ಔರಂಗಾಬಾದ್ (PTI): ಮರಾಠರ ಮೀಸಲಾತಿಗೆ ಆಗ್ರಹಿಸಿ ಮಹಾರಾಷ್ಟ್ರದ ಜಾಲನಾದಲ್ಲಿ ನಡೆದ ಪ್ರತಿಭಟನೆ ಶುಕ್ರವಾರ ಹಿಂಸಾಚಾರಕ್ಕೆ ತಿರುಗಿ, ಸುಮಾರು 40 ಮಂದಿ ಪೊಲೀಸರು ಸೇರಿ ಹಲವು ಮಂದಿ ಗಾಯಗೊಂಡಿದ್ದಾರೆ. ಶನಿವಾರ ಪರಿಸ್ಥಿತಿ ನಿಯಂತ್ರಣದಲ್ಲಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಹಿಂಸಾಚಾರಕ್ಕೆ ಸಂಬಂಧಿಸಿ 360 ಜನರ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಹಿಂಸಾಚಾರದಲ್ಲಿ ಭಾಗಿಯಾಗಿದ್ದವರಲ್ಲಿ 16 ಮಂದಿಯನ್ನು ಗುರುತಿಸಲಾಗಿದೆ. ಆದರೆ, ಈವರೆಗೆ ಯಾರನ್ನೂ ಬಂಧಿಸಿಲ್ಲ ಎಂದು ಅವರು ತಿಳಿಸಿದ್ದಾರೆ.
ಔರಂಗಾಬಾದ್‌ನಿಂದ 75 ಕಿ.ಮೀ ದೂರದಲ್ಲಿರುವ ಜಾಲನಾ ಜಿಲ್ಲೆಯ ಅಂಬಾದ ತಾಲ್ಲೂಕಿನ ಧುಲೆ-ಸೋಲಾಪುರ ರಸ್ತೆಯಲ್ಲಿರುವ ಅಂತರವಾಲಿ ಸಾರಥಿ ಗ್ರಾಮದಲ್ಲಿ ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿದಾಗ ಗುಂಪನ್ನು ಚದುರಿಸಲು ಪೊಲೀಸರು ಲಾಠಿ ಪ್ರಹಾರ ನಡೆಸಿ, ಅಶ್ರುವಾಯು ಶೆಲ್‌ಗಳನ್ನು ಸಿಡಿಸಿದ್ದರು.
ಶುಕ್ರವಾರ ನಡೆದಿರುವ ಈ ಘಟನೆಗಳ ಕುರಿತು ರಾಜ್ಯದಲ್ಲಿನ ಶಿವಸೇನೆ-ಬಿಜೆಪಿ ನೆತೃತ್ವದ ರಾಜ್ಯ ಸರ್ಕಾರದ ವಿರುದ್ಧ ಎನ್‌ಸಿಪಿ, ಉದ್ಧವ್ ಠಾಕ್ರೆ ಬಣದ ಶಿವಸೇನಾ ಸೇರಿ ವಿರೋಧ ಪಕ್ಷದ ನಾಯಕರು ಕಿಡಿಕಾರಿದ್ದಾರೆ.
ಪೊಲೀಸ್ ಲಾಠಿ ಪ್ರಹಾರ ಖಂಡಿಸಿದ ವಿಪಕ್ಷಗಳು, ರಾಜಕೀಯ ಪ್ರಾಬಲ್ಯ ಹೊಂದಿರುವ ಮರಾಠ ಸಮುದಾಯಕ್ಕೆ ಮೀಸಲಾತಿ ನೀಡಲು ರಾಜ್ಯ ಸರ್ಕಾರ ಮುಂದಾಗಬೇಕು ಎಂದು ಒತ್ತಾಯಿಸಿವೆ.