ತಿರುವನಂತಪುರಂ: ಹತ್ತು ವರ್ಷದ ಬಾಲಕಿಗೆ ಅಮಾನುಷವಾಗಿ ಕಿರುಕುಳ ನೀಡಿ ಬೆದರಿಸಿದ ಪ್ರಕರಣದಲ್ಲಿ ಆರೋಪಿಗೆ 91 ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆ ವಿಧಿಸಲಾಗಿದೆ.
ತಿರುವಳ್ಳಂ ಗ್ರಾಮದ ಕೊಳಿಯೂರು ಚಾಂಟಾ ಬಳಿಯ ಮಹಾತ್ಮ ಅಯ್ಯಂಕಾಳಿ ನಗರದ ರತೀಶ್ (36) ಎಂಬಾತನಿಗೆ ನ್ಯಾಯಾಲಯ ಶಿಕ್ಷೆ ವಿಧಿಸಿದೆ. ಕಾಟ್ಟಾಕಡ ಫಾಸ್ಟ್ ಟ್ರ್ಯಾಕ್ ಪೋಕ್ಸೋ ನ್ಯಾಯಾಲಯದ ನ್ಯಾಯಾಧೀಶ ಎಸ್. ರಮೇಶ್ ಕುಮಾರ್ ಶಿಕ್ಷೆ ವಿಧಿಸಿದರು.
2,10,000 ದಂಡವನ್ನೂ ವಿಧಿಸಲಾಗಿದೆ. ದಂಡದ ಮೊತ್ತವನ್ನು ಸಂತ್ರಸ್ಥೆಗೆ ಪಾವತಿಸುವಂತೆಯೂ ನ್ಯಾಯಾಲಯ ಆದೇಶಿಸಿದೆ. ಇದು ಪ್ರಸ್ತುತ ಕೇರಳದಲ್ಲಿ ಎರಡನೇ ಅತಿ ದೊಡ್ಡ ಪೋಕ್ಸೋ ಪ್ರಕರಣವಾಗಿದೆ.
ಘಟನೆಯು 2018 ರಲ್ಲಿ ನಡೆದಿತ್ತು. ಆರೋಪಿ ತನ್ನ ಪೋನ್‍ನಲ್ಲಿರುವ ಚಿತ್ರಗಳನ್ನು ತೋರಿಸುತ್ತೇನೆ ಎಂದು ಮಗುವಿಗೆ ನಂಬಿಸಿ ಹಲವು ದಿನಗಳ ಕಾಲ ಕಿರುಕುಳ ನೀಡಿದ್ದ. ಜೊತೆಗೆ ಬಾಯಿಬಿಟ್ಟರೆ ಮತ್ತೆ ತೊಂದರೆ ಕೊಡುವುದಾಗಿ ಬಾಲಕಿಗೆ ಬೆದರಿಕೆ ಹಾಕಿದ್ದ. ಬಳಿಕ ಮಗು ತಾಯಿಗೆ ಮಾಹಿತಿ ನೀಡಿದ್ದು, ಅವರು ಚೈಲ್ಡ್ ಲೈನ್ ಸಹಾಯದಿಂದ ಮಲಯಂಖಿಳ ಪೋಲೀಸರಿಗೆ ದೂರು ನೀಡಿದ್ದರು.
ಮಲಯಂಖಿಳ ಎಸ್‍ಎಚ್‍ಒ ಪಿ.ಆರ್. ಸಂತೋಷ್ ನ್ಯಾಯಾಲಯಕ್ಕೆ ದೊÁ್ಷರೋಪ ಪಟ್ಟಿ ಸಲ್ಲಿಸಿದ್ದರು. ಪ್ರಾಸಿಕ್ಯೂಷನ್ ಕಡೆಯಿಂದ 16 ಸಾಕ್ಷಿಗಳನ್ನು ವಿಚಾರಣೆ ನಡೆಸಲಾಯಿತು. 12 ದಾಖಲೆಗಳನ್ನು ಸಲ್ಲಿಸಲಾಗಿತ್ತು. ಪ್ರಾಸಿಕ್ಯೂಷನ್ ಪರವಾಗಿ ವಿಶೇಷ ಪಬ್ಲಿಕ್ ಪ್ರಾಸಿಕ್ಯೂಟರ್ ವಕೀಲ ಡಿ.ಆರ್.ಪ್ರಮೋದ್ ವಾದ ಮಂಡಿಸಿದ್ದರು.