ನವದೆಹಲಿ: ಖಾಲಿಸ್ತಾನಿ ಭಯೋತ್ಪಾದಕ ಮತ್ತು ನಿಷೇಧಿತ ಪ್ರತ್ಯೇಕತಾವಾದಿ ಸಂಘಟನೆ ಸಿಖ್ಸ್ ಫಾರ್ ಜಸ್ಟಿಸ್ ಮುಖ್ಯಸ್ಥ ಗುರುಪತ್ವಂತ್ ಸಿಂಗ್ ಪನ್ನೂನ್ ವಿರುದ್ಧ ಕ್ರಮಕೈಗೊಂಡ ಬೆನ್ನಲ್ಲೇ ಭಾರತ ಸರ್ಕಾರ ದೇಶ ಬಿಟ್ಟು ಪರಾರಿಯಾದ 19 ಮಂದಿ ಖಲಿಸ್ತಾನ ಉಗ್ರರ ವಿರುದ್ಧ ಬೃಹತ್ ಕ್ರ್ಯಾಕ್‌ಡೌನ್ ಗೆ ಸಿದ್ಧತೆ ನಡೆಸಿದೆ.
ರಾಷ್ಟ್ರೀಯ ತನಿಖಾ ಸಂಸ್ಥೆ ಎನ್ಐಎ ಬ್ರಿಟನ್, ಅಮೆರಿಕ, ಕೆನಡಾ, ದುಬೈನಲ್ಲಿ ನೆಲೆಸಿರುವ 19 ಮಂದಿ ಪರಾರಿಯಾದ ಖಲಿಸ್ತಾನಿ ಭಯೋತ್ಪಾದಕರ ಪಟ್ಟಿಯನ್ನು ಸಿದ್ಧಪಡಿಸಿದ್ದು, ಭಾರತದಲ್ಲಿರುವ ಆಸ್ತಿಪಾಸ್ತಿ ಸೇರಿದಂತೆ ಪಾಕಿಸ್ತಾನ ಮತ್ತು ಇತರ ದೇಶಗಳ ಆಸ್ತಿಗಳನ್ನು ಮುಟ್ಟುಗೋಲು ಹಾಕಿಕೊಳ್ಳುವ ಸಾಧ್ಯತೆಯಿದೆ ಎಂದು ಮೂಲಗಳು ತಿಳಿಸಿವೆ.
ಭದ್ರತಾ ಏಜೆನ್ಸಿಗಳು ವರ್ಷಗಳಿಂದ ಅವರನ್ನು ಹಿಂಬಾಲಿಸುತ್ತಿದ್ದು, ಅವರ ವಿರುದ್ದ ಬೃಹತ್ ಮಟ್ಟದ ಮಾಹಿತಿ ಕಲೆಹಾಕಿದೆ. ಕಠಿಣ ಭಯೋತ್ಪಾದನಾ ವಿರೋಧಿ ಕಾನೂನು ಯುಎಪಿಎ ಅಡಿಯಲ್ಲಿ ಈ ಉಗ್ರರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು. ಈ ಭಯೋತ್ಪಾದಕರು ವಿದೇಶದಿಂದ ಭಾರತ ವಿರೋಧಿ ಪ್ರಚಾರ ನಡೆಸುತ್ತಿದ್ದಾರೆ ಎಂದು ಆರೋಪಿಸಲಾಗಿದೆ.
ಬ್ರಿಟನ್ ನಲ್ಲಿ ತಲೆಮರೆಸಿಕೊಂಡಿರುವ ಪರಮ್‌ಜಿತ್ ಸಿಂಗ್ ಪಮ್ಮಾ, ಪಾಕಿಸ್ತಾನದಲ್ಲಿ ವಾಧ್ವಾ ಸಿಂಗ್ ಬಬ್ಬರ್ ಅಲಿಯಾ ಚಾಚಾ, ಬ್ರಿಟನ್ ನಲ್ಲಿ ಕುಲ್ವಂತ್ ಸಿಂಗ್ ಮುತ್ರಾ, ಅಮೆರಿಕದಲ್ಲಿ ಜಯ್ ಧಲಿವಾಲ್, ಬ್ರಿಟನ್ ನಲ್ಲಿ ಸುಖಪಾಲ್ ಸಿಂಗ್, ಅಮೆರಿಕದಲ್ಲಿ ಹರ್‌ಪ್ರೀತ್ ಸಿಂಗ್ ಅಲಿಯಾಸ್ ರಾಣಾ ಸಿಂಗ್,ಬ್ರಿಟನ್ ನಲ್ಲಿ ಸರಬ್‌ಜೀತ್ ಸಿಂಗ್ ಬೆನ್ನೂರ್, ಕುಲವಂತ್ ಸಿಂಗ್ ಹೆಸರನ್ನು ಪಟ್ಟಿಯಲ್ಲಿ ಹೆಸರಿಸಲಾಗಿದೆ.
ಅಲ್ಲದೆ ಬ್ರಿಟನ್ ನಯಲ್ಲಿ ಅಲಿಯಾಸ್ ಕಾಂತಾ, ಅಮೆರಿಕದ ಕ್ಯಾಲಿಫೋರ್ನಿಯಾದಲ್ಲಿ ಹರ್ಜಪ್ ಸಿಂಗ್ ಅಲಿಯಾಸ್ ಜಪ್ಪಿ ಸಿಂಗ್, ಪಾಕಿಸ್ತಾನದ ಲಾಹೋರ್‌ನಲ್ಲಿ ರಂಜಿತ್ ಸಿಂಗ್ ನೀತಾ, ಗುರ್ಮೀತ್ ಸಿಂಗ್ ಅಲಿಯಾಸ್ ಬಗ್ಗಾ ಅಲಿಯಾಸ್ ಬಾಬಾ, ಬ್ರಿಟನ್ ನಲ್ಲಿ ಗುರುಪ್ರೀತ್ ಸಿಂಗ್ ಅಲಿಯಾಸ್ ಬಾಘಿ , ದುಬೈನಲ್ಲಿ ಜಸ್ಮೀತ್ ಸಿಂಗ್ ಹಕಿಮ್ಜಾದಾ , ಆಸ್ಟ್ರೇಲಿಯಾದಲ್ಲಿ ಗುರ್ಜಂತ್ ಸಿಂಗ್ ಧಿಲ್ಲೋನ್, ಯುರೋಪ್ ಮತ್ತು ಕೆನಡಾದಲ್ಲಿ ಸಿಂಗ್ ರೋಡ್, ಅಮೆರಿಕದ ಕ್ಯಾಲಿಫೋರ್ನಿಯಾದಲ್ಲಿ ಅಮರದೀಪ್ ಸಿಂಗ್ ಪೂರೆವಾಲ್, ಕೆನಡಾದಲ್ಲಿ ಜತೀಂದರ್ ಸಿಂಗ್ ಗ್ರೆವಾಲ್, ಯುಕೆಯಲ್ಲಿ ಡುಪಿಂದರ್ ಜೀತ್, ಅಮೆರಿಕದ ನ ನ್ಯೂಯಾರ್ಕ್ ನಲ್ಲಿ ಎಸ್ ಹಿಮ್ಮತ್ ಸಿಂಗ್ ಹೆಸರುಗಳನ್ನು ಪಟ್ಟಿ ಮಾಡಲಾಗಿದೆ.ಎನ್‌ಐಎ ಶನಿವಾರ ಪಂಜಾಬ್‌ನ ಚಂಡೀಗಢದಲ್ಲಿರುವ ಪನ್ನುನ್ ಮನೆಯನ್ನು ವಶಪಡಿಸಿಕೊಂಡಿದೆ ಮತ್ತು ಅಮೃತಸರದಲ್ಲಿ ಅವರ ಮಾಲೀಕತ್ವದ ಭೂಮಿಯನ್ನು ವಶಪಡಿಸಿಕೊಂಡಿದೆ. ಪಂಜಾಬ್‌ನಲ್ಲಿ ಮೂರು ದೇಶದ್ರೋಹ ಸೇರಿದಂತೆ 22 ಕ್ರಿಮಿನಲ್ ಮೊಕದ್ದಮೆಗಳನ್ನು ಎದುರಿಸುತ್ತಿರುವ ಪನ್ನೂನ್ ಇತ್ತೀಚೆಗೆ ಭಾರತ-ಕೆನಡಾದ ಹಿಂದೂಗಳಿಗೆ ದೇಶವನ್ನು ತೊರೆದು ಭಾರತಕ್ಕೆ ಹಿಂತಿರುಗುವಂತೆ ಬೆದರಿಕೆ ಹಾಕಿದ್ದ. ಈ ಕುರಿತ ವಿಡಿಯೋ ವೈರಲ್ ಆದ ಬೆನ್ನಲ್ಲೇ ಭಾರತದ ವಿರುದ್ದ ಕೆನಡಾ ಪ್ರಧಾನಿ ಜಸ್ಟಿನ್ ಟ್ರುಡೋ ಗಂಭೀರ ಆರೋಪ ಮಾಡಿದ್ದರು.