ಹೈದರಾಬಾದ್: 'ಒಂದು ರಾಷ್ಟ್ರ, ಒಂದು ಚುನಾವಣೆ' ಕಲ್ಪನೆಯನ್ನು ಕಾಂಗ್ರೆಸ್ ಶನಿವಾರ ಸ್ಪಷ್ಟವಾಗಿ ತಿರಸ್ಕರಿಸಿದ್ದು, ಇದು ಸಂವಿಧಾನ ಮತ್ತು ಒಕ್ಕೂಟ ವ್ಯವಸ್ಥೆ ಮೇಲಿನ ದಾಳಿ ಎಂದು ಟೀಕಿಸಿದೆ.
ಪುನರ್ರಚಿಸಲಾದ ಕಾಂಗ್ರೆಸ್ ಕಾರ್ಯಕಾರಿ ಸಮಿತಿ(ಸಿಡಬ್ಲ್ಯುಸಿ) ಮೊದಲ ಸಭೆಯಲ್ಲಿ ಮಾತನಾಡಿದ ಕಾಂಗ್ರೆಸ್ ನಾಯಕ ಪಿ ಚಿದಂಬರಂ ಅವರು, ಏಕಕಾಲದಲ್ಲಿ ಚುನಾವಣೆ ನಡೆಸಲು ಅಗತ್ಯವಾದ ಸಾಂವಿಧಾನಿಕ ತಿದ್ದುಪಡಿಗಳನ್ನು ಅಂಗೀಕರಿಸಲು ಬಿಜೆಪಿಗೆ ಸಂಖ್ಯಾಬಲ ಇಲ್ಲ ಎಂದರು.
"ಒಂದು ರಾಷ್ಟ್ರ, ಒಂದು ಚುನಾವಣೆಯು ಸಂವಿಧಾನದ ಮೇಲಿನ ದಾಳಿ... ಇದು ಒಕ್ಕೂಟ ವ್ಯವಸ್ಥೆಯ ಮೇಲಿನ ದಾಳಿಯಾಗಿದೆ" ಎಂದು ಮಾಜಿ ಕೇಂದ್ರ ಸಚಿವ ಮೋದಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.
ಒಂದು ರಾಷ್ಟ್ರ, ಒಂದು ಚುನಾವಣೆ ಜಾರಿಗೆ ತರಲು ಕನಿಷ್ಠ ಐದು ಸಾಂವಿಧಾನಿಕ ತಿದ್ದುಪಡಿಗಳು ಬೇಕಾಗುತ್ತವೆ ಮತ್ತು ಇವುಗಳನ್ನು ಅಂಗೀಕರಿಸಲು ಬಿಜೆಪಿಗೆ ಸಂಖ್ಯಾಬಲ ಇಲ್ಲ ಎಂದು ಹಿರಿಯ ಕಾಂಗ್ರೆಸ್ ನಾಯಕ ಹೇಳಿದರು.
"ಪೂರ್ವದಿಂದ ಪಶ್ಚಿಮಕ್ಕೆ ಭಾರತ್ ಜೋಡೋ ಯಾತ್ರಾ 2.0" ಆಯೋಜಿಸುವಂತೆ ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಸದಸ್ಯರು ವಿನಂತಿಸಿದ್ದಾರೆ. ಭಾರತ್ ಜೋಡೋ ಯಾತ್ರೆಯ ಎರಡನೇ ಆವೃತ್ತಿ ಆಯೋಜಿಸುವ ವಿಚಾರ ಪರಿಗಣನೆಯಲ್ಲಿದೆ" ಎಂದು ಚಿದಂಬರಂ ಅವರು ತಿಳಿಸಿದ್ದಾರೆ.
ಮಾಜಿ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರು ಸೆಪ್ಟೆಂಬರ್ 7, 2022 ರಿಂದ ಈ ವರ್ಷದ ಜನವರಿ 30 ರವರೆಗೆ ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ಭಾರತ್ ಜೋಡೋ ಯಾತ್ರೆಯನ್ನು ಕೈಗೊಂಡಿದ್ದರು.