ತಿರುವನಂತಪುರಂ: ಶಬರಿಮಲೆ ಮಾಸ್ಟರ್ ಪ್ಲಾನ್ ಗೆ ಮೀಸಲಿಟ್ಟ 335 ಕೋಟಿ ರೂ.ಗಳಲ್ಲಿ ಕೇವಲ 141.25 ಕೋಟಿ ರೂ. ವೆಚ್ಚ ಮಾಡಲಾಗಿದೆ ಎಂದು ವರದಿಯಾಗಿದೆ.
ದೇವಸ್ವಂ ಸಚಿವ ಕೆ. ರಾಧಾಕೃಷ್ಣನ್ ವಿಧಾನಸಭೆಗೆ ಈ ಮಾಹಿತಿ ನೀಡಿರುವರು. ಶಬರಿಮಲೆ ಯೋಜನೆಗೆ 2023-24ರ ಬಜೆಟ್‍ನಲ್ಲಿ 30 ಕೋಟಿ ರೂ.ಮೀಸಲಿಡಲಾಗಿತ್ತು. ಸನ್ನಿಧಾನದ ಯಾತ್ರಾರ್ಥಿ ಸೌಕರ್ಯ ಕೇಂದ್ರ, ತಂತ್ರಿ ಮಠ, ಅಗ್ನಿಶಾಮಕ ವ್ಯವಸ್ಥೆ, ಕುನ್ನಾರದಿಂದ ಸನ್ನಿಧಾನಕ್ಕೆ ಶುದ್ಧ ನೀರು ತರಲು ಹೊಸ ಪೈಪ್ ಹಾಕುವುದು, ಪಂಪಾ ಗಣಪತಿ ದೇವಸ್ಥಾನದಿಂದ ಬೆಟ್ಟದವರೆಗೆ ರಕ್ಷಣಾ ಸೇತುವೆ ನಿರ್ಮಾಣ, ಆಡಳಿತ ಬ್ಲಾಕ್ ಸೇರಿದಂತೆ ಕೋರ್ ಏರಿಯಾ ಅಭಿವೃದ್ಧಿ, ಅನ್ನದಾನ ಮಂಟಪ, ವಿಶ್ರಾಂತಿ ಮಂಟಪ ವೆಚ್ಚದ ಲೆಕ್ಕದಲ್ಲಿ ನಿರ್ಮಿಸಲಾಗಿದೆ. ನೀಲಕ್ಕಲ್‍ನಲ್ಲಿ ರಸ್ತೆಗಳು ಮತ್ತು ಸಂಬಂಧಿತ ಸೇತುವೆಗಳ ನಿರ್ಮಾಣವು ಶೀಘ್ರದಲ್ಲೇ ಪೂರ್ಣಗೊಳ್ಳಲಿದೆ ಮತ್ತು ಮಿಕ್ಕುಳಿದ ಯೋಜನೆ ಪ್ರಾರಂಭಿಸಲಾಗುವುದು ಎಂದು ಸಚಿವರು ಹೇಳಿದರು.
2016ರಲ್ಲಿ ಕೇಂದ್ರ ಪ್ರವಾಸೋದ್ಯಮ ಸಚಿವಾಲಯದ ಸ್ವದೇಶಿ ದರ್ಶನ ಯೋಜನೆಯಡಿ ಶಬರಿಮಲೆ ಮತ್ತು ಸುತ್ತಮುತ್ತಲ ಪ್ರದೇಶಗಳ ಅಭಿವೃದ್ಧಿಗೆ 99.98 ಕೋಟಿ ರೂ.ಗಳ ಒಟ್ಟು 53 ಯೋಜನಾ ಘಟಕಗಳಿಗೆ ಅನುಮೋದನೆ ನೀಡಲಾಗಿತ್ತು. ಅದರಲ್ಲಿ 32 ಘಟಕಗಳು ಪೂರ್ಣಗೊಂಡಿವೆ ಮತ್ತು 13 ಘಟಕಗಳನ್ನು ಕೈಬಿಡಲಾಗಿದೆ. ಯೋಜನೆಯ ಒಟ್ಟು ವೆಚ್ಚವನ್ನು 54.88 ಕೋಟಿ ರೂ.ಗೆ ಇಳಿಸಲಾಗಿದೆ ಎಂದು ಸಚಿವರು ತಿಳಿಸಿದರು.