ನವದೆಹಲಿ: ಕರ್ನಾಟಕ ಸೇರಿದಂತೆ 11 ರಾಜ್ಯಗಳಲ್ಲಿ ಸಂಚರಿಸಲಿರುವ 9 ವಂದೇ ಭಾರತ್ ರೈಲುಗಳಿಗೆ ಪ್ರಧಾನಿ ನರೇಂದ್ರ ಮೋದಿ ಇಂದು ವಿಡಿಯೊ ಕಾನ್ಸರನ್ ಮೂಲಕ ಏಕಕಾಲಕ್ಕೆ ಚಾಲನೆ ನೀಡಿದ್ದಾರೆ.
ಈ ವೇಳೆ ಮಾತನಾಡಿದ ಮೋದಿ, 'ಈ ರೈಲುಗಳು 11 ರಾಜ್ಯಗಳಲ್ಲಿ ಸಂಪರ್ಕವನ್ನು ಸುಧಾರಿಸಲು ಸಹಾಯ ಮಾಡುತ್ತವೆ.
'ಕಳೆದ ಹಲವು ವರ್ಷಗಳಿಂದ ಅಭಿವೃದ್ಧಿ ಕಾಣದೆ ಇರುವ ಹಲವಾರು ರೈಲು ನಿಲ್ದಾಣಗಳನ್ನು ಅಭಿವೃದ್ಧಿಪಡಿಸುವ ಕೆಲಸಗಳು ಈಗ ನಡೆಯುತ್ತಿವೆ. ಆಜಾದಿ ಕಾ ಅಮೃತ್ ಕಾಲದಲ್ಲಿ ಅಭಿವೃದ್ಧಿಪಡಿಸುವ ಈ ಎಲ್ಲಾ ನಿಲ್ದಾಣಗಳನ್ನು ಅಮೃತ್ ಭಾರತ್ ನಿಲ್ದಾಣಗಳು ಎಂದು ಕರೆಯಲಾಗುವುದು' ಎಂದು ಹೇಳಿದರು.
'ಈಗಾಗಲೇ ದೇಶದಾದ್ಯಂತ 25 ವಂದೇ ಭಾರತ್ ರೈಲುಗಳು ಸಂಚರಿಸುತ್ತಿವೆ.ಈ ಪಟ್ಟಿಗೆ ಇದೀಗ 9 ರೈಲುಗಳು ಸೇರ್ಪಡೆಗೊಂಡಿವೆ. ವಂದೇ ಭಾರತ್ ರೈಲುಗಳ ಜನಪ್ರಿಯತೆ ನಿರಂತರವಾಗಿ ಹೆಚ್ಚುತ್ತಿದ್ದು, ಇಲ್ಲಿಯವರೆಗೆ 1.11 ಲಕ್ಷಕ್ಕೂ ಹೆಚ್ಚು ಪ್ರಯಾಣಿಕರು ಪ್ರಯಾಣ ಮಾಡಿದ್ದಾರೆ' ಎಂದು ಹೇಳಿದರು.
ಈ ವೇಳೆ ಮಾತನಾಡಿದ ರೈಲ್ವೇ ಸಚಿವ ಅಶ್ವಿನ್ ವೈಷ್ಣವ್, 'ಪ್ರಧಾನಿ ಮೋದಿಯವರ ದೂರದೃಷ್ಟಿಯಿಂದ ಕಳೆದ ಒಂಬತ್ತು ವರ್ಷಗಳಲ್ಲಿ ರೈಲ್ವೇ ವಲಯದಲ್ಲಿ ಸಾಕಷ್ಟು ಬದಲಾವಣೆಗಳಾಗಿವೆ' ಎಂದರು.
ರೈಲುಗಳ ವಿವರ:
ಹೈದರಾಬಾದ್ (ಕಾಚಿಗುಡ)- ಬೆಂಗಳೂರು (ಯಶವಂತಪುರ), ಚೆನ್ನೈ- ತಿರುನಲ್ವೇಲಿ, ವಿಜಯವಾಡ- ಚೆನ್ನೈ, ಪಟ್ನಾ- ಹೌರಾ, ರೌರ್‌ಕೇಲಾ- ಪುರಿ, ಕಾಸರಗೋಡು- ಅಲಪ್ಪುಳ- ತಿರುವನಂತಪುರಂ, ಜೈಪುರ- ಉದಯಪುರ, ರಾಂಚಿ- ಟಾಟಾ ನಗರ- ಕೋಲ್ಕತ್ತ, ಜಾಮಾನಗರ- ರಾಜ್‌ಕೋಟ್- ಅಹಮದಾಬಾದ್ ಮಾರ್ಗಗಳಲ್ಲಿ ರೈಲುಗಳು ಸಂಚಲಿಸಲಿವೆ.
ಕಾಸರಗೋಡು- ತಿರುವನಂತಪುರ ಮಾರ್ಗ ಮಧ್ಯದ ರೈಲು ಇದೇ ಮೊದಲ ಬಾರಿಗೆ ಕೇಸರಿ ಬಣ್ಣದಲ್ಲಿರಲಿದೆ. ಉಳಿದ ರೈಲುಗಳು ನೀಲಿ- ಬಿಳಿ ಬಣ್ಣಗಳ ಸಂಯೋಜನೆಯಲ್ಲಿರಲಿವೆ.