ನವದೆಹಲಿ: ಜಾಗತಿಕ ಮಟ್ಟದಲ್ಲಿ ಭಾರತದ ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡುವ ಭಾಗವಾಗಿ ದೇಶದ 35 ಗ್ರಾಮಗಳಿಗೆ 'ಉತ್ತಮ ಪ್ರವಾಸಿ ಗ್ರಾಮ' ರಾಷ್ಟ್ರೀಯ ಪ್ರಶಸ್ತಿ ನೀಡಲಾಗಿದೆ.
ಜಮ್ಮು ಮತ್ತು ಕಾಶ್ಮೀರದ ದಾವರ್ ಗ್ರಾಮದಿಂದ ಹಿಡಿದು ಸಿಕ್ಕಿಂನ ಕಿತಮ್ ಹಳ್ಳಿಯವರೆಗೂ ಸುಸ್ಥಿರ ಅಭಿವೃದ್ಧಿ ಗುರಿಯ ಆಶಯದಡಿ ರಾಷ್ಟ್ರದಾದ್ಯಂತ ಈ ಪ್ರಶಸ್ತಿಗೆ ಅರ್ಜಿ ಆಹ್ವಾನಿಸಲಾಗಿತ್ತು.
ಕೇಂದ್ರ ಪ್ರವಾಸೋದ್ಯಮ ಸಚಿವಾಲಯದಿಂದ ನವದೆಹಲಿಯ ಭಾರತ ಮಂಟಪದಲ್ಲಿ ಬುಧವಾರ ನಡೆದ ವಿಶ್ವ ಪ್ರವಾಸೋದ್ಯಮ ದಿನಾಚರಣೆಯಲ್ಲಿ, ಆಯ್ಕೆಯಾದ ಎಲ್ಲಾ ಗ್ರಾಮಗಳಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು.
ದೇಶದ ಎಲ್ಲಾ ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಿಂದ ಒಟ್ಟು 715 ಅರ್ಜಿಗಳು ಸಲ್ಲಿಕೆಯಾಗಿದ್ದವು. ಪ್ರಶಸ್ತಿ ಸುತ್ತಿಗೆ 80 ಹಳ್ಳಿಗಳನ್ನು ಪರಿಗಣಿಸಲಾಯಿತು. ಈ ಪೈಕಿ 35 ಹಳ್ಳಿಗಳನ್ನು ಆಯ್ಕೆ ಮಾಡಲಾಗಿದೆ.
ಸುವರ್ಣ 5, ರಜತ 10 ಹಾಗೂ ಕಂಚು ವಿಭಾಗದಲ್ಲಿ 20 ಹಳ್ಳಿಗಳನ್ನು ಆಯ್ಕೆ ಮಾಡಲಾಗಿದೆ. ಜಮ್ಮು ಮತ್ತು ಕಾಶ್ಮೀರದ ದಿವಾರ್, ಉತ್ತರಖಂಡದ ಸರ್ಮೋಲಿ, ವಿಜೋರಾಂನ ರೀಕ್, ಕೇರಳದ ಕಾಂತಲ್ಲೂರು ಹಾಗೂ ಮಧ್ಯಪ್ರದೇಶದ ಮದ್ಲ ಗ್ರಾಮವು ಮೊದಲ ವಿಭಾಗದಲ್ಲಿ ಪ್ರಶಸ್ತಿ ಗಿಟ್ಟಿಸಿಕೊಂಡಿವೆ. ಮೂರನೇ ವಿಭಾಗದಲ್ಲಿ ಹಂಪಿಗೆ ಪ್ರಶಸ್ತಿ ಲಭಿಸಿದೆ.
ಕಲೆ, ಕರಕುಶಲ, ಪರಂಪರೆ ಹಾಗೂ ಸುಸ್ಥಿರತೆಯ ಮಾನದಂಡವನ್ನು ಪ್ರಶಸ್ತಿಗೆ ಪರಿಗಣಿಸಲಾಗಿದೆ. ಅಲ್ಲದೇ, ಹಳ್ಳಿಗಳಲ್ಲಿರುವ ಸಂಸ್ಕೃತಿ ಮತ್ತು ನೈಸರ್ಗಿಕ ಸಂಪನ್ಮೂಲ, ಆರ್ಥಿಕ, ಪರಿಸರ ಸುಸ್ಥಿರತೆ, ಆಡಳಿತ, ಪ್ರವಾಸೋದ್ಯಮಕ್ಕೆ ನೀಡಿರುವ ಆದ್ಯತೆ, ಆರೋಗ್ಯ, ಸುರಕ್ಷತೆ ಮತ್ತು ಭದ್ರತೆ ಸೇರಿದಂತೆ ಪ್ರವಾಸೋದ್ಯಮ ಅಭಿವೃದ್ಧಿ ಚಟುವಟಿಕೆಗಳನ್ನು ಮೌಲ್ಯಮಾಪನ ಮಾಡಿ ಗ್ರಾಮಗಳನ್ನು ಆಯ್ಕೆ ಮಾಡಲಾಗಿದೆ.