ಜಮ್ಮು: ಮೂವತ್ತು ವರ್ಷಗಳಿಂದ ಪೊಲೀಸರ ಕಣ್ತಪ್ಪಿಸಿ ತಲೆಮರೆಸಿಕೊಂಡಿದ್ದ ಎಂಟು ಉಗ್ರರನ್ನು ರಾಜ್ಯ ತನಿಖಾ ದಳ (ಎಸ್‌ಐಎ) ಮತ್ತು ಅಪರಾಧ ತನಿಖಾ ಇಲಾಖೆ (ಸಿಐಡಿ) ಸಿಬ್ಬಂದಿ ವಿಶೇಷ ಕಾರ್ಯಾಚರಣೆ ನಡೆಸಿ ಗುರುವಾರ ಬಂಧಿಸಿದ್ದಾರೆ.
ಸಿಐಡಿಯಿಂದ ಲಭ್ಯವಾದ ಮಾಹಿತಿಯ ಆಧಾರದಲ್ಲಿ ತಿಂಗಳುಗಳಿಂದ ಕಾರ್ಯಾಚರಣೆ ನಡೆಸಿದ್ದ ಎಸ್‌ಐಎ, ಭಯೋತ್ಪಾದನೆ ಮತ್ತು ವಿಧ್ವಂಸಕ ಚಟುವಟಿಕೆ ತಡೆ (ಟಾಡಾ) ಕಾಯ್ದೆ ಅಡಿಯಲ್ಲಿ ಮೂರು ದಶಕಗಳಿಂದ ದಾಖಲಾಗಿದ್ದ ವಿವಿಧ ಪ್ರಕರಣಗಳಲ್ಲಿ ಬೇಕಾಗಿದ್ದ ಎಂಟು ಉಗ್ರರನ್ನು ಬಂಧಿಸಿದೆ.
ಬಂಧಿತರ ಪೈಕಿ ಕೆಲವರು ಕಾನೂನಿನ ಹಿಡಿತದಿಂದ ತಪ್ಪಿಸಿಕೊಳ್ಳಲು ಭೂಗತವಾಗಿದ್ದರೆ, ಕೆಲವರು ಸರ್ಕಾರಿ ಸೇವೆಗಳು, ಖಾಸಗಿ ಉದ್ಯಮಗಳಲ್ಲಿ ತೊಡಗಿಸಿಕೊಂಡಿದ್ದರು. ನ್ಯಾಯಾಲಯಗಳಲ್ಲೂ ಕೆಲಸ ಮಾಡಿಕೊಂಡಿದ್ದರು ಎಂಬ ಆಘಾತಕಾರಿ ಮಾಹಿತಿಯನ್ನು ಪೊಲೀಸ್ ಅಧಿಕಾರಿಯೊಬ್ಬರು ಹಂಚಿಕೊಂಡಿದ್ದಾರೆ.
ಜಮ್ಮು ಮತ್ತು ಕಾಶ್ಮೀರದಲ್ಲಿ 'ಶೂನ್ಯ ಭಯೋತ್ಪಾದನೆ' ಸಾಧಿಸುವ ನಿಟ್ಟಿನಲ್ಲಿ ಎಸ್‌ಐಎ ವಿಶೇಷ ಕಾರ್ಯಾಚರಣೆ ಕೈಗೊಂಡಿದೆ. ಅದರಂತೆ, ಟಾಡಾ ಕಾಯ್ದೆ ಅಡಿಯಲ್ಲಿ ದಾಖಲಾಗಿರುವ ಪ್ರಕರಣಗಳಿಗೆ ಸಂಬಂಧಿಸಿದಂತೆ ಕಾಶ್ಮೀರದಲ್ಲಿ 417 ಹಾಗೂ ಜಮ್ಮುವಿನಲ್ಲಿ 317 ಮಂದಿ ಸೇರಿದಂತೆ ಒಟ್ಟು 734 ಆರೋಪಿಗಳು ತಲೆಮರೆಸಿಕೊಂಡಿದ್ದಾರೆ ಎಂಬುದನ್ನು ಬಯಲಿಗೆಳೆದಿದೆ. ತಲೆಮರೆಸಿಕೊಂಡಿರುವರ ಪೈಕಿ 369 ಮಂದಿಯ ಗುರುತುಗಳನ್ನು ಈವರೆಗೆ ಪತ್ತೆಹಚ್ಚಲಾಗಿದೆ. ಅದರಲ್ಲಿ 215 ಮಂದಿ ಜಮ್ಮುವಿನಲ್ಲಿ ಮತ್ತು 154 ಮಂದಿ ಕಾಶ್ಮೀರದಲ್ಲಿ ಇದ್ದಾರೆ. 80 ಮಂದಿ ಈಗಾಗಲೇ ಮೃತಪಟ್ಟಿದ್ದಾರೆ. 45 ಮಂದಿ ಪಾಕಿಸ್ತಾನ ಇಲ್ಲವೇ ಪಾಕಿಸ್ತಾನ ಆಕ್ರಮಿತ ಕಾಶ್ಮೀರ (ಪಿಒಕೆ) ಹಾಗೂ ವಿದೇಶಗಳಲ್ಲಿ ನೆಲೆ ಕಂಡುಕೊಂಡಿದ್ದಾರೆ. ನಾಲ್ವರು ಜೈಲುಗಳಲ್ಲಿದ್ದು, ಉಳಿದ 127 ಮಂದಿಯ ಎಲ್ಲಿದ್ದಾರೆ ಎಂಬುದು ಪತ್ತೆಯಾಗಿಲ್ಲ ಎಂದು ವಿವರಿಸಿದ್ದಾರೆ.
ಸದ್ಯ ಬಂಧಿಸಲಾಗಿರುವ ಎಂಟು ಮಂದಿಯ ವಿರುದ್ಧ 30 ವರ್ಷಗಳ ಹಿಂದೆಯೇ ಭಯೋತ್ಪಾದನೆ ಚಟುವಟಿಕೆಗಳಿಗೆ ಸಂಬಂಧಿಸಿದಂತೆ ದೋಡಾ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ಪ್ರಕರಣಗಳು ಹಾಗೂ ಜಮ್ಮುವಿನ ಟಾಡಾ ನ್ಯಾಯಾಲಯದಲ್ಲಿ ಆರೋಪ ಪಟ್ಟಿಗಳು ಸಲ್ಲಿಕೆಯಾಗಿದ್ದವು.
ಬಂಧಿತರನ್ನು ಆದಿಲ್ ಫಾರೂಕ್ ಫರಿದಿ, ಇಶ್‌ಫಾಕ್ ಅಹಮದ್, ಮೊಹಮ್ಮದ್ ಇಕ್ಬಾಲ್, ಮುಜಾಹಿದ್ ಹುಸೈನ್, ತಾರಿಕ್ ಹುಸೈನ್, ಇಷ್ತಿಯಾಕ್ ಅಹಮದ್ ದೇವ್, ಎಜಾಜ್ ಅಹಮದ್ ಮತ್ತು ಜಮೀಲ್ ಅಹಮದ್ ಎಂದು ಗುರುತಿಸಲಾಗಿದೆ.
ಫರಿದಿ ಜಮ್ಮು ಮತ್ತು ಕಾಶ್ಮೀರದ ಶಾಲಾ ಶಿಕ್ಷಣ ಮಂಡಳಿಯಲ್ಲಿ ಈಗಲೂ ಸರ್ಕಾರಿ ನೌಕರನಾಗಿದ್ದಾನೆ. ಇಶ್‌ಫಾಕ್ ದೋಡಾ ನ್ಯಾಯಾಲಯದ ಆವರಣದಲ್ಲಿ ಬೆರಳಚ್ಚುಗಾರನಾಗಿದ್ದ. ಎಲ್ಲರನ್ನೂ ವಾರಂಟ್ ಪ್ರಕಾರ ಟಾಡಾ ನ್ಯಾಯಾಲಯದೆದುರು ಹಾಜರುಪಡಿಸಲಾಗುವುದು ಎಂದು ಅಧಿಕಾರಿ ವಿವರಿಸಿದ್ದಾರೆ.
ಬಂಧಿತರು 1991ರಿಂದ 1993ರ ಅವಧಿಯಲ್ಲಿ ಕೊಲೆ, ಸುಲಿಗೆಗಾಗಿ ಅಪಹರಣ, ಅತ್ಯಾಚಾರ, ಪ್ರಾರ್ಥನಾ ಸಭೆಗಳಲ್ಲಿ ಸುಳ್ಳು ವಿಚಾರಗಳನ್ನು ಹರಡಿ ಜನರನ್ನು ಹಿಂಸಾಚಾರಕ್ಕೆ ಪ್ರಚೋದಿಸಿದ್ದೂ ಸೇರಿದಂತೆ ಹಲವು ಕೃತ್ಯಗಳಲ್ಲಿ ಭಾಗಿಯಾಗಿದ್ದರು. 1994ರ ಜೂನ್ 22ರಂದು ದೋಡಾದ ಶಂಬಾಜ್ ಪ್ರದೇಶದಲ್ಲಿ ಭಾರಿ ಪ್ರಮಾಣದ ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಂಡ ಪ್ರಕರಣದಲ್ಲಿ ದಾಖಲಾಗಿದ್ದ ಎಫ್‌ಐಆರ್‌ನಲ್ಲಿಯೂ ಇವರ ಹೆಸರುಗಳನ್ನು ಉಲ್ಲೇಖಿಸಲಾಗಿತ್ತು.
ಇವರೆಲ್ಲ ಕಾನೂನಿನ ಕಣ್ತಪ್ಪಿಸಿ ಪರಾರಿಯಾಗಿದ್ದು ಹೇಗೆ, ಸಾಮಾನ್ಯರಂತೆ ಜೀವನ ನಡೆಸಿದ್ದು ಹೇಗೆ ಎಂಬ ಬಗ್ಗೆ ಎಸ್‌ಐಎ ತನಿಖೆ ಕೈಗೊಳ್ಳಲಿದೆ ಎಂದು ಅಧಿಕಾರಿ ತಿಳಿಸಿದ್ದಾರೆ.