ಬೆಂಗಳೂರು: ಭಾರತದ ಹೆಮ್ಮೆಯ ಬಾಹ್ಯಾಕಾಶ ಸಂಸ್ಥೆ ಇಸ್ರೋ ತಾನಂದುಕೊಂಡಂತೆಯೇ ಚಂದ್ರಯಾನ 3 ಯೋಜನೆಯನ್ನೂ ಶೇ.100ರಷ್ಟು ಯಶಸ್ಸಿನೊಂದಿಗೆ ಪೂರ್ಣಗೊಳಿಸಿದ್ದು, ಇದೀಗ ಚಂದ್ರ ಮೇಲೆ ಇಳಿದಿರುವ ಪ್ರಗ್ಯಾನ್ ರೋವರ್, ವಿಕ್ರಮ್ ಲ್ಯಾಂಡರ್ ನಿದ್ರೆಗೆ ಜಾರುವ ಕಾಲ ಸನ್ನಿಹಿತವಾಗಿದೆ ಎಂದು ಇಸ್ರೋ ಮಾಹಿತಿ ನೀಡಿದೆ.
ಚಂದ್ರಯಾನ 3 ರ ರೋವರ್ ಮತ್ತು ಲ್ಯಾಂಡರ್ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದು, ಈಗಾಗಲೇ ರೋವರ್ ಮತ್ತು ಲ್ಯಾಂಡರ್ ಚಂದ್ರನ ಕುರಿತ ಸಾಕಷ್ಟು ನಿಗೂಢ ಅಂಶಗಳ ಮೇಲೆ ಬೆಳಕು ಚೆಲ್ಲಿವೆ. ಚಂದ್ರನ ಮೇಲ್ಮೈ ವಾತಾವರಣದ ತಾಪಮಾನ, ಸಲ್ಫರ್ ಇರುವಿಕೆ, ಚಂದ್ರನೊಳಗಿನ ಕಂಪನಗಳು ಸೇರಿದಂತೆ ಹಲವು ವಿಚಾರಗಳ ಬಗ್ಗೆ ಬೆಳಕು ಚೆಲ್ಲಿದೆ. ಇದೀಗ ಚಂದ್ರನಲ್ಲಿ ರಾತ್ರಿ ಆವರಿಸುತ್ತಿದ್ದು ಹೀಗಾಗಿ ಇಸ್ರೋ ತನ್ನ ಪ್ರಗ್ಯಾನ್ ರೋವರ್ ಮತ್ತು ವಿಕ್ರಮ್ ಲ್ಯಾಂಡರ್ ಗಳನ್ನು ಸ್ಲೀಪಿಂಗ್ ಮೋಡ್ ಅಂದರೆ ನಿದ್ರೆಯಲ್ಲಿರಿಸಲು ಸಿದ್ಧತೆ ನಡೆಸಿದೆ.
ಅಂದಹಾಗೆ ಚಂದ್ರನಲ್ಲಿ ಒಂದು ರಾತ್ರಿ ಎಂದರೆ ಭೂಮಿಯಲ್ಲಿ ಸುಮಾರು 14 ದಿನಗಳು... ಇಷ್ಟು ದಿನ ಇದ್ದ ಹಗಲು ಸುಮಾರು 14 ದಿನಗಳ ಕಾಲ ಇತ್ತು. ಹೀಗಾಗಿ ಈ 14 ದಿನಗಳ ಕಾಲ ರೋವರ್ ಮತ್ತು ಲ್ಯಾಂಡರ್ ನಿರಂತರವಾಗಿ ಕಾರ್ಯ ನಿರ್ವಹಿಸಿತ್ತು. ಇದೀಗ ಚಂದ್ರನಲ್ಲಿ ರಾತ್ರಿಯಾಗುತ್ತಿದ್ದು, ಈ ವೇಳೆ ಚಂದ್ರನ ಮೇಲೆ ಸೂರ್ಯನ ಬೆಳಕು ಬೀಳುವುದಿಲ್ಲ. ಹೀಗಾಗಿ ಆ ಕಾರ್ಗತ್ತಲ್ಲಿನಲ್ಲಿ ಕೆಲಸ ಮಾಡುವುದು ಅಸಾಧ್ಯ. ಇದೇ ಕಾರಣಕ್ಕೆ ಇಸ್ರೋ ರೋವರ್ ಮತ್ತು ಲ್ಯಾಂಡರ್ ಗಳನ್ನು ನಿದ್ರೆಗೆ ಜಾರಿಸಲು ಮುಂದಾಗಿದೆ. ಈ ಬಗ್ಗೆ ಸ್ವತಃ ಇಸ್ರೋ ಅಧ್ಯಕ್ಷ ಎಸ್ ಸೋಮನಾಥ್ ಶನಿವಾರ ಮಾಹಿತಿ ನೀಡಿದ್ದು, ಚಂದ್ರನ ಮೇಲಿನ ರಾತ್ರಿಯನ್ನು ತಡೆದುಕೊಳ್ಳಲು ಅವುಗಳನ್ನು ಶೀಘ್ರದಲ್ಲೇ "ನಿದ್ರೆ" ಮಾಡಿಸಲಾಗುವುದು ಎಂದು ಹೇಳಿದ್ದಾರೆ.
ಅಲ್ಲದೆ ಲ್ಯಾಂಡರ್ ಮತ್ತು ರೋವರ್, ಕ್ರಮವಾಗಿ 'ವಿಕ್ರಮ್' ಮತ್ತು 'ಪ್ರಜ್ಞಾನ್' ಇನ್ನೂ ಕಾರ್ಯನಿರ್ವಹಿಸುತ್ತಿವೆ ಮತ್ತು "ವೈಜ್ಞಾನಿಕ ಉಪಕರಣಗಳನ್ನು ಹೊಂದಿರುವ ನಮ್ಮ ತಂಡವು ಈಗ ಸಾಕಷ್ಟು ಕೆಲಸ ಮಾಡುತ್ತಿದೆ ಎಂದು ಹೇಳಿದ್ದಾರೆ.
100 ಮೀಟರ್‌ಗಳಷ್ಟು ಚಲಿಸಿದ ಪ್ರಗ್ಯಾನ್ ರೋವರ್
ಇದೇ ವೇಳೆ ಮತ್ತೊಂದು ಮಹತ್ವದ ಮಾಹಿತಿ ಹಂಚಿಕೊಂಡಿರುವ ಸೋಮನಾಥ್ ಅವರು, ಲ್ಯಾಂಡರ್ ನಿಂದ ಪ್ರಗ್ಯಾನ್ ರೋವರ್ ಸುಮಾರು 100 ಮೀಟರ್ ಗಳಷ್ಟು ದೂರ ಕ್ರಮಿಸಿದೆ ಎಂದು ಹೇಳಿದ್ದಾರೆ. 'ಒಳ್ಳೆಯ ಸುದ್ದಿ ಏನೆಂದರೆ, ರೋವರ್ ಲ್ಯಾಂಡರ್‌ನಿಂದ ಸುಮಾರು 100 ಮೀಟರ್‌ಗಳಷ್ಟು ಚಲಿಸಿದೆ ಮತ್ತು ಮುಂಬರುವ ಒಂದು ಅಥವಾ ಎರಡು ದಿನಗಳಲ್ಲಿ ಈ ಎರಡೂ ವ್ಯವಸ್ಥೆಗಳನ್ನು ನಿದ್ರಿಸುವ ಪ್ರಕ್ರಿಯೆಯನ್ನು ನಾವು ಪ್ರಾರಂಭಿಸಲಿದ್ದೇವೆ. ಏಕೆಂದರೆ ಅವು ರಾತ್ರಿಯನ್ನು ತಡೆದುಕೊಳ್ಳಬೇಕು" ಎಂದು ಅವರು ಹೇಳಿದರು.
ಪ್ರಸ್ತುತ ರೋವರ್ ಮತ್ತು ಲ್ಯಾಂಡರ್ ಗಳು ನಿದ್ರೆಗೆ ಜಾರಲಿದ್ದು ಆ ಬಳಿಕ ಮುಂದಿನ ಕಥೆ ಏನು ಎಂಬ ಪ್ರಶ್ನೆ ಮೂಡುತ್ತದೆ. ಅದಕ್ಕೂ ಇಸ್ರೋ ಅಧ್ಯಕ್ಷ ಸೋಮನಾಥ್ ಉತ್ತರ ನೀಡಿದ್ದು, 14 ದಿನಗಳ ರಾತ್ರಿ ಕಳೆದ ಬಳಿಕ ಮತ್ತೆ 15ನೇ ದಿನ ಚಂದ್ರನಲ್ಲಿ ಬೆಳಕಾಗುತ್ತದೆ. ಆಗ ಪ್ರಗ್ಯಾನ್ ರೋವರ್ ಮತ್ತು ವಿಕ್ರಮ್ ಲ್ಯಾಂಡರ್ ಗೆ ಸೂರ್ಯ ಬಿಸಿಲು ತಾಗಿ ಅವುಗಳಲ್ಲಿನ ಸೋಲಾರ್ ಫಲಕಗಳು ಚಾಲ್ತಿಗೊಳ್ಳಬಹುದು. ಒಂದು ವೇಳೆ ಸೋಲಾರ್ ಫಲಕಗಳು ಚಾಲ್ತಿಗೊಂಡು ಇಂಧನ ಭರ್ತಿಯಾದರೆ ಮತ್ತೆ ಎಂದಿನಂತೆ ಪ್ರಗ್ಯಾನ್ ರೋವರ್ ಮತ್ತು ವಿಕ್ರಮ್ ಲ್ಯಾಂಡರ್ ತಮ್ಮ ಕೆಲಸಗಳಲ್ಲಿ ತೊಡಗಿಕೊಳ್ಳಲಿವೆ ಎಂದು ಹೇಳಿದ್ದಾರೆ.