ಮುಂಬೈ: ಭಾರೀ ಮಳೆಯ ನಡುವೆ ಗುರುವಾರ ಮುಂಬೈ ವಿಮಾನ ನಿಲ್ದಾಣದಲ್ಲಿ ಲ್ಯಾಂಡಿಂಗ್ ವೇಳೆ ಖಾಸಗಿ ಸಣ್ಣ ವಿಮಾನವೊಂದು ರನ್‌ವೇಯಿಂದ ಜಾರಿದ್ದು, ಅವಘಡದಲ್ಲಿ ವಿಮಾನದಲ್ಲಿದ್ದ ಎಂಟು ಮಂದಿ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ನಿನ್ನೆ ಸಂಜೆ ಐದು ಗಂಟೆಯ ಸುಮಾರಿಗೆ ಈ ಘಟನೆ ನಡೆದಿದ್ದು, ನಂತರ ಸ್ವಲ್ಪ ಸಮಯದವರೆಗೆ ವಿಮಾನ ನಿಲ್ದಾಣದ ಎರಡೂ ರನ್‌ವೇಗಳನ್ನು ಬಂದ್ ಮಾಡಲಾಗಿತ್ತು ಮತ್ತು ಒಂದು ರನ್‌ವೇ ಸುಮಾರು 6.47ಕ್ಕೆ ಕಾರ್ಯಾಚರಣೆ ಪುನರಾರಂಭಿಸಿತು ಎಂದು ಅಧಿಕಾರಿಗಳು ಹೇಳಿದ್ದಾರೆ.
ವಿಎಸ್‌ಆರ್ ವೆಂಚರ್ಸ್‌ಗೆ ಸೇರಿದ ಲಿಯರ್‌ಜೆಟ್ 45 ವಿಟಿ-ಡಿಬಿಎಲ್ ವಿಮಾನ ವಿಶಾಖಪಟ್ಟಣಂನಿಂದ ಆಗಮಿಸಿತ್ತು. ಮುಂಬೈ ವಿಮಾನ ನಿಲ್ದಾಣದಲ್ಲಿ ಇಳಿಯುವಾಗ ರನ್‌ವೇಯಿಂದ ಸ್ಕಿಡ್ ಆಗಿದೆ ಎಂದು ನಾಗರಿಕ ವಿಮಾನಯಾನ ಮಹಾನಿರ್ದೇಶನಾಲಯ(ಡಿಜಿಸಿಎ) ಪ್ರಕಟಣೆಯಲ್ಲಿ ತಿಳಿಸಿದೆ.
ಖಾಸಗಿ ವಿಮಾನವೊಂದು ಮುಂಬೈ ವಿಮಾನ ನಿಲ್ದಾಣದಲ್ಲಿ ರನ್‌ವೇ 27 ರಲ್ಲಿ ಲ್ಯಾಂಡಿಂಗ್ ವೇಳೆ ಸ್ಕಿಡ್ ಆಗಿದೆ. ಅದರಲ್ಲಿ ಆರು ಪ್ರಯಾಣಿಕರು ಮತ್ತು ಇಬ್ಬರು ಸಿಬ್ಬಂದಿ ಇದ್ದರು ಎಂದು ಡಿಜಿಸಿಎ ಹೇಳಿದೆ.