HEALTH TIPS

ಮಂಜೇಶ್ವರ ಉಪಜಿಲ್ಲೆಯ 62 ನೇ ಶಾಲಾ ಕಲೋತ್ಸವದ ಸಂಘಟನಾ ಸಮಿತಿ ರೂಪೀಕರಣ


              ಕುಂಬಳೆ:; ಧರ್ಮತ್ತಡ್ಕ ಶ್ರೀ ದುರ್ಗಾಪರಮೇಶ್ವರಿ ವಿದ್ಯಾ ಸಂಸ್ಥೆಗಳಲ್ಲಿ ನವೆಂಬರ್ 7 ರಿಂದ 10 ರ ತನಕ ನಡೆಯಲಿರುವ, ಮಂಜೇಶ್ವರ ಉಪಜಿಲ್ಲಾ ಮಟ್ಟದ 62ನೇ ಶಾಲಾಕಲೋತ್ಸವದ ಸಂಘಟನಾ ಸಮಿತಿ ರೂಪೀಕರಣವು ಹೈಸ್ಕೂಲ್ ಸಭಾಂಗಣದಲ್ಲಿ ಜರಗಿತು.

              ಪುತ್ತಿಗೆ ಪಂಚಾಯತ್ ವಿದ್ಯಾಭ್ಯಾಸ ಸ್ಥಾಯೀ ಸಮಿತಿ ಅಧ್ಯಕ್ಷ  ಅಬ್ದುಲ್ ಮಜೀದ್ ಎಂ.ಎಚ್ ಸಭಾಧ್ಯಕ್ಷತೆಯನ್ನು ವಹಿಸಿ ಮಾತನಾಡಿದರು. ವಿದ್ಯಾರ್ಥಿಯು ಪಠ್ಯದೊಂದಿಗೆ ಪಠ್ಯೇತರ ವಿಷಯಗಳಲ್ಲಿ ತನ್ನನ್ನು  ತೊಡಗಿಸಿಕೊಂಡಾಗ ಮಾದಕ ವ್ಯಸನಗಳಂತಹ ಸಾಮಾಜಿಕ ಪಿಡುಗುಗಳಿಂದ ದೂರವಿರುವುದಕ್ಕೆ ಸಾಧ್ಯವಾಗುತ್ತದೆ. ಕಲೋತ್ಸವದಂತಹ ವೇದಿಕೆಗಳು, ಮನಸ್ಸನ್ನು ಸತ್ ವಿಚಾರಗಳ ಕಡೆಗೆ ಕೇಂದ್ರೀಕರಿಸುವಲ್ಲಿ ಮಹತ್ತರವಾದ ಪಾತ್ರವನ್ನು ವಹಿಸುತ್ತದೆ ಎಂದರು. ಏಷ್ಯಾದಲ್ಲಿ ಅತ್ಯುತ್ತಮ ಕಾರ್ಯಕ್ರಮಗಳಲ್ಲೊಂದಾದ  ಕೇರಳ ಶಾಲಾ ಕಲೋತ್ಸವದಲ್ಲಿ ಎಲ್ಲರೂ ಸಕ್ರಿಯವಾಗಿ ಭಾಗವಹಿಸುವಂತಾಗಬೇಕು ಎಂದು ಅಭಿಪ್ರಾಯಪಟ್ಟರು.
ಪುತ್ತಿಗೆ ಪಂಚಾಯತ್ ಅಧ್ಯಕ್ಷ ಶ್ರೀ ಡಿ ಸುಬ್ಬಣ್ಣ ಆಳ್ವ ದೀಪ ಬೆಳಗಿಸಿ  ಉದ್ಘಾಟಿಸಿದರು. ಸರಕಾರದ ಮಹತ್ವಾಕಾಂಕ್ಷಿ ಯೋಜನೆಯಾದ ಹಸಿರು ಪ್ರೋಟೋಕೋಲ್ ನ್ನು ಕಾರ್ಯಕ್ರಮದುದ್ದಕ್ಕೂ ಅನುಸರಿಸಿ ಯಶಸ್ವಿಗೊಳಿಸಬೇಕೆಂದೂ ಇದಕ್ಕಾಗಿ ಪ್ರತಿಯೊಬ್ಬರೂ ಸಹಕರಿಸಬೇಕೆಂದು ಕರೆಯಿತ್ತರು.


               ಮಂಜೇಶ್ವರ ವಿದ್ಯಾಭ್ಯಾಸ ಉಪಜಿಲ್ಲೆಯ ಪ್ರಭಾರ ಸಹಾಯಕ ವಿದ್ಯಾಧಿಕಾರಿ ಶ್ರೀ ಜಿತೇಂದ್ರ ಮಾತನಾಡಿ , 5 ಬಾರಿ ಕಲೋತ್ಸವವನ್ನು  ಯಶಸ್ವಿಯಾಗಿ ನಡೆಸಿದ ಧರ್ಮತ್ತಡ್ಕ ವಿದ್ಯಾಸಂಸ್ಥೆಗೆ ಹಿಂದಿನ ಅನುಭವಗಳೇ ದಾರಿದೀಪವಾಗಲಿ, ಶಾಲಾ ಕಲೋತ್ಸವವು ಊರಿನ ಉತ್ಸವವಾಗಲಿ, ನೈಜ ಪ್ರತಿಭೆಗಳು ರಾಜ್ಯಮಟ್ಟದಲ್ಲಿಯೂ ಗುರುತಿಸುವಂತಾಗಲಿ ಎಂದು ಶುಭವನ್ನು ಹಾರೈಸಿದರು.

            ಹೈಸ್ಕೂಲ್, ಹೈಯರ್ ಸೆಕೆಂಡರಿ ವಿಭಾಗದ ವ್ಯವಸ್ಥಾಪಕರಾದ ಶ್ರೀ ಶಂಕರನಾರಾಯಣ ಭಟ್ ಮಾತನಾಡಿ ಸರ್ವರ ಸಹಕಾರದಿಂದ ಈ ಕಲೋತ್ಸವವು ಯಶಸ್ವಿಗೊಂಡು, ಮುಂದಿನ ದಿನಗಳಲ್ಲಿ ಇತರರಿಗೆ   ಮಾದರಿಯಾಗಲಿ ಎಂದು  ಹಾರೈಸಿದರು.

                ಜಿಲ್ಲಾ ಪಂಚಾಯತ್ ಸದಸ್ಯ ನಾರಾಯಣ ನಾಯ್ಕ್ , ಪೈವಳಿಕೆ ಗ್ರಾಮ ಪಂಚಾಯತ್ ಸದಸ್ಯ ಅಶೋಕ ಭಂಡಾರಿ, ಮಂಜೇಶ್ವರ ಮುಖ್ಯ ಶಿಕ್ಷಕರ ವೇದಿಕೆಯ ಕಾರ್ಯದರ್ಶಿ ಶ್ಯಾಮ ಭಟ್, ಬಿ.ಪಿ.ಒ ವಿಜಯಕುಮಾರ್, ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ಶಿವಪ್ರಸಾದ್ ಶೆಟ್ಟಿ, ಹೈಯರ್ ಸೆಕೆಂಡರಿ ಪ್ರಾಂಶುಪಾಲರ ವೇದಿಕೆ ಸಂಚಾಲಕ ಶ್ರೀ ರಮೇಶ್ , ಎಂ.ಪಿ.ಟಿ ಅಧ್ಯಕ್ಷೆ  ಶ್ರೀಮತಿ ಪುಷ್ಪಾ ಕಮಲಾಕ್ಷ  ಶುಭಾಶಂಸನೆಗೈದರು‌.

               ಈ ಸಂದರ್ಭ ವಾರ್ಡ್ ಸದಸ್ಯೆ ಶ್ರೀಮತಿ ಶಾಂತಿ ವೈ,  ಯು.ಪಿ ಶಾಲಾ ಎಂ.ಪಿ‌.ಟಿ.ಎ ಶ್ರೀಮತಿ ಜಯಲಕ್ಷ್ಮಿ, ಯು.ಪಿ ಶಾಲಾ ವ್ಯವಸ್ಥಾಪಕಿ ಶ್ರೀಮತಿ ವಿಜಯಶ್ರೀ, ಪಿ.ಟಿ.ಎ ಉಪಾಧ್ಯಕ್ಷ ವೇಣುಗೋಪಾಲ ಶೆಟ್ಟಿ ಉಪಸ್ಥಿತರಿದ್ದರು‌. 

               ಪುತ್ತಿಗೆ ಪಂಚಾಯತ್ ಅಧ್ಯಕ್ಷ ಶ್ರೀ ಡಿ ಸುಬ್ಬಣ್ಣ ಆಳ್ವ ಆಧ್ಯಕ್ಷರಾಗಿ, ಧರ್ಮತ್ತಡ್ಕ ಶ್ರೀ ದುರ್ಗಾಪರಮೇಶ್ವರಿ ವಿದ್ಯಾಸಂಸ್ಥೆಗಳ ಕರೆಸ್ಪಾಂಡೆಂಟ್ ಶ್ರೀಮತಿ ಶಾರದಾ ಅಮ್ಮ ಉಪಾಧ್ಯಕ್ಷರಾಗಿ, ಹೈಯರ್ ಸೆಕೆಂಡರಿ ಪ್ರಾಂಶುಪಾಲ ಶ್ರೀ ಎನ್. ರಾಮಚಂದ್ರ ಭಟ್ ಜನರಲ್ ಕನ್ವೀನರ್, ಹೈಸ್ಕೂಲ್ ಮುಖ್ಯೋಪಾಧ್ಯಾಯ ಶ್ರೀ ಈ.ಎಚ್ ಗೋವಿಂದ ಭಟ್ ಮತ್ತು ಧರ್ಮತ್ತಡ್ಕ ಯು.ಪಿ ಶಾಲಾ ಮುಖ್ಯೋಪಾಧ್ಯಾಯ ಶ್ರೀ ಎನ್  ಮಹಾಲಿಂಗ ಭಟ್ ಜನರಲ್ ಜೋಯಿಂಟ್ ಕನ್ವೀನರ್ ಹಾಗೂ ಮಂಜೇಶ್ವರ ಉಪಜಿಲ್ಲೆಯ ಪ್ರಭಾರ ಸಹಾಯಕ ವಿದ್ಯಾಧಿಕಾರಿ ಶ್ರೀ ಜಿತೇಂದ್ರ ಖಜಾಂಚಿಯಾಗಿರುವ ಸಂಘಟನಾ ಸಮಿತಿಯನ್ನು ರೂಪಿಸಲಾಯಿತು. ಇದರೊಂದಿಗೆ ಕಲೋತ್ಸವವನ್ನು ಯಶಸ್ವಿಯಾಗಿ ನಡೆಸಲು ಇತರ ಒಂಭತ್ತು ಉಪಸಮಿತಿಗಳನ್ನು ರೂಪೀಕರಿಸಲಾಯಿತು. ಯು.ಪಿ ಶಾಲಾ ಮುಖ್ಯೋಪಾಧ್ಯಾಯ ಮಹಾಲಿಂಗ ಭಟ್ ಈ ಸಮಿತಿಯನ್ನು ಅನಾವರಣಗೊಳಿಸಿದರು. ಸಭೆಯಲ್ಲಿ ಪೂರ್ಣ ಅಂಗೀಕಾರವನ್ನು ಪಡೆಯಲಾಯಿತು.   

                  ಇದೇ ಸಂದರ್ಭ ಇತ್ತೀಚೆಗೆ  ನಮ್ಮನ್ನಗಲಿದ ನಿವೃತ್ತ ವಿದ್ಯಾಧಿಕಾರಿಗಳೂ, ಕನ್ನಡ ಸಾಹಿತ್ಯ ಪರಿಷತ್ತು  ಕೇರಳ ಗಡಿನಾಡ ಘಟಕದ ಅಧ್ಯಕ್ಷರಾಗಿದ್ದ ಶ್ರೀ ಎಸ್.ವಿ ಭಟ್  ಅವರಿಗೆ ನುಡಿನಮನವನ್ನು ಅರ್ಪಿಸಿ ಮೌನಪ್ರಾರ್ಥನೆಯನ್ನು ಸಲ್ಲಿಸಲಾಯಿತು‌.

ಕಾರ್ಯಕ್ರಮದಲ್ಲಿ ಪ್ರಾಂಶುಪಾಲ ಶ್ರೀ ಎನ್ ರಾಮಚಂದ್ರ ಭಟ್ ಅಭ್ಯಾಗತರನ್ನು ಸ್ವಾಗತಿಸಿದರು. ಮುಖ್ಯೋಪಾಧ್ಯಾಯ ಈ.ಎಚ್  ಗೋವಿಂದ ಭಟ್ ವಂದಿಸಿದರು‌. ಅಧ್ಯಾಪಕ ಸತೀಶ್ ಕುಮಾರ್ ಶೆಟ್ಟಿ ಕಾರ್ಯಕ್ರಮವನ್ನು ನಿರೂಪಿಸಿದರು‌. ಯು.ಪಿ ಶಾಲಾ ಶಿಕ್ಷಕಿಯರು ಪ್ರಾರ್ಥನೆಯನ್ನು ಹಾಡಿದರು.

                   ಮಂಜೇಶ್ವರ ಉಪಜಿಲ್ಲೆಯ ಹಲವು ಶಾಲೆಗಳ ಮುಖ್ಯ ಶಿಕ್ಷಕರು, ಅಧ್ಯಾಪಕರು, ಪಿ‌.ಟಿ.ಎ ಪದಾಧಿಕಾರಿಗಳು, ಧರ್ಮತ್ತಡ್ಕ ವಿದ್ಯಾಸಂಸ್ಥೆಗಳ ಎಲ್ಲಾ ಅಧ್ಯಾಪಕ, ಸಿಬ್ಬಂಧಿ ವರ್ಗದವರ ಸಹಕಾರದೊಂದಿಗೆ ಕಾರ್ಯಕ್ರಮವು ಸಂಪನ್ನಗೊಂಡಿತು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries