ರಾಯಪುರ: ಮಹಿಳಾ ಮೀಸಲಾತಿ ಮಸೂದೆ ಮತ್ತೊಂದು ‘ಜುಮ್ಲಾ’(ಖಾಲಿ ಭರವಸೆ) ಆಗಿದ್ದು, ಜನರು ಇದನ್ನು ನಂಬಿ ಮತ ಹಾಕುತ್ತಾರೆ ಎಂದು ಬಿಜೆಪಿ ಭಾವಿಸಿದೆ ಎಂದು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಗುರುವಾರ ಕೇಂದ್ರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಮಹಿಳೆಯರಿಗೆ ಲೋಕಸಭೆ ಮತ್ತು ರಾಜ್ಯ ವಿಧಾನಸಭೆಗಳಲ್ಲಿ ಶೇ. 33 ರಷ್ಟು ಮೀಸಲಾತಿ ಕಲ್ಪಿಸುವ ಮಸೂದೆಯನ್ನು 2034 ರವರೆಗೆ ಜಾರಿಗೆ ತರಲಾಗುವುದಿಲ್ಲ ಮತ್ತು ಭಾರತೀಯ ಜನತಾ ಪಕ್ಷ ಜನರನ್ನು ದಾರಿತಪ್ಪಿಸಲು ಪ್ರಯತ್ನಿಸುತ್ತಿದೆ ಎಂದು ಅವರು ಖರ್ಗೆ ಆರೋಪಿಸಿದ್ದಾರೆ.
ಗುರುವಾರ ಬಲೋದಬಜಾರ್-ಭಟಪರಾ ಜಿಲ್ಲೆಯ ಸುಮಾಭಟ ಗ್ರಾಮದಲ್ಲಿ ಛತ್ತೀಸ್‌ಗಢ ಸರ್ಕಾರ ಆಯೋಜಿಸಿದ್ದ ರೈತ-ಕಾರ್ಮಿಕರ ಸಮಾವೇಶ ಉದ್ದೇಶಿಸಿ ಮಾತನಾಡಿದ ಖರ್ಗೆ, ಕಾಂಗ್ರೆಸ್ ಐದು ವರ್ಷಗಳಲ್ಲಿ ಮಾಡಿದ್ದನ್ನು ಬಿಜೆಪಿ 15 ವರ್ಷಗಳಲ್ಲಿ ಮಾಡಲು ಸಾಧ್ಯವಿಲ್ಲ ಎಂದು ಹೇಳಿದರು.
ಸಂವಿಧಾನ ಬದಲಿಸಲು ಬಿಜೆಪಿ ಪ್ರಯತ್ನಿಸುತ್ತಿದೆ ಎಂದು ಆರೋಪಿಸಿದ ಖರ್ಗೆ, ಸಂವಿಧಾನ ಮತ್ತು ಪ್ರಜಾಪ್ರಭುತ್ವವನ್ನು ಉಳಿಸಲು ಜನ ಕಾಂಗ್ರೆಸ್ ಮತ್ತು ರಾಹುಲ್ ಗಾಂಧಿಯನ್ನು ಬೆಂಬಲಿಸಬೇಕು ಎಂದರು.
‘ಮಹಿಳಾ ಮೀಸಲಾತಿ ಮಸೂದೆ ಇತ್ತೀಚೆಗಷ್ಟೇ ಅಂಗೀಕಾರವಾಗಿದ್ದು, ಮಾಜಿ ಪ್ರಧಾನಿ ರಾಜೀವ್ ಗಾಂಧಿ ಅವರು 73 ಮತ್ತು 74ನೇ ತಿದ್ದುಪಡಿ ಮೂಲಕ ಪಂಚಾಯತ್ ಸಂಸ್ಥೆಗಳಲ್ಲಿ ಮಹಿಳೆಯರಿಗೆ ಮೀಸಲಾತಿ ಕಲ್ಪಿಸಿದ್ದರು’ ಎಂದರು.
"ರಾಜೀವ್ ಗಾಂಧಿ ಅವರು ಮಹಿಳಾ ಮೀಸಲಾತಿ ಮಸೂದೆ ತಂದಾಗ, ಬಿಜೆಪಿ ಅದನ್ನು ವಿರೋಧಿಸಿತು. ಒಂದು ಸದನದಲ್ಲಿ ನಮಗೆ ಬಹುಮತ ಇದ್ದಿದ್ದರಿಂದ ಪಾಸ್ ಆಯಿತು. ಆದರೆ ಇನ್ನೊಂದು ಸದನದಲ್ಲಿ ಬಿಜೆಪಿ ಅದನ್ನು ವಿರೋಧಿಸಿತು ಮತ್ತು ಮಸೂದೆಗೆ ಸೋಲಾಯಿತು" ಎಂದು ಖರ್ಗೆ ಹೇಳಿದರು.
ಅದೇ ಬಿಜೆಪಿ ಈಗ ಎದೆ ಬಡಿದುಕೊಂಡು ಈ ಮಸೂದೆಯ ಕ್ರೆಡಿಟ್ ತೆಗೆದುಕೊಳ್ಳುತ್ತಿದೆ. ಆದರೆ ಅವರು ಇದನ್ನು ಯಾವಾಗ ಜಾರಿಗೆ ತರಲು ಹೊರಟಿದ್ದಾರೆ? 2024 ರಲ್ಲಿ ಅದು ಆಗುವುದಿಲ್ಲ ಮತ್ತು 2029 ರಲ್ಲಿ ಜನಗಣತಿ ಮತ್ತು ಡಿಲಿಮಿಟೇಶನ್ ನಂತರ ಇದನ್ನು ಜಾರಿಗೆ ತರಲಾಗುವುದು ಎಂದು ಅವರೇ ಹೇಳಿದ್ದಾರೆ. ಇದರರ್ಥ ಇದನ್ನು 2034 ರಲ್ಲಿ ಜಾರಿಗೆ ತರಲಾಗುವುದು ಖರ್ಗೆ ತಿಳಿಸಿದರು.