲ್ಲಿ ಜಾರಿಗೊಂಡಿರುವ ಅಪರಾಧ ಕಾನೂನುಗಳಾದ ಭಾರತೀಯ ದಂಡ ಸಂಹಿತೆ, ಅಪರಾಧ ಪ್ರಕ್ರಿಯಾ ಸಂಹಿತೆ ಹಾಗೂ ಭಾರತೀಯ ಸಾಕ್ಷ್ಯ ಕಾಯ್ದೆಯ ಬದಲಿಗೆ ಹೊಸ ಕಾನೂನುಗಳನ್ನು ಜಾರಿಗೆ ತರಲು ಕೇಂದ್ರ ಸರ್ಕಾರ ಮುಂದಾಗಿದೆ.
ಲೋಕಸಭೆಯ ಮುಂಗಾರು ಅಧಿವೇಶನದಲ್ಲಿ ಮೂರು ಹೊಸ ಮಸೂದೆಗಳನ್ನೂ ಮಂಡಿಸಿದೆ. ಭಾರತೀಯ ದಂಡ ಸಂಹಿತೆಯ ಬದಲಿಗೆ ಮಂಡಿಸಿರುವ ಭಾರತೀಯ ನ್ಯಾಯ ಸಂಹಿತೆ ಮಸೂದೆಯಲ್ಲಿ ದೇಶದ್ರೋಹ ಕಾನೂನಿನ ಬಗ್ಗೆ ವಿಶಾಲವಾಗಿ ವ್ಯಾಖ್ಯಾನಿಸಲಾಗಿದೆ.
ಭಾರತೀಯರನ್ನು ದಮನಿಸುವ ಅಸ್ತ್ರವಾಗಿ ಬ್ರಿಟಿಷರು ಭಾರತವು ಸ್ವಾತಂತ್ರ್ಯಗೊಳ್ಳುವುದಕ್ಕೂ ಮೊದಲೇ 1890ರಲ್ಲಿ ಈ ಸಂಹಿತೆಯನ್ನು ಜಾರಿಗೆ ತಂದಿದ್ದರು. ಇದರಡಿ ಅಪರಾಧಿಗಳಿಗೆ ಜೀವಿತಾವಧಿವರೆಗೆ ಜೈಲು ಶಿಕ್ಷೆ ವಿಧಿಸಲು ಅವಕಾಶವಿದೆ.