ಆಂಧ್ರಪ್ರದೇಶ: ಕೌಶಲ ಅಭಿವೃದ್ಧಿ ನಿಗಮದ ಹಣ ದುರುಪಯೋಗ ಪ್ರಕರಣದಲ್ಲಿ ಬಂಧಿತರಾಗಿರುವ ಆಂಧ್ರಪ್ರದೇಶದ ಮಾಜಿ ಮುಖ್ಯಮಂತ್ರಿ ಹಾಗೂ ತೆಲುಗುದೇಶಂ ಪಕ್ಷದ (ಟಿಡಿಪಿ) ಮುಖ್ಯಸ್ಥ ಎನ್. ಚಂದ್ರಬಾಬು ನಾಯ್ಡು ಅವರನ್ನು 14 ದಿನ ನ್ಯಾಯಾಂಗ ಬಂಧನಕ್ಕೆ ನೀಡಲಾಗಿದೆ
ಸಿಐಡಿ ಪೊಲೀಸರು ಶನಿವಾರ ಚಂದ್ರಬಾಬು ನಾಯ್ಡು ಅವರನ್ನು ಬಂಧಿಸಿದ್ದರು.
ವಿಜಯವಾಡದ ಭ್ರಷ್ಟಾಚಾರ ನಿಗ್ರಹ ದಳದ (ಎಸಿಬಿ) ನ್ಯಾಯಾಲಯಕ್ಕೆ ನಾಯ್ಡು ಅವರನ್ನು ಹಾಜರುಪಡಿಸಲಾಗಿತ್ತು. ವಿಚಾರಣೆ ನಡೆಸಿದ ಕೋರ್ಟ್ ಸೆಪ್ಟೆಂಬರ್23ರವರೆಗೆ 14 ದಿನ ನ್ಯಾಯಾಂಗ ಬಂಧನ ವಿಧಿಸಿ ಆದೇಶ ಹೊರಡಿಸಿದೆ.
ಚಂದ್ರಬಾಬು ಅವರನ್ನು ರಾಜಮಂಡ್ರಿ ಜೈಲಿನಲ್ಲಿ ಇರಿಸಲಾಗುತ್ತದೆ ಎಂದು ಮೂಲಗಳು ತಿಳಿಸಿವೆ.
ಚಂದ್ರಬಾಬು ನಾಯ್ಡು ಪರವಾಗಿ ಸುಪ್ರೀಂ ಕೋರ್ಟ್ ವಕೀಲ ಸಿದ್ದಾರ್ಥ್ ಲೂಥ್ರಾ ಹಾಗೂ ವಕೀಲರ ತಂಡ ವಾದ ಮಂಡಿಸಿದ್ದರು.
ಚಂದ್ರಬಾಬು ನಾಯ್ಡು ಅವರು ಕೌಶಲ ಅಭಿವೃದ್ಧಿ ನಿಗಮದ ₹371 ಕೋಟಿ ಹಣವನ್ನು ದುರುಪಯೋಗ ಮಾಡಿದ್ದು, ಇದರಿಂದ ರಾಜ್ಯದ ಬೊಕ್ಕಸಕ್ಕೆ ಭಾರಿ ನಷ್ಟವಾಗಿದೆ ಎಂದು ಆರೋಪಿಸಲಾಗಿದೆ.