ನವದೆಹಲಿ: ಸ್ಪೇನ್ ಹಂಗಾಮಿ ಪ್ರಧಾನಿ ಪೆಡ್ರೊ ಸ್ಯಾಂಚೆಜ್ ಅವರಿಗೆ ಕೋವಿಡ್ ದೃಢಪಟ್ಟಿದ್ದು ಅವರು ಜಿ20 ಶೃಂಗಸಭೆಯಲ್ಲಿ ಭಾಗವಹಿಸುತ್ತಿಲ್ಲ ಎಂದು ಸ್ಪೇನ್ ಸರ್ಕಾರದ ಅಧಿಕಾರಿಗಳು ಹೇಳಿದ್ದಾರೆ.
ಭಾರತದ ಅಧ್ಯಕ್ಷತೆಯಲ್ಲಿ ದೆಹಲಿಯಲ್ಲಿ ಶನಿವಾರ ಮತ್ತು ಭಾನುವಾರ ಜಿ20 ಶೃಂಗಸಭೆ ನಡೆಯುತ್ತಿದೆ.
ಈ ಬಗ್ಗೆ ಪೆಡ್ರೊ ಸ್ಯಾಂಚೆಜ್ ಕೂಡ ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ. ನನಗೆ ಕೋವಿಡ್ ದೃಢಪಟ್ಟಿದ್ದು, ಯಾವ ರೋಗ ಲಕ್ಷಣಗಳು ಇಲ್ಲದೇ ಆರೋಗ್ಯವಾಗಿದ್ದೇನೆ. ಭಾರತದ ಅಧ್ಯಕ್ಷತೆಯಲ್ಲಿ ದೆಹಲಿಯಲ್ಲಿ ನಡೆಯುತ್ತಿರುವ ಜಿ20 ಶೃಂಗಸಭೆಯಲ್ಲಿ ಪಾಲ್ಗೊಳ್ಳಲು ಸಾಧ್ಯವಾಗುತ್ತಿಲ್ಲ ಎಂದು ಹೇಳಿದ್ದಾರೆ.
ರಷ್ಯಾ ಅಧ್ಯಕ್ಷ ಪುಟಿನ್, ಚೀನಾ ಅಧ್ಯಕ್ಷ ಷಿ ಜಿಂಗ್‌ಪಿಂಗ್, ಸ್ಪೇನ್ ಹಂಗಾಮಿ ಪ್ರಧಾನಿ ಪೆಡ್ರೊ ಸ್ಯಾಂಚೆಜ್ ಶೃಂಗಸಭೆಗೆ ಹಾಜರಾಗುತ್ತಿಲ್ಲ.
ಎಲ್ಲ G20 ರಾಷ್ಟ್ರಗಳು ಸೇರಿದಂತೆ ಬಾಂಗ್ಲಾದೇಶ, ಈಜಿಪ್ಟ್, ಮಾರಿಷಸ್, ನೆದರ್ಲ್ಯಾಂಡ್ಸ್, ನೈಜೀರಿಯಾ, ಓಮನ್, ಸಿಂಗಾಪುರ್, ಸ್ಪೇನ್ ಮತ್ತು ಯುಎಇ ದೇಶಗಳ ನಾಯಕರು ಕೂಡ ಭಾಗವಹಿಸಲಿದ್ದಾರೆ.
ಇದರ ಜೊತೆಗೆ ಯುರೋಪಿಯನ್ ಒಕ್ಕೂಟದ 30ಕ್ಕೂ ಹೆಚ್ಚು ರಾಷ್ಟ್ರಗಳ ಮುಖ್ಯಸ್ಥರು, ಉನ್ನತ ಅಧಿಕಾರಿಗಳು ಮತ್ತು ಆಹ್ವಾನಿತ ಅತಿಥಿ ದೇಶಗಳು ಹಾಗೂ 14 ಅಂತರರಾಷ್ಟ್ರೀಯ ಸಂಸ್ಥೆಗಳ ಮುಖ್ಯಸ್ಥರು ಪಾಲ್ಗೊಳ್ಳುವ ನಿರೀಕ್ಷೆಯಿದೆ.