ಮೊರಾದಾಬಾದ್: ಮಹಿಳೆಯೊಬ್ಬರು ಮಗಳ ಮದುವೆಗೆಂದು ಬ್ಯಾಂಕ್ ಲಾಕರ್‌ನಲ್ಲಿಟ್ಟಿದ್ದ ₹18 ಲಕ್ಷ ಮೊತ್ತದ ನೋಟುಗಳಿಗೆ ಗೆದ್ದಲು ಹಿಡಿದ ಘಟನೆ ಉತ್ತರ ಪ್ರದೇಶದ ಮೊರಾದಾಬಾದ್‌ನ ಬ್ಯಾಂಕ್ ಆಫ್ ಬರೋಡಾದಲ್ಲಿ ನಡೆದಿದೆ. ಇದನ್ನು ನೋಡಿ ಮಹಿಳೆ ಹೌಹಾರಿದ್ದಾರೆ.
ಅಲ್ಕಾ ಪಾಟಕ್ ಎನ್ನುವ ಮಹಿಳೆ ಕಳೆದ ವರ್ಷ ಅಕ್ಟೋಬರ್‌ನಲ್ಲಿ ಬ್ಯಾಂಕ್ ಆಫ್ ಬರೋಡಾದ ಆಶಿಯಾನಾ ಬ್ರಾಂಚ್‌ನಲ್ಲಿ ₹18 ಲಕ್ಷ ಹಣವನ್ನು ಇರಿಸಿದ್ದರು.
ಲಾಕರ್ ಅಗ್ರಿಮೆಂಟ್‌ಅನ್ನು ಮುಂದುವರೆಸುವ ಸಲುವಾಗಿ ಬ್ಯಾಂಕ್‌ನಿಂದ ಕರೆಬಂದ ಹಿನ್ನೆಲೆಯಲ್ಲಿ ಅವರು ಬ್ಯಾಂಕ್‌ಗೆ ಬಂದಿದ್ದರು. ಈ ವೇಳೆ ಲಾಕರ್ ಓಪನ್ ಮಾಡಿ ನೋಡಿದಾಗ ನೋಟುಗಳಿಗೆ ಗೆದ್ದಲು ಹಿಡಿದು ಪುಡಿಯಾಗಿದ್ದವು. ಇದನ್ನು ನೋಡಿ ಮಹಿಳೆ ಮತ್ತು ಬ್ಯಾಂಕ್ ಸಿಬ್ಬಂದಿ ಇಬ್ಬರೂ ದಂಗಾಗಿದ್ದಾರೆ.
ಬ್ಯಾಂಕಿನವರು ಈ ಮುಂಚೆ ಯಾವುದೇ ಮಾಹಿತಿಯನ್ನು ನಮಗೆ ತಿಳಿಸಿಲ್ಲ ಎಂದು ದೂರಿದ ಅವರು, ಬ್ಯಾಂಕ್ ಸಿಬ್ಬಂದಿಯಿಂದ ಸರಿಯಾದ ಪ್ರತಿಕ್ರಿಯೆ ಸಿಗದೇ ಇದ್ದರೆ ಮಾಧ್ಯಮಗಳ ಸಹಾಯ ಪಡೆಯುತ್ತೇನೆ ಎಂದು ಹೇಳಿದ್ದಾರೆ.
ಮಾಧ್ಯಮಗಳಲ್ಲಿ ಈ ವಿಚಾರ ಹರಿದಾಡುತ್ತಿದ್ದಂತೆ ಬ್ಯಾಂಕ್ ಸಿಬ್ಬಂದಿ ಬ್ಯಾಂಕ್ ಆಫ್ ಬರೋಡಾ ಪ್ರಧಾನ ಕಚೇರಿಗೆ ಮಾಹಿತಿ ರವಾನಿಸಿದ್ದಾರೆ.
ಆರ್‌ಬಿಐನ ಹೊಸ ನಿಯಮದ ಪ್ರಕಾರ ಬ್ಯಾಂಕ್ ಲಾಕರ್‌ಗಳಲ್ಲಿ ಒಡವೆ, ದಾಖಲೆಗಳನ್ನು ಮಾತ್ರ ಇಡಲು ಅವಕಾಶವಿದೆ, ಹಣದ ನೋಟುಗಳನ್ನು ಲಾಕರ್‌ಗಳಲ್ಲಿ ಇಡುವಂತಿಲ್ಲ.
'ಕಳ್ಳತನ ಅಥವಾ ದರೋಡೆಯಾದರೆ, ಕಟ್ಟಡ ಕುಸಿತ, ವಂಚನೆ, ಬೆಂಕಿ ಅವಘಡಗಳು ಉಂಟಾದರೆ ಚಾಲ್ತಿಯಲ್ಲಿರುವ ಸೇಫ್ ಡಿಪಾಸಿಟ್ ಲಾಕರ್ ವಾರ್ಷಿಕ ಬಾಡಿಗೆಯ 100 ಪಟ್ಟು ನಿಮಗೆ ಪಾವತಿಸಲು ಬ್ಯಾಂಕ್ ಜವಾಬ್ದಾರವಾಗಿರುತ್ತದೆ' ಎಂದು ಬ್ಯಾಂಕ್ ಆಫ್ ಬರೋಡಾ ಅಧಿಕೃತ ವೆಬ್ಸ್‌ಸೈಟ್‌ನಲ್ಲಿ ಬರೆದುಕೊಂಡಿದೆ.
ಘಟನೆ ಬಗ್ಗೆ ಪೊಲೀಸ್ ಪ್ರಕರಣ ದಾಖಲಾದ ಬಗ್ಗೆಯಾಗಲೀ, ಬ್ಯಾಂಕ್‌ನವರು ಪ್ರತಿಕ್ರಿಯಿಸಿದ ಬಗ್ಗೆಯಾಗಲೀ ಮಾಹಿತಿ ಲಭ್ಯವಾಗಿಲ್ಲ.