ನವದೆಹಲಿ: ಭಾರತದ ಅಧ್ಯಕ್ಷತೆಯಲ್ಲಿ ನಡೆದ ಜಿ-20 ಶೃಂಗಸಭೆ ಹಲವು ವಿಧಗಳಲ್ಲಿ ಮಹತ್ವದ ತಿರುವುಗಳನ್ನೊಳಗೊಂಡ ಸಭೆಯಾಗಿದ್ದು, ಸವಾಲುಗಳನ್ನು ಮೆಟ್ಟಿ ಮುನ್ನಡೆಯಲು ದಾರಿ ತೋರಿಸಿದೆ ಎಂದು ರಷ್ಯಾ ಹೇಳಿದೆ.
ರಷ್ಯಾದ ವಿದೇಶಾಂಗ ಸಚಿವ ಸರ್ಗೇ ಲಾವ್ರೊವ್, ಜಿ-20 ಸಭೆಯ ಬಗ್ಗೆ ಮಾತನಾಡಿದ್ದು, ಉಕ್ರೇನ್ ಸೇರಿದಂತೆ ಹಲವು ವಿಷಯಗಳಲ್ಲಿ ತಮ್ಮ ಮಾರ್ಗವನ್ನು ಮುಂದಿಡುವುದರಿಂದ ಪಶ್ಚಿಮದ ದೇಶಗಳನ್ನು ತಪ್ಪಿಸುವುದರಲ್ಲಿ ಭಾರತ ಮಹತ್ವದ ಪಾತ್ರ ವಹಿಸಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.
ಜಾಗತಿಕವಾಗಿ ಸೇನಾ ಸಂಘರ್ಷಗಳನ್ನು ವಿಶ್ವಸಂಸ್ಥೆ ಸನ್ನದು ಪ್ರಕಾರ ಬಗೆಹರಿಸಿಕೊಳ್ಳಬೇಕು ಹಾಗೂ ಪಾಶ್ಚಿಮಾತ್ಯ ಶಕ್ತಿಗಳು ತಮ್ಮ ವಿವಿಧ ಬಿಕ್ಕಟ್ಟುಗಳ ಪರಿಹಾರದ ಪರಿಕಲ್ಪನೆಗಳೊಂದಿಗೆ ಮುಂದುವರಿಯಲು ಸಾಧ್ಯವಾಗುವುದಿಲ್ಲ ಎಂಬ ಸ್ಪಷ್ಟ ಸಂದೇಶವನ್ನು ಭಾರತದ ನೇತೃತ್ವದ ಜಿ-20 ಕಳಿಸಿದೆ.
"ಇದು ಅನೇಕ ವಿಧಗಳಲ್ಲಿ ಅದ್ಭುತವಾದ ಶೃಂಗಸಭೆಯಾಗಿದೆ. ಇದು ಅನೇಕ ಸವಾಲುಗಳನ್ನು ಎದುರಿಸಿ ಮುಂದುವರಿಯಲು ನಮಗೆ ಒಂದು ಮಾರ್ಗವನ್ನು ಒದಗಿಸುತ್ತದೆ" ಎಂದು ರಷ್ಯಾ ವಿದೇಶಾಂಗ ಸಚಿವರು ಹೇಳಿದ್ದಾರೆ.
ನವದೆಹಲಿಯಲ್ಲಿ ನಡೆದ ಜಿ20 ಶೃಂಗಸಭೆ ಜಾಗತಿಕ ಆಡಳಿತ ಮತ್ತು ಜಾಗತಿಕ ಹಣಕಾಸು ಕ್ಷೇತ್ರದಲ್ಲಿಯೂ ನ್ಯಾಯಸಮ್ಮತತೆಯ ದಿಕ್ಕನ್ನು ಒದಗಿಸಿದೆ ಎಂದು ಲಾವ್ರೊವ್ ಹೇಳಿದ್ದಾರೆ.
"ಜಿ 20 ಅನ್ನು ರಾಜಕೀಯಗೊಳಿಸುವ ಪ್ರಯತ್ನಗಳನ್ನು ತಡೆಗಟ್ಟಿದ್ದಕ್ಕಾಗಿ ನಾನು ಭಾರತಕ್ಕೆ ನನ್ನ ಕೃತಜ್ಞತೆಯನ್ನು ವ್ಯಕ್ತಪಡಿಸಲು ಬಯಸುತ್ತೇನೆ" ಎಂದು ರಷ್ಯಾ ವಿದೇಶಾಂಗ ಸಚಿವರು ಹೇಳಿದ್ದಾರೆ.