ಕಾಸರಗೋಡು: ವಿದ್ಯಾನಗರ ಸಿವಿಲ್ ಸಟೇಶನ್‍ನಲ್ಲಿ ಕಾರ್ಯಾಚರಿಸುವ ಪ್ರಾದೇಶಿಕ ಸಾರಿಗೆ ಇಲಾಖೆ ಕಚೇರಿ(ಆರ್.ಟಿ.ಓ)ಗೆ ಕಾಸರಗೋಡು ವಿಜಿಲೆನ್ಸ್ ಅಧಿಕಾರಿಗಳು ಮಿಂಚಿನ ದಾಳಿ ನಡೆಸಿದ್ದು, ಈ ಸಂದರ್ಭ ಅನಧಿಕೃತವಾಗಿ ಸಂಗ್ರಹಿಸಿಡಲಾಗಿದ್ದ ನಗದು ಪತ್ತೆಹಚ್ಚಲಾಗಿದೆ.
ವಿಜಿಲೆನ್ಸ್ ಡಿವೈಎಸ್‍ಪಿ ವಿ.ಕೆ ವಿಶ್ವಂಭರನ್ ನೇತೃತ್ವದ ಅಧಿಕಾರಿಗಳ ತಮಡ ಕಾರ್ಯಾಚರಣೆ ನಡೆಸಿದೆ. ಈ ಸಂದರ್ಭ ಆರ್‍ಟಿಓ ಕಚೇರಿ ಸಿಬ್ಬಂದಿ ಹಾಗೂ ಏಜೆಂಟ್‍ಗಳ ನಡುವಿನ ಕಾನೂನುಬಾಹಿರ ಸಂಬಂಧ ಬಯಲಿಗೆಳೆಯಲಾಗಿದೆ. ಏಜೆಂಟ್‍ಗಳು ಆರ್‍ಟಿಓ ಅಧಿಕಾರಿಗಳಿಗೆ ನೀಡಲು ತಂದಿದ್ದಾರೆನ್ನಲಾದ 34410ರೂ. ನಗದು ವಶಪಡಿಸಿಕೊಳ್ಳಲಾಗಿದೆ. ಆರ್‍ಟಿಓ ಕಚೇರಿಯಲ್ಲಿ ವ್ಯಾಪಕ ಭ್ರಷ್ಟಚಾರ ನಡೆಯುತ್ತಿರುವುದಲ್ಲದೆ, ಕಚೇರಿಯ ದೈನಂದಿನ ಚಟುವಟಿಕೆ ಕೊನೆಗೊಳ್ಳುವ ತಾಸಿನ ಮೊದಲು ಕೆಲವು ಏಜೆಂಟ್‍ಗಳು ಕಚೇರಿಗೆ ಆಗಮಿಸಿ ಆಯಾ ದಿನದ ಹಣ ಸಲ್ಲಿಸುತ್ತಿರುವ ಬಗ್ಗೆ ಲಭಿಸಿದ ಮಾಹಿತಿಯನ್ವಯ ವಿಜಿಲೆನ್ಸ್ ದಾಳಿ ಆಯೋಜಿಸಿತ್ತು. ಆರ್‍ಟಿಓ ಸಿಬ್ಬಂದಿಯಲ್ಲಿ ಕೆಲವು ಏಜೆಂಟ್‍ಗಳ ಮೊಬೈಲ್ ನಂಬರ್ ಹೊಂದಿರುವುದನ್ನೂ ಪತ್ತೆಹಚ್ಚಲಾಗಿದೆ. ವಿಜಿಲೆನ್ಸ್ ಪೊಲೀಸರು ಈ ಬಗ್ಗೆ ಕೇಸು ದಾಖಲಿಸಿಕೊಂಡಿದ್ದಾರೆ.