ಲಂಡನ್: ಭಾರತದ ಖ್ಯಾತ ವಕೀಲ ಹರೀಶ್ ಸಾಳ್ವೆ ತಮ್ಮ 68ನೇ ವಯಸ್ಸಿನಲ್ಲಿ 3ನೇ ಮದುವೆಯಾಗಿದ್ದು, ಲಂಡನ್ ನಲ್ಲಿ ನಡೆದ ಅದ್ದೂರಿ ಕಾರ್ಯಕ್ರಮದಲ್ಲಿ ವಿವಾಹವಾಗಿದ್ದಾರೆ.
ಭಾರತದ ಮಾಜಿ ಸಾಲಿಸಿಟರ್ ಜನರಲ್ ಕೂಡ ಆಗಿರುವ ಖ್ಯಾತ ವಕೀಲ ಹರೀಶ್ ಸಾಳ್ವೆ 68ನೇ ವಯಸ್ಸಿನಲ್ಲಿ ಮೂರನೇ ಮದುವೆಯಾಗಿದ್ದು, ಟ್ರಿನಾ ಎನ್ನುವವರೊಂದಿಗೆ ಸಾಳ್ವೆ ಲಂಡನ್‌ನಲ್ಲಿ ಅದ್ದೂರಿಯಾಗಿ ಮದುವೆಯಾಗಿದ್ದಾರೆ. ಈ ಬಗ್ಗೆ ಸುದ್ದಿಸಂಸ್ಥೆ ವರದಿ ಮಾಡಿದ್ದು, ಸಾಳ್ವೆ ಅವರ ಮದುವೆಗೆ ನೀತಾ ಅಂಬಾನಿ, ಗೋಪಿ ಹಿಂದುಜಾ ಲಲಿತ್ ಮೋದಿ, ಉಜ್ವಲ್ ರಾವತ್ ಸೇರಿ ಹಲವರು ಭಾಗಿಯಾಗಿದ್ದರು ಎಂದು ಹೇಳಲಾಗಿದೆ.
ಇವರ ಮದುವೆಯ ವಿಡಿಯೊ ಮತ್ತು ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಹರೀಶ್ ಮದುವೆಯಾಗಿರುವ ಟ್ರಿನಾ ಅವರ ಬಗ್ಗೆ ಹೆಚ್ಚಿನ ಮಾಹಿತಿ ತಿಳಿದುಬಂದಿಲ್ಲ. ಮೂಲಗಳ ಪ್ರಕಾರ ಸಾಳ್ವೆ ಅವರು 1982ರಲ್ಲಿ ಮೀನಾಕ್ಷಿ ಎಂಬವವರನ್ನು ಮದುವೆಯಾಗಿ 2020ರಲ್ಲಿ ವಿಚ್ಛೇದನ ನೀಡಿದ್ದರು. 2020ರಲ್ಲಿ ಕಾರೋಲಿನ್ ಬ್ರೊಸಾರ್ಡ್ ಎನ್ನುವವರನ್ನು ಮದುವೆಯಾಗಿದ್ದರು. ಇದೀಗ ಮೂರನೇ ಬಾರಿಗೆ ವೈವಾಹಿಕ ಜೀವನಕ್ಕೆ ಸಾಳ್ವೆ ಕಾಲಿರಿಸಿದ್ದಾರೆ.
ಕುಲಭೂಷಣ್ ಜಾಧವ್ ಪ್ರಕರಣ ಸೇರಿ ಹಲವು ಉನ್ನತ ಮಟ್ಟದ ಪ್ರಕರಣಗಳಲ್ಲಿ ಸಾಳ್ವೆ ವಕೀಲರಾಗಿದ್ದರು. ಜಾಧವ್ ಪ್ರಕರಣದಲ್ಲಿ ₹1 ಶುಲ್ಕ ಹಣ ಪಡೆದು ಸುದ್ದಿಯಾಗಿದ್ದರು. 2015ರಲ್ಲಿ ಹರಿಶ್ ಸಾಳ್ವೆ ಪದ್ಮ ಭೂಷಣ ಪ್ರಶಸ್ತಿಗೆ ಭಾಜನರಾಗಿದ್ದರು. ಸಾಳ್ವೆ ಅವರು ನವೆಂಬರ್ 1999 ರಿಂದ ನವೆಂಬರ್ 2002 ರವರೆಗೆ ಭಾರತದ ಸಾಲಿಸಿಟರ್ ಜನರಲ್ ಆಗಿ ಸೇವೆ ಸಲ್ಲಿಸಿದ್ದರು.