ನವದೆಹಲಿ: ಪಂಚಾಯಿತಿ ಚುನಾವಣೆಗೆ ಸ್ಪರ್ಧಿಸುವ ಅಭ್ಯರ್ಥಿಗಳಿಗೆ ಎರಡಕ್ಕಿಂತ ಹೆಚ್ಚು ಮಕ್ಕಳು ಇರಬಾರದೆಂದು 1992ರಲ್ಲಿ ಮಂಡಿಸಿರುವ ಮಸೂದೆಯೂ ಸೇರಿದಂತೆ ಒಟ್ಟು 25 ಮಸೂದೆಗಳಿಗೆ ರಾಜ್ಯಸಭೆಯಲ್ಲಿ ಇನ್ನೂ ಒಪ್ಪಿಗೆ ಮುದ್ರೆ ಬಿದ್ದಿಲ್ಲ.
ಲೋಕಸಭೆಯು ವಿಸರ್ಜನೆಯಾದಾಗಷ್ಟೇ ಅಲ್ಲಿ ಮಂಡಿಸಿರುವ ಮಸೂದೆಗಳ ಅಂಗೀಕಾರಕ್ಕೆ ವಿಳಂಬವಾಗುತ್ತದೆ.
ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಮನೆ ಬಾಡಿಗೆಗೆ ಮಿತಿಹೇರಿಕೆ, ಮನೆಗಳ ದುರಸ್ತಿ ಹಾಗೂ ಬಾಡಿಗೆದಾರರ ಹಿತರಕ್ಷಣೆಗೆ ಸಂಬಂಧಿಸಿ ದೆಹಲಿ ಬಾಡಿಗೆ (ತಿದ್ದುಪಡಿ) ಮಸೂದೆ, ಭಾರತೀಯ ಟೆಲಿಕಾಂ ನಿಯಂತ್ರಣ ಪ್ರಾಧಿಕಾರ (ಟ್ರಾಯ್) ತಿದ್ದುಪಡಿ ಮಸೂದೆಗೆ ಮೇಲ್ಮನೆಯಲ್ಲಿ ಅಂಗೀಕಾರ ನೀಡಿಲ್ಲ ಎಂದು ರಾಜ್ಯಸಭೆಯ ಪ್ರಕಟಣೆ ತಿಳಿಸಿದೆ.
ಸಂವಿಧಾನ (79ನೇ ತಿದ್ದುಪಡಿ) ಮಸೂದೆಯು ಮೇಲ್ಮನೆಯಲ್ಲಿ ಅಂಗೀಕಾರಕ್ಕೆ ದೀರ್ಘಕಾಲದಿಂದ ಕಾದು ಕುಳಿತಿದೆ. ಪಂಚಾಯಿತಿ ಚುನಾವಣೆಗೆ ಸ್ಪರ್ಧಿಸುವ ಅಭ್ಯರ್ಥಿಗಳಿಗೆ ಎರಡಕ್ಕಿಂತ ಹೆಚ್ಚು ಮಕ್ಕಳು ಇರಬಾರದು ಎಂದು ಇದರಲ್ಲಿ ಪ್ರಸ್ತಾಪಿಸಲಾಗಿದೆ.
ಈ ಮಸೂದೆ ಅಂಗೀಕಾರಕ್ಕೆ ವಿಳಂಬವಾಗಿರುವ ಬಗ್ಗೆ 2005ರಲ್ಲಿ ಸಮಾಜವಾದಿ ಪಕ್ಷದ ನಾಯಕ ಅಖಿಲೇಶ್ ಯಾದವ್ ಅವರು ಕೇಂದ್ರ ಸರ್ಕಾರಕ್ಕೆ ಪ್ರಶ್ನಿಸಿದ್ದರು. 'ಪಕ್ಷಗಳ ನಡುವೆ ಒಮ್ಮತದ ಕೊರತೆಯಿಂದ ಅಂಗೀಕಾರ ವಿಳಂಬವಾಗಿದೆ' ಎಂದು ಸರ್ಕಾರ ಲಿಖಿತ ಉತ್ತರದಲ್ಲಿ ತಿಳಿಸಿತ್ತು.
ಪುರಸಭೆಗಳ (ನಿಗದಿಪಡಿಸಿದ ಪ್ರದೇಶ ವಿಸ್ತರಣೆ) ಮಸೂದೆ, ಬೀಜ ಮಸೂದೆ, ಭಾರತೀಯ ವೈದ್ಯಕೀಯ ಮತ್ತು ಹೋಮಿಯೋಪತಿ ಫಾರ್ಮಸಿ ಮಸೂದೆ, ಗಣಿ ಮತ್ತು ಖನಿಜಗಳ (ತಿದ್ದುಪಡಿ) ಮಸೂದೆ, ಅಂತರರಾಜ್ಯ ವಲಸೆ ಕಾರ್ಮಿಕರ (ಉದ್ಯೋಗ ನಿಯಂತ್ರಣ ಹಾಗೂ ಸೇವಾ ಷರತ್ತುಗಳು) ಮಸೂದೆಗೆ ಅಂಕಿತ ಬಿದ್ದಿಲ್ಲ.
ತಮಿಳುನಾಡು ವಿಧಾನ ಪರಿಷತ್ (ರದ್ದಾಗಿರುವುದು) ಮಸೂದೆ, ಕಟ್ಟಡ ಹಾಗೂ ಇತರೇ ನಿರ್ಮಾಣ ಕಾರ್ಮಿಕರಿಗೆ ಸಂಬಂಧಿಸಿದ (ತಿದ್ದುಪಡಿ) ಮಸೂದೆ, ಉದ್ಯೋಗ ವಿನಿಮಯ ಕೇಂದ್ರಗಳು (ಖಾಲಿ ಹುದ್ದೆಗಳ ಕಡ್ಡಾಯ ಅಧಿಸೂಚನೆ) ತಿದ್ದುಪಡಿ ಮಸೂದೆ, ರಾಜಸ್ಥಾನ ವಿಧಾನ ಪರಿಷತ್ ಮಸೂದೆ, ನೋಂದಣಿ (ತಿದ್ದುಪಡಿ) ಮಸೂದೆಗೆ ಇನ್ನೂ ಅಂಗೀಕಾರ ಸಿಕ್ಕಿಲ್ಲ.
ಇತ್ತೀಚೆಗೆ ಮುಕ್ತಾಯಗೊಂಡ ಮುಂಗಾರು ಅಧಿವೇಶನದಲ್ಲಿ ಸರ್ಕಾರ ಮಂಡಿಸಿರುವ ರದ್ದತಿ ಮತ್ತು ತಿದ್ದುಪಡಿ ಮಸೂದೆ, ಅಂಚೆ ಕಚೇರಿ ಮಸೂದೆ, ಮುಖ್ಯ ಚುನಾವಣಾ ಆಯುಕ್ತರು ಮತ್ತು ಚುನಾವಣಾ ಆಯುಕ್ತರು (ನೇಮಕಾತಿ, ಕರ್ತವ್ಯದ ನಿಬಂಧನೆಗಳು ಮತ್ತು ಅಧಿಕಾರಾವಧಿ) ಮಸೂದೆಗಳು ರಾಜ್ಯಸಭೆಯಲ್ಲಿ ಅಂಗೀಕಾರ ಪಡೆದಿಲ್ಲ.