ಬೆಂಗಳೂರು: ಕಾವೇರಿ ನದಿ ನೀರಿನ ಹೋರಾಟ ಮಂಡ್ಯ, ಮೈಸೂರು, ಬೆಂಗಳೂರು ನಂತರ ಇಡೀ ಕರ್ನಾಟಕದಾದ್ಯಂತ ವ್ಯಾಪಿಸುತ್ತಿದೆ. ಇದೇ ಸೆಪ್ಟೆಂಬರ್ 26ರಂದು ಮಂಗಳವಾರ ಬೆಂಗಳೂರು ಬಂದ್ ಗೆ ಕರೆ ನೀಡಿದ್ದರೆ ಸೆಪ್ಟೆಂಬರ್ 29ರಂದು ಅಖಂಡ ಕರ್ನಾಟಕ ಬಂದ್ ಗೆ ಕನ್ನಡ ಪರ ಹೋರಾಟಗಾರ ವಾಟಾಳ್ ನಾಗರಾಜ್ ಘೋಷಿಸಿದ್ದಾರೆ.
ಇಂದು ಬೆಂಗಳೂರಿನಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಇದು ಕನ್ನಡ ಒಕ್ಕೂಟ ಮಾಡುತ್ತಿರುವ ಬಂದ್. ಹೀಗಾಗಿ ಅಖಂಡ ಕರ್ನಾಟ ಬಂದ್ ಇರಲಿದೆ. ಸೆಪ್ಟೆಂಬರ್ 29ರಂದು ಅಖಂಡ ಕರ್ನಾಟಕ ಬಂದ್ ಗೆ ಯೋಜನೆ ಮಾಡಿದ್ದೇವೆ ಎಂದು ತಿಳಿಸಿದರು.
ಸೋಮವಾರ ಸಭೆ, ರೂಪುರೇಷೆ: ಸೋಮವಾರ ನಡೆಯಲಿರುವ ಸಭೆಯಲ್ಲಿ ಈ ಬಗ್ಗೆ ಸಂಪೂರ್ಣ ತೀರ್ಮಾನಕ್ಕೆ ಬರುತ್ತೇವೆ. ಸೆಪ್ಟೆಂಬರ್ 29ರಂದು ಕನ್ನಡ ಒಕ್ಕೂಟದ ಆಶ್ರಯದಲ್ಲಿ ಎಲ್ಲಾ ಕನ್ನಡಪರ ಸಂಘಟನೆಗಳು, ರೈತ ಸಂಘಟನೆಗಳು, ಸಾಹಿತಿಗಳು, ವ್ಯಾಪಾರಿಗಳು ಎಲ್ಲರೂ ಇದಕ್ಕೆ ಬೆಂಬಲ ನೀಡಿ ಸಹಕರಿಸಬೇಕು ಎಂದಿದ್ದಾರೆ.
ಗೊಂದಲದಲ್ಲಿ ಕನ್ನಡ ಸಂಘಟನೆಗಳು, ಜನರು: ಈಗಾಗಲೇ ಬೆಂಗಳೂರು ಬಂದ್ ಗೆ ಕರೆ ನೀಡಿರುವ ವಿವಿಧ ಸಂಘಟನೆಗಳು ಸೆಪ್ಟೆಂಬರ್ 29ಕ್ಕೆ ಕರ್ನಾಟಕ ಬಂದ್ ಗೆ ಈಗ ಕರೆ ನೀಡಿರುವುದು ಜನರಲ್ಲಿ ಸಾಕಷ್ಟು ಗೊಂದಲ, ಸಿಟ್ಟು, ಬೇಸರ ತಂದಿದೆ. ಒಂದೇ ವಾರ ಎರಡು ಬಂದ್ ಹೀಗಾದರೆ ಸಾಮಾನ್ಯ ಜನತೆಯ ಜೀವನಕ್ಕೆ ಕಷ್ಟವಾಗುತ್ತದೆ ಎಂದು ಹಲವರು ಅಸಮಾಧಾನ ಹೊರಹಾಕಿದ್ದು ಈ ಹಿನ್ನೆಲೆಯಲ್ಲಿ ರೈತ ಸಂಘದ ಕುಬಣೂರು ಶಾಂತಕುಮಾರ್ ನೇತೃತ್ವದಲ್ಲಿ ಬಂದ್ ಬಗ್ಗೆ ಇಂದು ಬೆಂಗಳೂರಿನಲ್ಲಿ ಸಭೆ ನಡೆಸಿ ತೀರ್ಮಾನ ಕೈಗೊಳ್ಳಲಿದ್ದಾರೆ.
ಬೆಂಗಳೂರು ಬಂದ್ಗೆ KSRTC ಸ್ಟಾಫ್ ಆ್ಯಂಡ್ ವರ್ಕರ್ಸ್ ಫೆಡರೇಶನ್, ಖಾಸಗಿ ಬಸ್ಸುಗಳ ಒಕ್ಕೂಟ ಬೆಂಬಲ: ಬೆಂಗಳೂರು ಬಂದ್ಗೆ ನಮ್ಮ ಸಂಪೂರ್ಣ ಬೆಂಬಲ ಇರುತ್ತೆ. ಸಾರಿಗೆ ಬಸ್ ರೋಡ್ಗೆ ಇಳಿಯುವುದಿಲ್ಲ ಎಂದು ಕೆಎಸ್ಆರ್ಟಿಸಿ ಸ್ಟಾಫ್ ಆ್ಯಂಡ್ ವರ್ಕರ್ಸ್ ಫೆಡರೇಶನ್ ಅಧ್ಯಕ್ಷ ಅನಂತ್ ಸುಬ್ಬರಾವ್ ಹೇಳಿದ್ದಾರೆ.
ಮಂಗಳವಾರ ಬೆಂಗಳೂರು ಬಂದ್ಗೆ ಖಾಸಗಿ ಸಾರಿಗೆ ಸಂಘಟನೆಗಳು ಕೂಡ ಬೆಂಬಲ ವ್ಯಕ್ತಪಡಿಸಿವೆ. ನೆಲ, ಜಲ ಹಾಗೂ ಭಾಷೆ ವಿಚಾರದಲ್ಲಿ ನಮ್ಮ ಸಂಪೂರ್ಣ ಬೆಂಬಲವಿದೆ ಎಂದು ಖಾಸಗಿ ಸಾರಿಗೆ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ನಟರಾಜ್ ಶರ್ಮಾ ಹೇಳಿದರು.
ಸೆ.26 ರಂದು ಮಂಡ್ಯ ಜಿಲ್ಲೆಯ ಕೆಆರ್ಪೇಟೆ ಪಟ್ಟಣ ಬಂದ್: ತಮಿಳುನಾಡಿಗೆ ನೀರು ಹರಿಸುವಂತೆ ಸುಪ್ರೀಂ ಕೋರ್ಟ್ ಆದೇಶವನ್ನು ವಿರೋಧಿಸಿ ಸೆಪ್ಟೆಂಬರ್ 26 ರಂದು ಮಂಡ್ಯ ಜಿಲ್ಲೆಯ ಆರ್ಪೇಟೆ ಬಂದ್ಗೆ ಕಾವೇರಿ ಹೋರಾಟ ಸಮಿತಿ ಹಾಗೂ ವಿವಿಧ ಸಂಘಸಂಸ್ಥೆಗಳು ಕರೆ ನೀಡಿವೆ.