ನವದೆಹಲಿ: ಮಹತ್ವದ ಬೆಳವಣಿಗೆಯಲ್ಲಿ ಜಿ20 ಶೃಂಗಸಭೆಯಲ್ಲಿ ಅಂಗೀಕರಿಸಲಿರುವ 'ನವದೆಹಲಿ ಘೋಷಣೆ 'ಕುರಿತು ಸದಸ್ಯ ರಾಷ್ಟ್ರಗಳಲ್ಲಿ ಒಮ್ಮತ ಮೂಡಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಘೋಷಿಸಿದ್ದಾರೆ.
ಭಾರತ ಮಂಟಪದಲ್ಲಿ ನಡೆದ ಶೃಂಗಸಭೆಯ ಎರಡನೇ ಅಧಿವೇಶವನ್ನುದ್ದೇಶಿಸಿ ಮಾತನಾಡಿದ ಮೋದಿ, ಒಂದು ಒಳ್ಳೆಯ ಸುದ್ದಿ ಸಿಕ್ಕಿದೆ. ನಮ್ಮ ತಂಡಗಳ ಕಠಿಣ ಪರಿಶ್ರಮ ಮತ್ತು ನಿಮ್ಮಗಳ ಸಹಕಾರದಿಂದ ನವದೆಹಲಿ ಘೋಷಣೆಯಲ್ಲಿ ಒಮ್ಮತ ಮೂಡಿದೆ ಎಂದರು.
ಈ ಘೋಷಣೆಯನ್ನು ಅಂಗೀಕರಿಸಬೇಕೆಂದು ನನ್ನ ಪ್ರಸ್ತಾಪವಾಗಿದ್ದು, ಸದಸ್ಯರ ಅನುಮೋದನೆ ಬಳಿಕ, ಅಂಗೀಕರಿಸಿರುವುದಾಗಿ ಪ್ರಕಟಿಸುತ್ತೇನೆ. ತಮ್ಮ ಶ್ರಮದಿಂದ ಇದನ್ನು ಸಾಧ್ಯವಾಗಿಸಿದ ನಮ್ಮ ಸಚಿವರು, ಶೆರ್ಪಾಗಳು ಮತ್ತು ಎಲ್ಲ ಅಧಿಕಾರಿಗಳಿಗೆ ಈ ಸಂದರ್ಭದಲ್ಲಿ ಧನ್ಯವಾದಗಳನ್ನು ಅರ್ಪಿಸುತ್ತೇನೆ ಎಂದರು.
ಉಕ್ರೇನ್ ವಿಚಾರದಲ್ಲಿ ನುಣುಚಿಕೊಂಡು, ಸಕಾರಾತ್ಮಕ ಫಲಿತಾಂಶ ಪಡೆಯುವ ನಿಟ್ಟಿನಲ್ಲಿ ಭೌಗೋಳಿಕ ರಾಜಕೀಯ ವಿಷಯದ ಪ್ಯಾರಾಗ್ರಾಫ್ ಇಲ್ಲದೆ ಸದಸ್ಯ ರಾಷ್ಟ್ರಗಳ ನಡುವೆ ಭಾರತ ಶುಕ್ರವಾರ ನವದೆಹಲಿ ಘೋಷಣೆಯ ಕರಡನ್ನು ಸದಸ್ಯ ರಾಷ್ಟ್ರಗಳ ನಡುವೆ ಹಂಚಿತ್ತು ಎಂದು ರಾಜತಾಂತ್ರಿಕ ಮೂಲಗಳು ತಿಳಿಸಿವೆ.
"ಜಿ20 ಭಾರತ ನಾಯಕರ ಶೃಂಗಸಭೆಯಲ್ಲಿ ಹೊಸ ದೆಹಲಿ ನಾಯಕರ ಘೋಷಣೆಯನ್ನು ಅಧಿಕೃತವಾಗಿ ಅಂಗೀಕರಿಸಲಾಗಿದೆ! ಇಂದಿನ ಯುಗವನ್ನು ಮಾನವ ಕೇಂದ್ರಿತ ಜಾಗತೀಕರಣದ ಸುವರ್ಣ ಯುಗ ಎಂದು ಗುರುತಿಸಬೇಕು ಮತ್ತು ಈ ನಿಟ್ಟಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ನಾಯಕತ್ವದಲ್ಲಿ ಭಾರತ ಅಧ್ಯಕ್ಷತೆಯ ಜಿ20 ಶೃಂಗಸಭೆ ಅವಿರತವಾಗಿ ಶ್ರಮಿಸಿದೆ ಎಂದು ಭಾರತದ ಜಿ-20 ಶೆರ್ಪಾ ಅಮಿತಾಬ್ ಕಾಂತ್ ಎಕ್ಸ್ ನಲ್ಲಿ ತಿಳಿಸಿದ್ದಾರೆ.