ಬದಿಯಡ್ಕ: ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿಯ ವತಿಯಿಂದ 52ನೇ ವರ್ಷದ ಶ್ರೀಗಣೇಶೋತ್ಸವವು ಬದಿಯಡ್ಕ ಗಣೇಶಮಂದಿರದಲ್ಲಿ ಮಹಾಗಣಪತಿ ಹೋಮದೊಂದಿಗೆ ಆರಂಭಗೊಂಡು ಬುಧವಾರ ಪೆರಡಾಲ ಶ್ರೀ ಉದನೇಶ್ವರ ದೇವಸ್ಥಾನದ ಮುಂಭಾಗ ಹರಿಯುತ್ತಿರುವ ವರದಾ ನದಿಯಲ್ಲಿ ವಿಗ್ರಹ ಜಲಸ್ಥಂಭನದೊಂದಿಗೆ ಸಂಪನ್ನಗೊಂಡಿತು. ವೇದಮೂರ್ತಿ ಪಳ್ಳತ್ತಡ್ಕ ಪರಮೇಶ್ವರ ಭಟ್ಟರ ನೇತೃತ್ವದಲ್ಲಿ ವೆಂಕಟೇಶ್ವರ ಭಟ್ ಪಟ್ಟಾಜೆ ಮತ್ತು ಬಳಗದವರ ಪೌರೋಹಿತ್ಯದಲ್ಲಿ ವಿವಿಧ ಸಾಂಸ್ಕøತಿಕ ಕಾರ್ಯಕ್ರಮಗಳು ಜರಗಿತು.
ವೈಭವದ ಶೋಭಾಯಾತ್ರೆ :
ಬುಧವಾರ ಬೆಳಗ್ಗೆ ಉಷಃಪೂಜೆ, ವಿವಿಧ ಭಜನಾ ಸಂಘಗಳಿಂದ ಭಜನೆ, ಸಿನೆಮಾ ಹಾಡಿನ ಸಂಗೀತ ನಿರ್ದೇಶಕ ರಾಷ್ಟ್ರೀಯ ಪ್ರಶಸ್ತಿ ವಿಜೇತ ಕಲಾರತ್ನ ಜಯರಾಮ ಮತ್ತು ಬಳಗ ಮಂಗಳೂರು ಇವರಿಂದ ಸ್ಯಾಕ್ಸೋಫೋನ್ ವಾದನ, ಮಧ್ಯಾಹ್ನ ಮಹಾಪೂಜೆ, ಪ್ರಸಾದ ವಿತರಣೆ, ಪ್ರಸಾದ ಭೋಜನ ನಡೆಯಿತು. ಅಪರಾಹ್ನ ಶ್ರೀದೇವರ ಭವ್ಯ ಶೋಭಾಯಾತ್ರೆ ಆರಂಭಗೊಂಡಿತು. ಶೋಭಾಯಾತ್ರೆಯಲ್ಲಿ ಸಿಂಗಾರಿಮೇಳ, ಸಂಚಾರಿ ಭಕ್ತಿರಸಮಂಜರಿ, ತಾಂಬೋಲಂ, ಸಂಚಾರಿ ನೃತ್ಯ, ಕುಣಿತ ಭಜನೆ, ಹನುಮಾನ್ ಶೋ, ಹುಲಿಕುಣಿತ ಹಾಗೂ ವಿವಿಧ ಸಾಂಸ್ಕøತಿಕ ಕಾರ್ಯಕ್ರಮಗಳು ಗಮನಸೆಳೆದವು. ರಾತ್ರಿ ಪೆರಡಾಲ ಶ್ರೀ ಉದನೇಶ್ವರ ದೇವಾಲಯದ ಮುಂಭಾಗದಲ್ಲಿ ಹರಿಯುತ್ತಿರುವ ವರದಾ ನದಿ ತಟದಲ್ಲಿ ಪೂಜೆ, ಪ್ರಾರ್ಥನೆ, ಧ್ವಜಾವತರಣ, ವಿಗ್ರಹ ನಿಮಂಜನೆಯೊಂದಿಗೆ 52ನೇ ಸಾರ್ವಜನಿಕ ಶ್ರೀಗಣೇಶೋತ್ಸವವು ಸಂಪನ್ನಗೊಂಡಿತು.