ಪತ್ತನಂತಿಟ್ಟ: ಶಬರಿಮಲೆ ಶ್ರೀಧರ್ಮಶಾಸ್ತಕ್ಷೇತ್ರದಲ್ಲಿ ಕನ್ಯಾಮಾಸದ ಪೂಜೆಗಾಗಿ 17ರಂದು (ಭಾನುವಾರ) ಸಂಜೆ 5 ಗಂಟೆಗೆ ತೆರೆಯಲಿದ್ದು, ದೇವಸ್ಥಾನದ ತಂತ್ರಿ ಕಂಠಾರರ್ ಮಹೇಶ್ ಮೋಹನರ್ ನೇತೃತ್ವದಲ್ಲಿ ಮೇಲ್ಶಾಂತಿ ಕೆ.ಜಯರಾಮನ್ ನಂಬೂದಿರಿ ದೇವಸ್ಥಾನದ ಗರ್ಭಗುಡಿಗೆ ಪ್ರದಕ್ಷಿಣೆ ಬಂದು ದೀಪ ಬೆಳಗಿಸಲಿದ್ದಾರೆ.
ನಂತರ ಮೇಲ್ಶಾಂತಿ ಗಣಪತಿ ಹಾಗೂ ನಾಗರ ಉಪದೇವತೆಗಳ ಗುಡಿಗಳ ಬಾಗಿಲು ತೆರೆದು ದೀಪ ಬೆಳಗಿದ ಬಳಿಕ 18ನೇ ಮೆಟ್ಟಿಲು ಮುಂಭಾಗದ ಯಜ್ಞಕುಂಡದಲ್ಲಿ ಅಗ್ನಿಸ್ಪರ್ಶ ನಿರ್ವಹಿಸುವರು. ತಂತ್ರಿ ಕಂಠಾರರ್ ಮಹೇಶ್ ಮೋಹನರ್ ಅಯ್ಯಪ್ಪ ಭಕ್ತರಿಗೆ ವಿಭೂತಿ ಪ್ರಸಾದ ವಿನಿಯೋಗ ಮಾಡುವರು. ಮಾಳಿಗಪ್ಪುರಂ ಮೇಲ್ಶಾಂತಿ ವಿ.ಹರಿಹರನ್ ನಂಬೂದಿರಿ ಮಾಳಿಗಪ್ಪುರಂ ದೇವಸ್ಥಾನದ ಬಾಗಿಲು ತೆರೆದು ದೀಪ ಬೆಳಗಿಸುವರು, ನಂತರ ಮೇಲ್ಶಾಂತಿಯವರು ಭಕ್ತರಿಗೆ ಪ್ರಸಾದ ವಿತರಿಸುವರು.
17ರಂದು ಗರ್ಭಗೃಹದ ಬಾಗಿಲು ತೆರೆದರೂ ಶಬರಿಮಲೆ ಅಯ್ಯಪ್ಪಸನ್ನಿಧಿ ಹಾಗೂ ಮಾಳಿಗಪ್ಪುರಂ ದೇವಸ್ಥಾನದಲ್ಲಿ ಪೂಜೆ ಇರುವುದಿಲ್ಲ.ಅಂದು ರಾತ್ರಿ 10 ಗಂಟೆಗೆ ಗರ್ಭಗೃಹ ಮುಚ್ಚಲಾಗುತ್ತದೆ. 18ರಂದು ಬೆಳಗ್ಗೆ 5 ಕ್ಕೆ ದೇವಸ್ಥಾನ ತೆರೆಯಲಾಗುತ್ತದೆ. ಬಳಿಕ ನಿರ್ಮಾಲ್ಯ ದರ್ಶನ ಹಾಗೂ ನಿತ್ಯ ಅಭಿಷೇಕ ನಡೆಯಲಿದೆ. ಸಂಜೆ 5.30ಕ್ಕೆ ಮಹಾಗಣಪತಿ ಹೋಮ ನಡೆಯಲಿದೆ.
ನಂತರ ತುಪ್ಪಾಭಿಷೇಕ ಆರಂಭವಾಗುತ್ತದೆ.7.30ಕ್ಕೆ ಉಷಃಪೂಜೆ, 12.30ಕ್ಕೆ ಮಧ್ಯಾಹ್ನ ಪೂಜೆ, ಸೆಪ್ಟೆಂಬರ್ 18ರಿಂದ 22ರವರೆಗೆ 5 ದಿನ ಉದಯಾಸ್ತಮಾನ ಪೂಜೆ, 25 ಕಲಶಾಭಿಷೇಕ, ಕಳಭಾಭಿಷೇಕ, ಪಡಿಪೂಜೆ, ಪುμÁ್ಪಭಿಷೇಕ ನಡೆಯಲಿದೆ.
ಭಕ್ತರು ವರ್ಚುವಲ್ ಕ್ಯೂ ಮೂಲಕ ಬುಕ್ಕಿಂಗ್ ಮಾಡುವ ಮೂಲಕ ದರ್ಶನಕ್ಕೆ ತಲುಪಬಹುದು. ನಿಲಯ್ಕಲ್ ಮತ್ತು ಪಂಬಾದಲ್ಲಿ ಭಕ್ತರಿಗಾಗಿ ಸ್ಪಾಟ್ ಬುಕ್ಕಿಂಗ್ ವ್ಯವಸ್ಥೆಯನ್ನು ಸಹ ಸಿದ್ಧಪಡಿಸಲಾಗಿದೆ. 5 ದಿನಗಳ ಪೂಜೆಗಳನ್ನು ಪೂರ್ಣಗೊಳಿಸಿದ ನಂತರ ದೇವಾಲಯದ ಗರ್ಭಗೃಹ ಸೆಪ್ಟೆಂಬರ್ 22 ರಂದು ರಾತ್ರಿ 10 ಗಂಟೆಗೆ ಹರಿವರಾಸನಂ ಹಾಡುವ ಮೂಲಕ ಮುಚ್ಚಲಿದೆ.