ಮಂಗಳೂರು: ಮಂಗಳೂರು ವಿಶ್ವವಿದ್ಯಾನಿಲಯದ 44ನೇ ಸಂಸ್ಥಪನಾ ದಿನ ಹಾಗೂ ಶಿಕ್ಷಕರ ದಿನಾಚರಣೆ ಕಾರ್ಯಕ್ರಮವನ್ನು ಮಂಗಳವಾರ ಮಂಗಳಾ ಸಭಾಂಗಣದಲ್ಲಿ ನಡೆಯಿತು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಯೋಜನಾ ಆಯೋಗದ ಮಾಜಿ ಸದಸ್ಯ ಹಾಗೂ ಮುಂಬೈ ವಿವಿ ವಿಶ್ರಾಂತ ಕುಲಪತಿ ಡಾ.ಬಾಲಚಂದ್ರ ಮುಂಗೇಕರ್ ಅವರು, ವಿಶ್ವವಿದ್ಯಾಲಯಗಳು ಜ್ಞಾನದ ಬೆಳಕನ್ನು ಜಗತ್ತಿಗೆ ಪಸರಿಸುವ ಕೇಂದ್ರಗಳಾಗಿವೆ.
ದೇಶದ ಅಭಿವೃದ್ಧಿಯಲ್ಲಿ ಆರ್ಥಿಕತೆಯ ಪಾತ್ರ ಅತ್ಯಂತ ಮಹತ್ಚವಾದುದಾಗಿದೆ. ಭಾರತ ಇಂದು ಬೆಳೆಯುತ್ತಿರುವ ರಾಷ್ಟ್ರವಾಗಿ ಗುರುತಿಸಲ್ಪಟ್ಟರೂ ಬಡತನ, ಅಸಮಾನತೆ, ನಿರುದ್ಯೋಗ, ಆರ್ಥಿಕ ಅಸಮಾನತೆಯ ಪರಿಣಾಮ ಅನೇಕ ಸವಾಲು ,ಸಮಸ್ಯೆಗಳು ಎದುರಾಗುತ್ತಿವೆ. ಆರೋಗ್ಯ ಮತ್ತು ಶೈಕ್ಷಣಿಕ ಕ್ಷೇತ್ರಗಳಿಗೆ ಸರಕಾರಗಳು ಹೆಚ್ಚಿನ ಪ್ರೋತ್ಸಾಹ ಕೊಡಬೇಕಿದೆ ಹಾಗೂ ಹೆಚ್ಚೆಚ್ಚು ಉದ್ಯೋಗಗಳು ಸೃಷ್ಟಿಯಾಗಬೇಕಿದೆ. ಇಂದು ಹೆಚ್ಚಿನ ಯಾವುದೇ ವಿಶ್ವವಿದ್ಯಾಲಯ ಗಳಲ್ಲಿಯೂ ಪ್ರಾಧ್ಯಾಪಕರ ನೇಮಕಾತಿಯಾಗುತ್ತಿಲ್ಲ ಹಾಗೂ ಖಾಸಗಿ ವಿವಿಗಳ ಪ್ರಭಾವಗಳೇ ಹೆಚ್ಚಾಗುತ್ತಿವೆ ಎಂದರು.
ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಮಂಗಳೂರು ವಿವಿ ಕುಲಪತಿ ಪ್ರೊ.ಜಯರಾಜ್ ಅಮೀನ್ ಅವರು, 1980 ರಲ್ಲಿ ಮೈಸೂರು ವಿವಿಯಿಂದ ಮುಕ್ತಗೊಂಡು ಮಂಗಳೂರು ವಿವಿಯಾಗಿ ರೂಪುಗೊಂಡಿದ್ದು,ಇದೀಗ ಶೈಕ್ಷಣಿಕವಾಗಿ ಸಾಧನೆಯೊಂದಿಗೆ ಕರ್ನಾಟಕದಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಜಾರಿಗೊಳಿಸಿದ ಪ್ರಥಮ ವಿವಿಯಾಗಿದೆ.ಮಂಗಳೂರು ವಿವಿಯು ಕ್ರೀಡಾ ನೀತಿ, ಜೆಂಡರ್ ನೀತಿ, ಸಾಂಸ್ಕೃತಿಕ ನೀತಿ ಸೇರಿದಂತೆ ಅನೇಕ ಯೋಜನೆಗಳ ಮೂಲಕ ಗಮನ ಸೆಳೆದಿದೆ ಎಂದರು.
ಕಾರ್ಯಕ್ರಮದಲ್ಲಿ ವಿವಿಧ ವಿಭಾಗದ ಡೀನರುಗಳಾದ ಪ್ರೊ.ಜಯಶಂಕರ, ಪ್ರೊ.ಈಶ್ವರ್, ಡಾ.ಜೆರಾಲ್ಡ್ ಸಂತೋಷ್ ಡಿಸೋಜ ಮೊದಲಾದವರು ಉಪಸ್ಥಿತರಿದ್ದರು.
ಮಂಗಳೂರು ವಿವಿ ಹಣಕಾಸು ಅಧಿಕಾರಿ ಪ್ರೊ.ವೈ ಸಂಗಪ್ಪ ಅವರು ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಪ್ರೊ.ವಿಶ್ವನಾಥ್ ಅತಿಥಿಯನ್ನು ಪರಿಚಯಿಸಿದರು. ಡಾ.ಪ್ರೀತಿ ಕೀರ್ತಿ ಡಿಸೋಜ ಅವರು ಕಾರ್ಯಕ್ರಮ ನಿರೂಪಿಸಿದರು.