ಮುಂಬೈ: ಮುಂಬೈ ವಾಸಿಗಳು ಬೃಹನ್ಮುಂಬೈ ಎಲೆಕ್ಟ್ರಿಕ್ ಸಪ್ಲೈ ಅಂಡ್ ಟ್ರಾನ್ಸ್‌ಪೋರ್ಟ್ (ಬೆಸ್ಟ್) ಸಂಸ್ಥೆಯ ಕೊನೆಯ ಡೀಸೆಲ್ ಚಾಲಿತ ಡಬಲ್ ಡೆಕ್ಕರ್ ಬಸ್‌ಗೆ ವಿದಾಯ ಹೇಳಿದ್ದಾರೆ. ಈ ಸಮಯದಲ್ಲಿ ಜನರು ತಮ್ಮ ಡಬಲ್ ಡೆಕ್ಕರ್ ಬಸ್ ಪ್ರಯಾಣವನ್ನು ನೆನಪಿಸಿಕೊಂಡರು.
ಪ್ರಯಾಣಿಕರಿಗೆ ವಿಶೇಷ ಟಿಕೆಟ್
ಶುಕ್ರವಾರ ರಾತ್ರಿ ಸುಮಾರು 11.05 ಗಂಟೆಗೆ ಅಂಧೇರಿ ರೈಲು ನಿಲ್ದಾಣದಿಂದ ಪಶ್ಚಿಮ ಉಪನಗರದ ಸೀಪ್ಜ್ ಗ್ರಾಮಕ್ಕೆ ಮಾರ್ಗ 415 ರಲ್ಲಿ ಬಸ್ ತನ್ನ ಕೊನೆಯ ಪ್ರಯಾಣವನ್ನು ಪ್ರಾರಂಭಿಸಿತು ಎಂಬುದು ಗಮನಾರ್ಹ. ಗಮ್ಯಸ್ಥಾನವನ್ನು ತಲುಪಿದ ನಂತರ, ಅದು ಬೆಸ್ಟ್‌ನ ಮರೋಲ್ ಡಿಪೋಗೆ ತೆರಳಿತು.
ಸುದ್ದಿ ಸಂಸ್ಥೆ ಪಿಟಿಐಗೆ ಮಾತನಾಡಿದ ಬಸ್ ಕಂಡಕ್ಟರ್ ಗೋಪಾಲ್ ಸುಟಾಕೆ, 'ನಾನು 15 ವರ್ಷಗಳ ಕಾಲ ಡಬಲ್ ಡೆಕ್ಕರ್ ಬಸ್‌ನೊಂದಿಗೆ ಸ್ಮರಣೀಯ ಪ್ರಯಾಣ ಹೊಂದಿದ್ದೇನೆ. ಇದು 'ಮುಂಬೈನ ಹೆಮ್ಮೆ'. ನಾವು ಅದನ್ನು ಇನ್ಮುಂದೆ ನೋಡುವುದಿಲ್ಲ. ವಿಶೇಷ ಪ್ರಯಾಣ. ಕೊನೆಯ ಪ್ರಯಾಣದ ಸಮಯದಲ್ಲಿ ಹಳೆಯ ಟಿಕೆಟ್‌ಗಳನ್ನು ಪ್ರಯಾಣಿಕರಿಗೆ ವಿತರಿಸಲಾಯಿತು.' ಎಂದರು.
86 ವರ್ಷಗಳ ಹಿಂದೆ ಪ್ರಾರಂಭವಾದ ಈ ಪ್ರಯಾಣ
ಈ ಮೂಲಕ 86 ವರ್ಷಗಳ ಹಿಂದೆ ನಗರದ ರಸ್ತೆಗಳಲ್ಲಿ ಪರಿಚಯಿಸಲಾದ ಕೆಂಪು ಡೀಸೆಲ್ ಚಾಲಿತ ಡಬಲ್ ಡೆಕ್ಕರ್ ಬಸ್ಗಳ ಯುಗವು ಕೊನೆಗೊಂಡಿತು. ಆದರೂ ಮುಂಬೈ ರಸ್ತೆಗಳಲ್ಲಿ ಇನ್ನೂ ಡಬಲ್ ಡೆಕ್ಕರ್ ಬಸ್‌ಗಳು ಓಡಾಡುತ್ತಿವೆ, ಅವುಗಳು ಇವಿ ಡಬಲ್ ಡೆಕ್ಕರ್ ಬಸ್‌ಗಳಾಗಿವೆ, ಇವುಗಳನ್ನು ಈ ವರ್ಷದ ಫೆಬ್ರವರಿಯಲ್ಲಿ ಪ್ರಾರಂಭಿಸಲಾಯಿತು. ಅಲ್ಲದೆ, ದಕ್ಷಿಣ ಮುಂಬೈನಲ್ಲಿ ಪ್ರೇಕ್ಷಣೀಯ ಸ್ಥಳಗಳನ್ನು ವೀಕ್ಷಿಸಲು ಬಳಸುವ ಮೂರು ತೆರೆದ ಡೆಕ್ ಡೀಸೆಲ್ ಚಾಲಿತ ಡಬಲ್ ಡೆಕ್ಕರ್‌ಗಳು ಇನ್ನೂ ಕಾರ್ಯನಿರ್ವಹಿಸುತ್ತಿವೆ. ಅಕ್ಟೋಬರ್ 5 ರಂದು ಈ ಬಸ್‌ಗಳನ್ನು ರಸ್ತೆಗಿಳಿಸಲಾಗುವುದು ಎಂದು ಬೆಸ್ಟ್ ಅಧಿಕಾರಿಗಳು ತಿಳಿಸಿದ್ದಾರೆ.
ಹೂಮಾಲೆಗಳಿಂದ ಅಲಂಕೃತಗೊಂಡಿದ್ದ ಬಸ್ಸುಗಳು
ಹೂವಿನ ಹಾರಗಳು ಮತ್ತು ಬಲೂನ್‌ಗಳಿಂದ ಅಲಂಕರಿಸಲ್ಪಟ್ಟ ಕೊನೆಯ ಡೀಸೆಲ್ ಚಾಲಿತ ಡಬಲ್ ಡೆಕ್ಕರ್ ಶುಕ್ರವಾರ ಬೆಳಗ್ಗೆ ಬೆಸ್ಟ್‌ನ ಮರೋಲ್ ಡಿಪೋದಿಂದ ಹೊರಬಂದು ದಿನವಿಡೀ ಗಮನ ಸೆಳೆಯಿತು. ಬಸ್ ಒಳಗೆ ಮತ್ತು ಹೊರಗೆ ಜನರು ಫೋಟೋ, ಸೆಲ್ಫಿ ತೆಗೆದುಕೊಳ್ಳುತ್ತಿರುವುದು ಕಂಡು ಬಂತು.
ಜನರ ಮನವಿ ಮೇರೆಗೆ ತಡರಾತ್ರಿವರೆಗೂ ಓಡಾಡಿದ ಬಸ್
ರಾತ್ರಿ 9.19 ಕ್ಕೆ ಅಂಧೇರಿ ಪೂರ್ವದಿಂದ ಬಸ್ ತನ್ನ ಕೊನೆಯ ಪ್ರಯಾಣವನ್ನು ಮಾಡಬೇಕಿತ್ತು, ಆದರೆ ಸಾರ್ವಜನಿಕರ ಬೇಡಿಕೆಯಿಂದಾಗಿ, ಬೆಸ್ಟ್ ಕೆಲವು ಹೆಚ್ಚುವರಿ ಸೇವೆಗಳನ್ನು ನಡೆಸಿತು. ಕೊನೆಯ ಪ್ರಯಾಣಿಕರಲ್ಲಿ ಒಬ್ಬರಾದ ಯಶ್ ವಿನಯ್ ಸುರ್ವೆ ಅವರಿಗೆ ಇದು ಭಾವನಾತ್ಮಕ ದಿನವಾಗಿದೆ. 'ನಾನು ನನ್ನ ಬಾಲ್ಯವನ್ನು ಡಬಲ್ ಡೆಕ್ಕರ್ ಬಸ್‌ಗಳಲ್ಲಿ ಸವಾರಿ ಮಾಡುವುದರಲ್ಲಿ ಕಳೆದಿದ್ದೇನೆ. ಅನಿಕ್ ಡಿಪೋದಲ್ಲಿನ ವಸ್ತುಸಂಗ್ರಹಾಲಯದಲ್ಲಿ ಪ್ರತಿ ಮಾದರಿಯ ಕನಿಷ್ಠ ಒಂದು ಬಸ್ ಅನ್ನು ಇರಿಸಲು ನಾವು ಬೆಸ್ಟ್ ಆಡಳಿತವನ್ನು ವಿನಂತಿಸಿದ್ದೇವೆ' ಎಂದು ಅವರು ಹೇಳಿದರು.
1937 ರಲ್ಲಿ ಪ್ರಾರಂಭವಾದ ಪ್ರಯಾಣ
ಮೊದಲ ಡಬಲ್ ಡೆಕ್ಕರ್ ಬಸ್ ಅನ್ನು ಮುಂಬೈನ ರಸ್ತೆಗಳಲ್ಲಿ 1937 ರಲ್ಲಿ ಪರಿಚಯಿಸಲಾಯಿತು. 1990 ರ ದಶಕದ ಮಧ್ಯಭಾಗದಲ್ಲಿ, BEST ತನ್ನ ಫ್ಲೀಟ್‌ನಲ್ಲಿ ಸುಮಾರು 900 ಡಬಲ್ ಡೆಕ್ಕರ್ ಬಸ್‌ಗಳನ್ನು ಹೊಂದಿತ್ತು. ಆದರೆ, ಕ್ರಮೇಣ ಅದರ ಸಂಖ್ಯೆಯು ಕಡಿಮೆಯಾಗಲು ಪ್ರಾರಂಭಿಸಿತು. 2010 ರಲ್ಲಿ ಸುಮಾರು 125 ಬಸ್‌ಗಳು ಉಳಿದಿವೆ. 2019 ರ ವೇಳೆಗೆ ಇದು ಕೇವಲ 50 ಬಸ್‌ಗಳಿಗೆ ಕಡಿಮೆಯಾಗಿದೆ.
ಜುಲೈ 2023ಕ್ಕೆ ಆಗಮಿಸಲಿವೆ 900 ಹೊಸ ಬಸ್‌ಗಳು
'ಜುಲೈ 2024 ರ ಅಂತ್ಯದ ವೇಳೆಗೆ ಮುಂಬೈನ ಜನರಿಗೆ ಒಟ್ಟು 900 ಹವಾನಿಯಂತ್ರಿತ ಡಬಲ್ ಡೆಕ್ಕರ್ ಬಸ್ ಸೇವೆಗಳನ್ನು ಒದಗಿಸಲಾಗುವುದು' ಎಂದು ಬೆಸ್ಟ್ ತನ್ನ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ. 'ಹೊಸ ಬಸ್‌ಗಳು ಹವಾನಿಯಂತ್ರಿತ ಹಾಗೂ ಎಲೆಕ್ಟ್ರಿಕ್ ಆಗಿರುವುದರಿಂದ ಮುಂದಿನ ಪೀಳಿಗೆಗಳು ಮೇಲಿನ ಡೆಕ್ ಪ್ರಯಾಣ ಅನುಭವಿಸಲು ಸಾಧ್ಯವಾಗುವುದಿಲ್ಲ' ಎಂದು ಪ್ರಯಾಣಿಕರಾಗಿದ್ದ ವರುಣ್ ದೀಕ್ಷಿತ್ ಹೇಳಿದರು.