ಉಪ್ಪಳ: ಕೊಂಡೆವೂರು ಶ್ರೀ ನಿತ್ಯಾನಂದ ಯೋಗಾಶ್ರಮದ ಶ್ರೀ ಯೋಗಾನಂದ ಸರಸ್ವತೀ ಸ್ವಾಮೀಜಿ ಅವರು ಶ್ರೀಮಠದಲ್ಲಿ ಕೈಗೊಳ್ಳುತ್ತಿರುವ 20ನೇ ವರ್ಷದ ಚಾತುರ್ಮಾಸ್ಯ ಕಾರ್ಯಕ್ರಮ ಸೆ. 29ರಂದು ಸಂಪನ್ನಗೊಳ್ಳಲಿದೆ.
ಕಾರ್ಯಕ್ರಮದ ಅಂಗವಾಗಿ ಶ್ರೀಮಠದಲ್ಲಿ 48ತಾಸುಗಳ ಅಖಂಡ ಭಜನಾ ಕಾರ್ಯಕ್ರಮ ಮಂಗಳವಾರ ಆರಂಭಗೊಂಡಿದ್ದು, ಸೆ. 28ರಂದು ಸೂರ್ಯಾಸ್ತದ ವರೆಗೆ ನಡೆಯಲಿದೆ. ಸಂಜೆ 7ಕ್ಕೆ ನಡೆಯುವ ಸಮಾರೋಪ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಉಪ್ಪಳದ ಖ್ಯಾತ ವೈದ್ಯ ಡಾ. ಶ್ರೀಧರ ಭಟ್ ಅಧ್ಯಕ್ಷತೆ ವಹಿಸುವರು. ಶ್ರೀ ಯೋಗಾನಂದ ಸರಸ್ವತೀ ಸ್ವಾಮೀಜಿ ಆಶೀರ್ವಚನ ನೀಡುವರು. ಹಿರಿಯ ಧಾರ್ಮಿಕ ಮುಖಂಡ ಕಯ್ಯೂರು ನಾರಾಯಣ ಭಟ್, ವಿಧಾನಪರಿಷತ್ ಮಾಜಿ ಸದಸ್ಯ ಮೋನಪ್ಪ ಭಂಡಾರಿ, ಪ್ರಗತಿಪರ ಕೃಷಿಕ ದಾಮೋದರ ಉಬರಳೆ, ಉದ್ಯಮಿ ಶ್ರೀಧರ ಶೆಟ್ಟಿ ಮುಟ್ಟ, ಶಶಿಧರ ಶೆಟ್ಟಿ ಗ್ರಾಮ ಚಾವಡಿ, ಉದ್ಯಮಿಗಳಾದ ಚಂದ್ರಹಾಸ ಶೆಟ್ಟಿ ಕುಳೂರುಕನ್ಯಾನ, ಉಪ್ಪಳದ ಯು.ಎಂ. ಭಾಸ್ಕರ್, ರಘು ಸಿ. ಚೆರುಗೋಳಿ ಮುಖ್ಯ ಅತಿಥಿಗಳಾಗಿ ಭಾಗವಹಿಸುವರು.
29ರಂದು ಬೆಳಗ್ಗೆ 5.30ರಿಂದ ಸಾಮೂಹಿಕ ಶ್ರೀ ವಿಷ್ಣುಸಹಸ್ರನಾಮ ಪಾರಾಯಣ, ಶ್ರೀಮಠದ ನಕ್ಷತ್ರವನದ ಪುಷ್ಕರಿಣಿಯಲ್ಲಿ ಶ್ರೀಗಳಿಂದ ಮೃತ್ತಿಕಾ ವಿಸರ್ಜನೆ, ಮಹಾಪೂಜೆಯೊಂದಿಗೆ ಶ್ರೀಗಳಿಂದ ಮಂಗಲಮಂತ್ರಕ್ಷತೆ ವಿತರಣೆ ನಡೆಯುವುದು.