HEALTH TIPS

30 ಸಾವಿರ ಮಂದಿ ಪ್ರೇಕ್ಷಕರ ಸಾಮರ್ಥ್ಯದ ವಾರಣಾಸಿ ಕ್ರಿಕೆಟ್ ಸ್ಟೇಡಿಯಂಗೆ ಪ್ರಧಾನಿ ಮೋದಿ ಶಂಕುಸ್ಥಾಪನೆ, ಸಚಿನ್ ವಿಶೇಷ ಉಡುಗೊರೆ

     ವಾರಣಾಸಿ: 30 ಸಾವಿರ ಮಂದಿ ಪ್ರೇಕ್ಷಕರ ಸಾಮರ್ಥ್ಯದ ವಾರಣಾಸಿ ಕ್ರಿಕೆಟ್ ಸ್ಟೇಡಿಯಂಗೆ ಶನಿವಾರ ಪ್ರಧಾನಿ ನರೇಂದ್ರ ಮೋದಿ ಶಂಕುಸ್ಥಾಪನೆ ನೆರವೇರಿಸಿದರು.

      ಪ್ರಧಾನಿ ನರೇಂದ್ರ ಮೋದಿ ಅವರು ಇಂದು ತಮ್ಮ ಲೋಕಸಭಾ ಕ್ಷೇತ್ರ ವಾರಣಾಸಿಯಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣಕ್ಕೆ ಶಂಕುಸ್ಥಾಪನೆ ನೆರವೇರಿಸಿದರು. ಈ ಸಂದರ್ಭದಲ್ಲಿ ಭಾರತದ ಮಾಜಿ ಕ್ರಿಕೆಟಿಗರಾದ ಸಚಿನ್ ತೆಂಡೂಲ್ಕರ್ ಮತ್ತು ರವಿಶಾಸ್ತ್ರಿ, ಬಿಸಿಸಿಐ ಅಧ್ಯಕ್ಷ ರೋಜರ್ ಬಿನ್ನಿ, ಉಪಾಧ್ಯಕ್ಷ ರಾಜೀವ್ ಶುಕ್ಲಾ ಮತ್ತು ಕಾರ್ಯದರ್ಶಿ ಜಯ್ ಶಾ ಉಪಸ್ಥಿತರಿದ್ದರು. ಸಮಾರಂಭದಲ್ಲಿ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಕೂಡ ಭಾಗವಹಿಸಿದ್ದರು.

     ಸ್ಟೇಡಿಯಂಗಾಗಿ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳಲು 121 ಕೋಟಿ ಖರ್ಚು ಮಾಡಿದೆ ಎಂದು ಉತ್ತರ ಪ್ರದೇಶ ಸರ್ಕಾರ ಹೇಳಿದೆ. ಅಂತೆಯೇ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಅದರ ನಿರ್ಮಾಣಕ್ಕೆ 330 ಕೋಟಿ ರೂ ವೆಚ್ಚ ಮಾಡಲಿದೆ. ವಾರಣಾಸಿಯ ರಜತಲಾಬ್ ಪ್ರದೇಶದ ರಿಂಗ್ ರೋಡ್ ಬಳಿ ನಿರ್ಮಾಣವಾಗಲಿರುವ ಕ್ರೀಡಾಂಗಣವು ಡಿಸೆಂಬರ್ 2025 ರ ವೇಳೆಗೆ ಸಿದ್ಧವಾಗುವ ಸಾಧ್ಯತೆಯಿದೆ. ಕ್ರೀಡಾಂಗಣದ ಪ್ರೇಕ್ಷಕರ ಗ್ಯಾಲರಿಯು ವಾರಣಾಸಿಯ ಘಾಟ್‌ಗಳ ಮೆಟ್ಟಿಲುಗಳನ್ನು ಹೋಲುತ್ತದೆ. ಕಾನ್ಪುರ ಮತ್ತು ಲಕ್ನೋ ನಂತರ ಉತ್ತರ ಪ್ರದೇಶದ ಮೂರನೇ ಅಂತಾರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂ ಇದಾಗಿದೆ. 

     ಪ್ರಧಾನಿ ಕಚೇರಿಯ ಪ್ರಕಟಣೆಯ ಪ್ರಕಾರ, ಕ್ರೀಡಾಂಗಣವನ್ನು 30 ಎಕರೆಗೂ ಹೆಚ್ಚು ಪ್ರದೇಶದಲ್ಲಿ ಸುಮಾರು 450 ಕೋಟಿ ರೂ.ಗಳ ವೆಚ್ಚದಲ್ಲಿ ಅಭಿವೃದ್ಧಿಪಡಿಸಲಾಗುವುದು. ಇದರ ವಿನ್ಯಾಸವು ಶಿವನಿಂದ ಸ್ಫೂರ್ತಿ ಪಡೆದಿದ್ದು, ಅರ್ಧಚಂದ್ರಾಕಾರದ ಛಾವಣಿಯ ಕವರ್ ಗಳು, ತ್ರಿಶೂಲ ಆಕಾರದ ಫ್ಲಡ್-ಲೈಟ್ ಗಳು, ಘಾಟ್ ಮೆಟ್ಟಿಲುಗಳ ಆಧಾರಿತ ಆಸನಗಳು, ಮುಂಭಾಗದಲ್ಲಿ ಬಿಲ್ವಿಪಾತ್ರ ಆಕಾರದ ಲೋಹದ ಹಾಳೆಗಳನ್ನು ಹೊಂದಿದೆ. ಈ ಕ್ರೀಡಾಂಗಣವು 30,000 ಪ್ರೇಕ್ಷಕರ ಸಾಮರ್ಥ್ಯವನ್ನು ಹೊಂದಿರುತ್ತದೆ ಎಂದು ಹೇಳಿದೆ.

      ಆಧುನಿಕ ವಿಶ್ವ ದರ್ಜೆಯ ಕ್ರೀಡಾ ಮೂಲಸೌಕರ್ಯಗಳನ್ನು ಅಭಿವೃದ್ಧಿಪಡಿಸುವ ಪ್ರಧಾನಿಯವರ ದೃಷ್ಟಿಕೋನವನ್ನು ಸಾಕಾರಗೊಳಿಸುವ ನಿಟ್ಟಿನಲ್ಲಿ ವಾರಣಾಸಿಯ ಅಂತರರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣವು ಒಂದು ಹೆಜ್ಜೆಯಾಗಿದೆ. ಆಧುನಿಕ ಅಂತಾರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣವನ್ನು ವಾರಣಾಸಿಯ ಗಂಜಾರಿ, ರಜತಲಾಬ್ ನಲ್ಲಿ ನಿರ್ಮಿಸಲಾಗುವುದು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

       ಸಚಿನ್ ವಿಶೇಷ ಉಡುಗೊರೆ
      ಇದಕ್ಕೂ ಮುನ್ನ ಸಚಿನ್ ತೆಂಡೂಲ್ಕರ್ ಮತ್ತು ರವಿಶಾಸ್ತ್ರಿ ವಾರಣಾಸಿಯ ಪ್ರಸಿದ್ಧ ಕಾಶಿ ವಿಶ್ವನಾಥ ದೇವಸ್ಥಾನಕ್ಕೆ ಭೇಟಿ ನೀಡಿದರು. ಈ ಭೇಟಿಗೆ ಮುಂಚಿತವಾಗಿ ಪಿಎಂ ನರೇಂದ್ರ ಮೋದಿ ಅವರು ಟ್ವಿಟರ್ ನಲ್ಲಿ ಪೋಸ್ಟ್ ಹಂಚಿಕೊಂಡಿದ್ದರು ಮತ್ತು ಈ ಯೋಜನೆಗಳು ವಾರಣಾಸಿ ಮತ್ತು ಇಡೀ ಉತ್ತರ ಪ್ರದೇಶದ ಅಭಿವೃದ್ಧಿಯನ್ನು ವೇಗಗೊಳಿಸುತ್ತವೆ ಎಂದು ಹೇಳಿದ್ದಾರೆ. ಅಂತೆಯೇ ಸಮಾರಂಭದಲ್ಲಿ ಸಚಿನ್ ತೆಂಡೂಲ್ಕರ್ ಅವರು ಪ್ರಧಾನಿ ಮೋದಿಯವರೊಂದಿಗೆ ಹೃದಯಸ್ಪರ್ಶಿ ಕ್ಷಣವನ್ನು ಹಂಚಿಕೊಂಡರು.


       ಭಾರತದ ಶ್ರೇಷ್ಠ ಕ್ರಿಕೆಟಿಗ ಸಚಿನ್ ತೆಂಡೂಲ್ಕರ್ ಪ್ರಧಾನಿ ಮೋದಿಗೆ ಟೀಮ್ ಇಂಡಿಯಾ ಜೆರ್ಸಿಯನ್ನು ಉಡುಗೊರೆಯಾಗಿ ನೀಡಿದರು, ಟೀ ಶರ್ಟ್ ನ ಹಿಂಭಾಗದಲ್ಲಿ "ನಮೋ" ಎಂದು ಬರೆಯಲಾಗಿದೆ. ಅದರೊಂದಿಗೆ ಐಕಾನ್ ಸಂಖ್ಯೆ 1. ಶಾ ಮತ್ತು ಬಿನ್ನಿ ಕೂಡ ಪಿಎಂ ಮೋದಿಗೆ ವಿಶೇಷ ಉಡುಗೊರೆಯನ್ನು ನೀಡಿದರು. ಕಾರ್ಯಕ್ರಮದ ವೇಳೆ ಬಿಸಿಸಿಐ ಅಧಿಕಾರಿಗಳು ಪ್ರಧಾನಿಗೆ ಸಹಿ ಮಾಡಿದ ಬ್ಯಾಟ್ ಅನ್ನು ಉಡುಗೊರೆಯಾಗಿ ನೀಡಿದರು.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries