ಲಖನೌ: ಚಾಲ್ತಿಯಲ್ಲಿರುವ ಜ್ಞಾನವಾಪಿ ಮಸೀದಿ ಪ್ರಾಂಗಣ ಸಮೀಕ್ಷೆ ಪೂರ್ಣಗೊಳಿಸುವುದಕ್ಕೆ ಆರ್ಕಿಯಲಾಜಿಕಲ್ ಸರ್ವೆ ಆಫ್ ಇಂಡಿಯಾ (ಎಎಸ್ಐ) ಇನ್ನೂ 8 ವಾರಗಳ ಕಾಲಾವಕಾಶ ಕೇಳಿದೆ.
ವಾರಣಾಸಿ ಕೋರ್ಟ್ ಗೆ ಎಎಸ್ಐ ಈ ಬಗ್ಗೆ ವಿಶೇಷ ಅರ್ಜಿ ಸಲ್ಲಿಸಿದ್ದು, ಮುಂದಿನ ವಿಚಾರಣೆಯನ್ನು ಕೋರ್ಟ್ ಸೆಪ್ಟೆಂಬರ್ 8ಕ್ಕೆ ಮುಂದೂಡಿದೆ.
ಶನಿವಾರದಂದು ಅಂದರೆ ತನಿಖೆಯ 28 ನೇ ದಿನದಂದು ಎಎಸ್ಐ ಸಮೀಕ್ಷೆ ವರದಿಯನ್ನು ಸಲ್ಲಿಸಬೇಕಿತ್ತು. ಇದಕ್ಕೂ ಮುನ್ನ, ಹಿಂದೂಗಳನ್ನು ಪ್ರತಿನಿಧಿಸುವ ಅಡ್ವೊಕೇಟ್ ವಿಷ್ಣು ಶಂಕರ್ ಜೈನ್, ಸಮೀಕ್ಷಾ ವರದಿ ನೀಡಲು ಹೆಚ್ಚಿನ ಕಾಲಾವಕಾಶ ಪಡೆಯಲು ಎಎಸ್‌ಐ ಚಿಂತನೆ ನಡೆಸಿದೆ ಎಂದು ಹೇಳಿದ್ದಾರೆ.
ಈ ಬಗ್ಗೆ ವಿಚಾರಣೆ ನಡೆದ ಬಳಿಕವಷ್ಟೇ ಕಾಲಮಿತಿ ವಿಸ್ತರಣೆ ಬಗ್ಗೆ ಮಾಹಿತಿ ಸ್ಪಷ್ಟವಾಗಲಿದೆ ಎಂದು ಜೈನ್ ಹೇಳಿದ್ದಾರೆ. ಮುಂದಿನ ಆದೇಶದವರೆಗೆ ಪೊಲೀಸ್ ಪಡೆಗಳ ನಿಯೋಜನೆಯನ್ನು ವಿಸ್ತರಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.
ASI ಯಿಂದ ಜ್ಞಾನವಾಪಿ ಮಸೀದಿ ಆವರಣದ ವೈಜ್ಞಾನಿಕ ಸಮೀಕ್ಷೆಯು ಆಗಸ್ಟ್ 4 ರಿಂದ ಅಲಹಾಬಾದ್ ಉಚ್ಚ ನ್ಯಾಯಾಲಯದ ಅನುಸಾರವಾಗಿ ನಡೆಯುತ್ತಿದೆ. ಬೆಂಗಳೂರಿನ ಸದಸ್ಯರನ್ನು ಹೊಂದಿರುವ ASI ತಂಡವು ಗ್ರೌಂಡ್ ಪೆನೆಟ್ರೇಟಿಂಗ್ ರಾಡಾರ್ (GPR) ಮೂಲಕ ಸಮೀಕ್ಷೆ ನಡೆಸಿತು. ಮಸೀದಿ ಆವರಣದಲ್ಲಿ ಹಲವು ಸ್ಥಳಗಳನ್ನು ಸರ್ವೇಯರ್‌ಗಳು ಗುರುತು ಹಾಕಿದ್ದಾರೆ.
ಇದುವರೆಗೆ ಎಎಸ್ ಐ ತಂಡದ 40 ಮಂದಿ ಕಳೆದ 27 ದಿನಗಳಿಂದ ಸಮೀಕ್ಷೆ ನಡೆಸುತ್ತಿದ್ದಾರೆ. ಎಎಸ್‌ಐ ತಂಡವು ಜ್ಞಾನವಾಪಿ ಮಸೀದಿಯ ಸಂಪೂರ್ಣ ಆವರಣವನ್ನು ಶುದ್ದೀಕರಣ ಕೊಳದ ಸುತ್ತಲೂ ಮುಚ್ಚಿದ ಪ್ರದೇಶವನ್ನು ಹೊರತುಪಡಿಸಿ ಸಮೀಕ್ಷೆಗೆ ಒಳಪಡಿಸಿದೆ.