ನೊಯ್ಡಾ (PTI): ರಾಜಸ್ಥಾನದ ಭರತ್‌ಪುರ್ ಮತ್ತು ಉತ್ತರ ಪ್ರದೇಶದ ಮಥುರಾ ಸೇರಿದಂತೆ ದೇಶದ 10 ಜಿಲ್ಲೆಗಳು ಗರಿಷ್ಠ ಪ್ರಮಾಣದ ಸೈಬರ್ ಅಪರಾಧ ಕೃತ್ಯಗಳಿಗೆ ನೆಲೆಯಾಗಿವೆ. ಶೇ 80ರಷ್ಟು ಸೈಬರ್ ಅಪರಾಧ ಕೃತ್ಯಗಳು ಈ 10 ಜಿಲ್ಲೆಗಳಿಂದಲೇ ವರದಿಯಾಗಿವೆ.
ಐಐಟಿ ಕಾನ್ಪುರ ಆರಂಭಿಸಿರುವ ಫ್ಯೂಚರ್ ಕ್ರೈಮ್ ರಿಸರ್ಚ್ ಫೌಂಡೇಷನ್ (ಎಫ್‌ಸಿಆರ್‌ಎಫ್) ಹೆಸರಿನ ನವೋದ್ಯಮ ಸಂಸ್ಥೆಯು ನಡೆಸಿರುವ ಅಧ್ಯಯನದಿಂದ ಈ ಅಂಶ ಗೊತ್ತಾಗಿದೆ.
ಇದುವರೆಗೆ ಜಾರ್ಖಂಡ್‌ನ ಜಮ್ತಾರ ಮತ್ತು ಹರಿಯಾಣದ ನೂಹ್ ಸೈಬರ್ ಅಪರಾಧಗಳಿಗೆ ಕುಖ್ಯಾತಿ ಪಡೆದಿದ್ದವು.
ಅಧ್ಯಯನದ ಪ್ರಕಾರ, ಭರತ್‌ಪುರ್‌ದಲ್ಲಿ ಗರಿಷ್ಠ ಅಂದರೆ ಶೇ 18ರಷ್ಟು ಸೈಬರ್ ಪ್ರಕರಣಗಳು ವರದಿಯಾಗಿವೆ. ಉಳಿದಂತೆ ಮಥುರಾದಲ್ಲಿ ಶೇ 12, ನೂಹ್ (ಹರಿಯಾಣ) -ಶೇ 11, ದೇವಗಢ (ಜಾರ್ಖಂಡ್) -ಶೇ 10, ಜಮ್ತಾರ (ಜಾರ್ಖಂಡ್) -ಶೇ 9.6, ಗುರುಗ್ರಾಮ (ಹರಿಯಾಣ) -ಶೇ 8.1, ಅಲ್ವರ್ (ರಾಜಸ್ಥಾನ) -ಶೇ 5.1, ಬೊಕಾರೊ (ಜಾರ್ಖಂಡ್) -ಶೇ 2.4, ಕರ್ಮತಾಂಡ-ಶೇ 2.4, ಗಿರಿದಿಹ್ (ಜಾರ್ಖಂಡ್)-ಶೇ 2.3 -ಗರಿಷ್ಠ ಸೈಬರ್ ಅಪರಾಧ ದಾಖಲಾಗಿರುವ ತಾಣಗಳಾಗಿವೆ ಎಂದು ಎಫ್‌ಸಿಆರ್‌ಎಫ್ ತಿಳಿಸಿದೆ.
ಸೈಬರ್ ಅಪರಾಧ ಗರಿಷ್ಠ ಪ್ರಮಾಣದಲ್ಲಿರುವ ಈ ಪ್ರದೇಶಗಳ ನಡುವೆ ಹಲವು ಸಮಾನ ಅಂಶಗಳೂ ಇವೆ. ಪ್ರಮುಖ ನಗರ ಕೇಂದ್ರಗಳಿಗೆ ಉತ್ತಮ ಸಂಪರ್ಕ ಸೌಲಭ್ಯವಿರುವುದು, ಸೈಬರ್ ಭದ್ರತೆಗೆ ಸಂಬಂಧಿಸಿ ಸೀಮಿತ ಪ್ರಮಾಣದಲ್ಲಿ ಮೂಲಸೌಲಭ್ಯವಿರುವುದು, ಆರ್ಥಿಕತೆಯ ಸವಾಲುಗಳು ಹಾಗೂ ಕಡಿಮೆ ಡಿಜಿಟಲ್ ಸಾಕ್ಷರತೆಯು ಈ ಅಂಶಗಳಾಗಿವೆ ಎಂದು ಅಧ್ಯಯನ ವರದಿ ಉಲ್ಲೇಖಿಸಿದೆ.
ಸೈಬರ್ ಅಪರಾಧ ಕೇಂದ್ರಗಳು ಎಂದು ಕುಖ್ಯಾತಿ ಗಳಿಸಿರುವ ನಗರಗಳು ಈಗಾಗಲೇ ಗಮನಾರ್ಹವಾದ ಸವಾಲುವೊಡ್ಡಿವೆ. ಈಗ ಗುರುತಿಸಿದ ಹೊಸ ತಾಣಗಳು ಸೈಬರ್ ಅಪರಾಧ ತಡೆಯಲು ಜನರು ಮತ್ತು ಸ್ಥಳೀಯ ಆಡಳಿತವು ಎಚ್ಚರಿಕೆ ವಹಿಸಬೇಕು ಎಂಬುದರತ್ತ ಗಮನಸೆಳೆದಿದೆ.
ಇಂಥ ಅಪರಾಧಗಳು ಗಣನೀಯವಾಗಿ ಹೆಚ್ಚಲು, ಸೀಮಿತ ಜ್ಞಾನವುಳ್ಳ ವ್ಯಕ್ತಿಯು ಲಭ್ಯವಿರುವ ಹ್ಯಾಕಿಂಗ್ ಪರಿಕರಗಳು ಮತ್ತು ಮಾಲ್‌ವೇರ್ ಅನ್ನು ಬಳಸಿಕೊಂಡು ಕೃತ್ಯ ಎಸಗಬಹುದು. ತಾಂತ್ರಿಕ ತೊಡಕು ಕಡಿಮೆ ಪ್ರಮಾಣದಲ್ಲಿದೆ ಎಂಬುದು ಕಾರಣ ಎಂದು ವರದಿ ತಿಳಿಸಿದೆ.
ನಿಮ್ಮ ಗ್ರಾಹಕರನ್ನು ಅರಿಯಿರಿ (ಕೆವೈಸಿ) ಕುರಿತ ಅಸಮರ್ಪಕ ವ್ಯವಸ್ಥೆ ಮತ್ತು ಆನ್‌ಲೈನ್ ವೇದಿಕೆಗಳಲ್ಲಿ ಕಟ್ಟುನಿಟ್ಟಿನ ತಪಾಸಣೆ ಪ್ರಕ್ರಿಯೆ ಇಲ್ಲದಿರುವುದರಿಂದ ದುಷ್ಕರ್ಮಿಗಳು ನಕಲಿ ಖಾತೆ ತೆರೆಯುತ್ತಾರೆ. ಇದು, ದುಷ್ಕರ್ಮಿಗಳ ನೆಲೆ ಪತ್ತೆಯನ್ನು ಕಠಿಣಗೊಳಿಸಿದೆ. ನಕಲಿ ದಾಖಲೆಗಳ ಸುಲಭ ಲಭ್ಯತೆ, ಬಾಡಿಗೆಗೆ ಸಿಮ್ ಕಾರ್ಡ್‌ಗಳು ಲಭ್ಯವಿರುವುದು ಇಂಥ ಕೃತ್ಯಗಳು ವ್ಯಾಪಕಗೊಳ್ಳಲು ಕಾರಣವಾಗಿವೆ ಎಂದು ತಿಳಿಸಿದೆ.
ಅಲ್ಲದೆ, ಕೃತಕ ಬುದ್ಧಿಮತ್ತೆ ಆಧಾರಿತ ಸೈಬರ್ ಟ್ರ್ಯಾಕ್ ಪರಿಕರಗಳು ಸುಲಭವಾಗಿ ದಕ್ಕಲಿದ್ದು, ಇದು ದುಷ್ಕರ್ಮಿಗಳು ತ್ವರಿತಗತಿಯಲ್ಲಿ ಕೃತ್ಯ ಎಸಗಲು ನೆರವಾಗಲಿದೆ. ಇದರಿಂದ ಅಧಿಕಾರಿಗಳಿಗೆ ದುಷ್ಕರ್ಮಿಗಳ ನೆಲೆ ಪತ್ತೆ ಮಾಡುವುದು ಕಷ್ಟವಾಗಿದೆ ಎಂದು ವರದಿ ತಿಳಿಸಿದೆ.
ಇನ್ನೊಂದೆಡೆ, ಸೈಬರ್ ಅಪರಾಧದಲ್ಲಿ ತೊಡಗಿರುವ ಸಿಂಡಿಕೇಟ್‌ಗಳು, ನಿರುದ್ಯೋಗಿಗಳನ್ನು ಇಂಥ ಕೃತ್ಯಕ್ಕೆ ನಿಯೋಜಿಸಿ ತರಬೇತಿ ನೀಡುತ್ತಿವೆ. ಇದು, ಸಂಭವನೀಯ ಅಪರಾಧಿಗಳ ಸಂಖ್ಯೆ ಗಣನೀಯವಾಗಿ ಏರಲು ಕಾರಣವಾಗುತ್ತಿದೆ ಎಂದು ವರದಿ ಅಭಿಪ್ರಾಯಪಟ್ಟಿದೆ.