ಕಾಸರಗೋಡು: ಜಿಲ್ಲಾ ಪಂಚಾಯಿತಿ ಆವಿಷ್ಕರಿಸಿ, ಕಾಸರಗೋಡು ಜಿಲ್ಲಾ ಕೈಗಾರಿಕಾ ಕೇಂದ್ರ ನಿರ್ವಹಿಸಲಿರುವ 'ರೈಸಿಂಗ್ ಕಾಸರಗೋಡು'ದೀರ್ಘಾವಧಿಯ ಯೋಜನೆಗೆ ಹೂಡಿಕೆದಾರರನ್ನು ಆಕರ್ಷಿಸುವ ನಿಟ್ಟಿನಲ್ಲಿ ಹೂಡಿಕೆದಾರರ ಸಮಾವೇಶ ಬೇಕಲದ ಲಲಿತ್ ರೆಸಾರ್ಟ್ ಏಂಡ್ ಸ್ಪಾದಲ್ಲಿ ಸೆ. 18ಮತ್ತು 19ರಂದು ನಡೆಯಲಿರುವುದಾಗಿ ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಕೆ. ಬೇಬಿ ಬಾಲಕೃಷ್ಣನ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಜಿಲ್ಲೆಯಲ್ಲಿ ಕೈಗಾರಿಕಾ ಪಾರ್ಕ್‍ಗಳನ್ನು ಪ್ರಾರಂಭಿಸಿ, ಹೊರ ದೇಶಗಳಿಂದ ಬಂಡವಾಳ ಆಕರ್ಷಿಸಿ, ಜಿಲ್ಲೆಯನ್ನು ಪ್ರಗತಿಯತ್ತ ಕೊಂಡೊಯ್ಯುವ ಮತ್ತು ಉದ್ಯೋಗಾವಕಾಶಗಳನ್ನು ಹೆಚ್ಚಿಸುವ ದೂರದೃಷ್ಟಿಯ ಯೋಜನೆ ಇದಾಗಿದೆ. 2021ರಲ್ಲಿ ನಡೆದ ಕೆಎಲ್-14 ಗ್ಲೋಬಲ್‍ಮೀಟ್‍ನಲ್ಲಿ 200ಕೋಟಿ ರೂ. ಹೂಡಿಕೆಯಾಗಿದ್ದು, ಇದರ ಮುಂದುವರಿದ ಭಾಗವಾಗಿ ರೈಸಿಂಗ್ ಕಾಸರಗೋಡು ಆಯೋಜಿಸಲಾಗಿದೆ. ಎರಡು ದಿವಸಗಳ ಕಾಲ ನಡೆಯಲಿರುವ ಹೂಡಿಕೆದಾರರ ಸಮಾವೇಶದಲ್ಲಿ ಒಂದು ಸಾವಿರ ಕೋಟಿ ರೂ. ಹೂಡಿಕೆ ನಿರೀಕ್ಷಿಸಲಾಗಿದೆ ಎಂದು ತಿಳಿಸಿದರು.
ಕಾಸರಗೋಡು ಜಿಲ್ಲಾಧಿಕಾರಿ ಕೆ. ಇನ್ಬಾಶೇಖರ್ ಮಾತನಾಡಿ, ಕೈಗಾರಿಕಾ ವಲಯದ ಅಭಿವ್ರದ್ಧಿಯಿಂದ ನಾಡಿನ ಪುರೋಗತಿಯೊಂದಿಗೆ ಉದ್ಯೋಗಾವಕಾಶ ಹೆಚ್ಚಲು ಸಾಧ್ಯ. ಕೈಗಾರಿಕೆಗಳಿಗೆ ಭೂಮಿ ಒದಗಿಸುವ ನಿಟ್ಟಿನಲ್ಲಿ ಎರಡನೇ ಹಂತದ ಡಿಜಿಟಲ್ ಸರ್ವೇ ಕಾರ್ಯ ನಡೆಸಲಾಗುತ್ತಿದ್ದು, ಈ ಮೂಲಕ ಜಾಗ ಕಂಡುಕೊಳ್ಳಲಾಗುವುದು ಎಂದು ತಿಳಿಸಿದರು.
18ರಂದು ಸಮಾವೇಶಕ್ಕೆ ಚಾಲನೆ:
ಬೇಕಲದ ಲಲಿತ್ ರೆಸಾರ್ಟ್ ಏಂಡ್ ಸ್ಪಾದಲ್ಲಿ ಸೆ. 18ರಂದು ಬೆಳಗ್ಗೆ 9.30ಕ್ಕೆ ನಡೆಯುವ ಸಮಾವೇಶವನ್ನು ರಾಜ್ಯ ಕೈಗಾರಿಕಾ ಸಚಿವ ಪಿ.ರಾಜೀವ್ ಉದ್ಘಾಟಿಸುವರು. ಬಂದರು ಮತ್ತು ಪ್ರಾಚ್ಯವಸ್ತು ಖಾತೆ ಸಚಿವ ಅಹಮ್ಮದ್ ದೇವರ್‍ಕೋವಿಲ್ ಅಧ್ಯಕ್ಷತೆ ವಹಿಸುವರು. ಸಂಸದ ರಜ್‍ಮೋಹನ್ ಉಣ್ಣಿತ್ತಾನ್, ರಾಜ್ಯ ಮುಖ್ಯ ಕಾರ್ಯದರ್ಶಿ ಕೆ.ವೇಣು, ಜಿಲ್ಲೆಯ ಶಾಸಕರು ಪಾಲ್ಗೊಳ್ಳುವರು. ವಿವಿಧ ವಿಷಯಗಳ ಬಗ್ಗೆ ಚರ್ಚೆ, ಹೂಡಿಕೆದಾರರೊಂದಿಗೆ ಸಮಾಲೋಚನೆ, ಯೋಜನೆಗಳ ಪ್ರಸ್ತುತಿ, ವಿವಿಧ ಕಾರ್ಯಾಗಾರಗಳು ನಡೆಯುವುದು.
ಸೆ.19ರಂದು ನಡೆಯುವ ಎರಡನೇ ದಿನದ ಸಮಾವೇಶವನ್ನು ಹಣಕಾಸು ಸಚಿವ ಕೆ.ಎಲ್.ಬಾಲಗೋಪಾಲ್ ಉದ್ಘಾಟಿಸುವರು.
ಹೂಡಿಕೆದಾರರಿಗೆ ಜಿಲ್ಲೆಯ ಭೂ ಲಭ್ಯತೆ, ಕಚ್ಚಾ ವಸ್ತುಗಳು, ಮಾನವ ಸಂಪನ್ಮೂಲ, ರಸ್ತೆ ಅಭಿವೃದ್ಧಿ ಮತ್ತು ವಿಮಾನ ನಿಲ್ದಾಣಗಳ ಸಂಪರ್ಕವನ್ನು ಪರಿಚಯಿಸಲು ಅವಕಾಶವನ್ನು ಒದಗಿಸುತ್ತದೆ ಮತ್ತು ಜಿಲ್ಲೆಯ ಉದ್ಯಮಿಗಳ ವಿನೂತನ ಕಲ್ಪನೆಗಳನ್ನು ಪ್ರಸ್ತುತಪಡಿಸುವ ಅವಕಾಶವನ್ನು ಒದಗಿಸುತ್ತದೆ. ಸಂಗಮದ ಸಮಗ್ರ ಮಾಹಿತಿಯನ್ನು ಒಳಗೊಂಡ ವೆಬ್‍ಸೈಟ್ ಕಾರ್ಯೋನ್ಮುಖವಾಗಿದೆ ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಜಿಪಂ ಉಪಾಧ್ಯಕ್ಷ ಶಾನವಾಸ್ ಪಾದೂರ್, ಜಿಲ್ಲಾ ಕೈಗಾರಿಕಾ ಕೇಂದ್ರದ ಜಿಎಂ ಸಜಿತ್‍ಕುಮಾರ್, ಜಿಪಂ ಕಾರ್ಯದರ್ಶಿ ಪಿ.ಕೆ ಸಜೀವ್ ಮೊದಲಾದವರು ಉಪಸ್ಥಿತರಿದ್ದರು.