ನವದೆಹಲಿ: ಪಾತಕಿಗಳು, ಭಯೋತ್ಪಾದಕರು ಮತ್ತು ಮಾದಕವಸ್ತು ಮಾರಾಟಗಾರರ ಜಾಲವನ್ನು ಭೇದಿಸುವ ನಿಟ್ಟಿನಲ್ಲಿ ರಾಷ್ಟ್ರೀಯ ತನಿಖಾ ಆಯೋಗ (ಎನ್‌ಐಎ) ವಿವಿಧ ರಾಜ್ಯಗಳಲ್ಲಿ ಬೃಹತ್ ಕಾರ್ಯಾಚರಣೆ ಕೈಗೊಂಡಿದ್ದು, ಹಲವು ಶಂಕಿತರನ್ನು ವಶಕ್ಕೆ ತೆಗೆದುಕೊಂಡಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಪಟ್ಟಿ ಮಾಡಲಾದ ಉಗ್ರ ಆರ್ಶ್ ದಲ್ಲಾ ಮತ್ತಿತರ ಗ್ಯಾಂಗ್‌ಸ್ಟರ್‌ಗಳಿಗೆ ಸಂಬಂಧಿಸಿದ ಪ್ರಕರಣಗಳಿಗೆ ಸಂಬಂಧಿಸಿದಂತೆ ಈ ದಾಳಿಗಳನ್ನು ಕೈಗೊಳ್ಳಲಾಗಿತ್ತು.
ಪಂಜಾಬ್, ಹರಿಯಾಣ, ರಾಜಸ್ಥಾನ, ಉತ್ತರಾಖಂಡ, ಉತ್ತರಪ್ರದೇಶ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಾದ ದೆಹಲಿ ಹಾಗೂ ಚಂಡೀಗಢದ ಒಟ್ಟು 53 ಸ್ಥಳಗಳ ಮೇಲೆ ದಾಳಿ ನಡೆಸಲಾಯಿತು. ಆಯಾ ರಾಜ್ಯಗಳ ಪೊಲೀಸರು ದಾಳಿ ನಡೆಸಲು ಸಹಕಾರ ನೀಡಿದರು.
ಪಿಸ್ತೂಲ್‌ಗಳು, ಮದ್ದುಗುಂಡುಗಳು, ಭಾರಿ ಸಂಖ್ಯೆಯಲ್ಲಿ ಡಿಜಿಟಲ್ ಸಾಧನಗಳು ಮತ್ತು ಹಲವಾರು ದಾಖಲೆಗಳನ್ನು ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ ಎಂದು ಎನ್‌ಐಎ ವಕ್ತಾರರು ತಿಳಿಸಿದ್ದಾರೆ.
ಪ್ರಮುಖ ಗ್ಯಾಂಗ್‌ಸ್ಟರ್‌ಗಳಿಗೆ ಶಸ್ತ್ರಾಸ್ತ್ರ ಪೂರೈಕೆ, ಹಣಕಾಸು ನೆರವು, ಸರಕು ಸಾಗಣೆಯಲ್ಲಿ ನೆರವು ನೀಡುತ್ತಿರುವವರನ್ನು ಪತ್ತೆ ಮಾಡುವುದು ಬುಧವಾರ ನಡೆಸಿರುವ ದಾಳಿಯ ಮುಖ್ಯ ಗುರಿಯಾಗಿತ್ತು. ಈ ಗ್ಯಾಂಗ್‌ಸ್ಟರ್‌ಗಳು ಪಾಕಿಸ್ತಾನ, ಅರಬ್ ಸಂಯುಕ್ತ ಸಂಸ್ಥಾನ, ಕೆನಡಾ, ಪೋರ್ಚುಗಲ್ ಮತ್ತಿತರ ದೇಶಗಳಿಂದ ಭಾರತಕ್ಕೆ ಮಾದಕವಸ್ತು ಸಾಗಣೆ ಹಾಗೂ ಭಯೋತ್ಪಾದನೆ ಕಾರ್ಯಾಚರಿಸುತ್ತಿರುವ ಸಂಘಟನೆಗಳ ಜೊತೆ ಕೈಜೋಡಿಸಿದ್ದಾರೆ.
ದಲ್ಲಾ ಅಲ್ಲದೇ, ಇತರ ಪಾತಕಿಗಳಾದ ಲಾರೆನ್ಸ್ ಬಿಷ್ಣೋಯಿ, ಸುಖ ದುನೇಕೆ, ಹ್ಯಾರ್ರಿ ಮೌರ್, ನರೇಂದ್ರ, ಕಾಲಾ ಜತೇರಿ ಮತ್ತು ದೀಪಕ್ ಟಿನು ಅವರನ್ನೂ ಗುರಿಯಾಗಿಸಿಕೊಂಡು ಐಎನ್‌ಎ ದಾಳಿ ನಡೆಸಿದೆ ಎಂದು ಅಧಿಕಾರಿ ಹೇಳಿದ್ದಾರೆ.
ಏಳನೇ ಬಾರಿಗೆ ದಾಳಿ: ಗ್ಯಾಂಗ್‌ಸ್ಟರ್‌ಗಳಿಗೆ ಸಂಬಂಧಿಸಿ 2022ರ ಆಗಸ್ಟ್‌ನಲ್ಲಿ ಐದು ಪ್ರಕರಣಗಳನ್ನು ಎನ್‌ಐಎ ದಾಖಲಿಸಿಕೊಂಡಿತ್ತು ಮತ್ತು ಆಗ ದಾಳಿಗಳನ್ನು ನಡೆಸಲು ಆರಂಭಿಸಿತ್ತು. ಬಳಿಕ, ಈ ವರ್ಷ ಜುಲೈನಲ್ಲಿ ಮತ್ತೆ ಎರಡು ಪ್ರಕರಣಗಳನ್ನು ದಾಖಲಿಸಿಕೊಂಡಿತ್ತು. ಈ ಸರಣಿಯಲ್ಲಿ ಇದು ಏಳನೇ ದಾಳಿಯಾಗಿದೆ.
ಹತ್ಯೆ ನಡೆಸಲು ಸಂಚು, ಖಾಲಿಸ್ತಾನ ಪರ ಸಂಘಟನೆಗಳಿಗೆ ಹಣಕಾಸು ನೆರವು, ಸುಲಿಗೆಯಂಥ ಕೃತ್ಯಗಳಲ್ಲಿ ಭಾಗಿಯಾಗಿರುವ ಗ್ಯಾಂಗ್‌ಸ್ಟರ್‌ಗಳಿಗೆ ಸಂಬಂಧಿಸಿದ ಪ್ರಕರಣಗಳು ಇವಾಗಿವೆ. ವಿವಿಧ ರಾಜ್ಯಗಳ ಜೈಲುಗಳಲ್ಲಿ ಈ ಎಲ್ಲಾ ಸಂಚನ್ನು ರೂಪಿಸಲಾಗಿದೆ ಮತ್ತು ವಿದೇಶಿ ಮೂಲಗಳ ಸಂಘಟನೆಗಳ ಮುಖಾಂತರ ವ್ಯವಸ್ಥಿತ ಜಾಲಗಳ ಮೂಲಕ ಸಂಚನ್ನು ಕಾರ್ಯರೂಪಕ್ಕೆ ತರಲಾಗುತ್ತದೆ ಎಂದು ಅಧಿಕಾರಿ ತಿಳಿಸಿದ್ದಾರೆ.
ಮಹಾರಾಷ್ಟ್ರದ ಕಟ್ಟಡ ನಿರ್ಮಾಣಗಾರ ಸಂಜಯ್ ಬಿಯಾನಿ, ಗಣಿ ಉದ್ಯಮಿ ಮೆಹಲ್ ಸಿಂಗ್ ಮತ್ತು ಅಂತರರಾಷ್ಟ್ರೀಯ ಕಬಡ್ಡಿ ಆಟಗಾರ ಸಂದೀಪ್ ನಂಗಲ್ ಅಂಬಿಯ ಹತ್ಯೆಗೆ ನಡೆಸಿದ ಸಂಚುಗಳನ್ನು ಕೂಡಾ ಜೈಲಿನಲ್ಲಿಯೇ ರೂಪಿಸಿದ್ದು ಎಂದು ಅವರು ಹೇಳಿದ್ದಾರೆ.