ಟೊರಂಟೊ: ಖಾಲಿಸ್ತಾನಿ ಪ್ರತ್ಯೇಕತಾವಾದಿ ನಾಯಕ ಹರದೀಪ್ ಸಿಂಗ್ ನಿಜ್ಜರ್ ಹತ್ಯೆ ಹಿಂದೆ ಭಾರತದ ಕೈವಾಡ ಇರಬಹುದು ಎಂಬುದಕ್ಕೆ ಸಂಬಂಧಿಸಿದ ಪುರಾವೆಗಳನ್ನು 'ಹಲವು ವಾರಗಳ ಹಿಂದೆಯೇ' ಆ ದೇಶದ ಜೊತೆ ಹಂಚಿಕೊಳ್ಳಲಾಗಿತ್ತು ಎಂದು ಕೆನಡಾ ಪ್ರಧಾನಿ ಜಸ್ಟಿನ್ ಟ್ರುಡೊ ಹೇಳಿದ್ದಾರೆ.
ಈ ಗಂಭೀರ ವಿಷಯದಲ್ಲಿ ಸತ್ಯಾಂಶಗಳನ್ನು ಹೊರತರಲು ಭಾರತವು ಕೆನಡಾಕ್ಕೆ ನೆರವು ನೀಡಲು ಬದ್ಧವಾಗಿರಬೇಕು ಎಂದೂ ಟುಡ್ರೊ ತಿಳಿಸಿದ್ದಾರೆ.
'ಭಾರತದೊಂದಿಗೆ ನಾವು ನಂಬಲರ್ಹ ಆರೋಪಗಳನ್ನು ಕೆಲ ವಾರಗಳ ಹಿಂದೆಯೇ ಹಂಚಿಕೊಂಡಿದ್ದೇವೆ' ಎಂದು ಅವರು ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಹೇಳಿದ್ದಾರೆ.
ಬ್ರಿಟಿಷ್ ಕೊಲಂಬಿಯಾದಲ್ಲಿ ಜೂನ್ 18ರಂದು ನಡೆದ ನಿಜ್ಜರ್ ಹತ್ಯೆಯಲ್ಲಿ ಭಾರತದ ಪ್ರಬಲ ಪಾತ್ರವಿರುವುದಾಗಿ ಟ್ರುಡೊ ಆರೋಪಿದ್ದಾರೆ. ಇದರಿಂದಾಗಿ ಎರಡೂ ದೇಶಗಳ ನಡುವೆ ರಾಜತಾಂತ್ರಿಕ ಬಿಕ್ಕಟ್ಟು ಏರ್ಪಟ್ಟಿದೆ.
ಕೆನಡಾಕ್ಕೆ ಪರಾರಿಯಾಗಿದ್ದ:
ಈ ಮಧ್ಯೆ, ನಿಜ್ಜರ್ ಒಬ್ಬ ಉಗ್ರ. ಆತ ಉಗ್ರರಿಗೆ ತರಬೇತಿ ಶಿಬಿರ ನಡೆಸುತ್ತಿದ್ದ ಮತ್ತು ಭಯೋತ್ಪಾದನಾ ಚಟುವಟಿಕೆಗಳಿಗೆ ಆರ್ಥಿಕ ನೆರವು ಒದಗಿಸುತ್ತಿದ್ದ ಎಂದು ಮೂಲಗಳು ಹೇಳಿವೆ.
ನಿಜ್ಜರ್ ಧಾರ್ಮಿಕ ನಾಯಕನಲ್ಲ ಅಥವಾ ಸಾಮಾಜಿಕವಾಗಿ ಹೆಸರು ಗಳಿಸಿದ ವ್ಯಕ್ತಿಯಲ್ಲ. 1980ರ ದಶಕದ ಕೊನೆಯಲ್ಲಿ ಮತ್ತು 1990ರ ಆರಂಭದಲ್ಲಿ ಪಂಜಾಬ್‌ನಲ್ಲಿ ನಡೆದಿದ್ದ 200 ಜನರ ಹತ್ಯೆ ಪ್ರಕರಣದಲ್ಲಿ ಭಾಗಿಯಾಗಿದ್ದ ಗುರ್ದೀಪ್ ಸಿಂಗ್ ಅಲಿಯಾಸ್ ದೀಪಾ ಹೆರನ್‌ವಾಲಾನ ಆಪ್ತ ಸಹಚರ. ಹೆರನ್‌ವಾಲಾ ನಿಷೇಧಿತ ಖಾಲಿಸ್ತಾನ್ ಕಮಾಂಡೊ ಪಡೆಗೆ ಸೇರಿದ್ದ.
ಭಾರತದಲ್ಲಿ ಪೊಲೀಸರು ಬಂಧಿಸುವರೆಂದು ಹೆದರಿ ನಿಜ್ಜರ್ 1996ರಲ್ಲಿ ಕೆನಡಾಕ್ಕೆ ಪರಾರಿಯಾಗಿದ್ದ. ಉಗ್ರರ ಚಟುವಟಿಕೆಗಳಿಗೆ ಹಣ ಒದಗಿಸಲು ಮಾದಕ ವಸ್ತು ಸಾಗಣೆ, ಸುಲಿಗೆಯಂತಹ ಅಕ್ರಮ ಚಟುವಟಿಕೆಗಳಲ್ಲಿ ತೊಡಗಿಕೊಂಡಿದ್ದ ಎಂದು ಮೂಲಗಳು ವಿವರಿಸಿವೆ.
ಭಾರತದಲ್ಲಿ ದಾಳಿಗಳನ್ನು ನಡೆಸಲು ಆತ ಕೆನಡಾದ ಬ್ರಿಟಿಷ್ ಕೊಲಂಬಿಯಾದಲ್ಲಿ ಉಗ್ರರ ತರಬೇತಿ ಶಿಬಿರ ನಡೆಸುತ್ತಿದ್ದ. ವರ್ಷದ ಹಿಂದೆ ನಿಷೇಧಿತ ಖಾಲಿಸ್ತಾನ್ ಟೈಗರ್ ಪಡೆ ಅಥವಾ ಕೆಟಿಎಫ್‌ನ ಕಾರ್ಯಾಚರಣೆ ಮುಖ್ಯಸ್ಥನಾಗಿದ್ದ. ಕೆಟಿಎಫ್ ಸದಸ್ಯರಿಗೆ ತರಬೇತಿ, ಆರ್ಥಿಕ ನೆರವು ನೀಡುವಲ್ಲಿ ಈತನ ಪಾತ್ರವಿದೆ ಎಂದು ಸರ್ಕಾರ 2020ರಲ್ಲಿ ಆರೋಪಿಸಿತ್ತು.
2012ರಲ್ಲಿ ಪಾಕಿಸ್ತಾನಕ್ಕೆ ಭೇಟಿ ನೀಡಿ ನಿಷೇಧಿತ ಉಗ್ರರ ಸಂಘಟನೆ ಬಬ್ಬರ್ ಖಾಲ್ಸಾ ಇಂಟರ್‌ನ್ಯಾಷನಲ್‌ನ ಮುಖ್ಯಸ್ಥ ಜಗತಾರ್ ಸಿಂಗ್ ತಾರಾನ ಸಂಪರ್ಕಕ್ಕೆ ಬಂದಿದ್ದ. ತಾರಾ ಈತನಿಗೆ ಶಸ್ತ್ರಾಸ್ತ್ರ ಪೂರೈಸಿದ್ದಲ್ಲದೆ 2012 ಮತ್ತು 2013ರಲ್ಲಿ ತರಬೇತಿಯನ್ನೂ ನೀಡಿದ್ದ. ನಿಜ್ಞರ್‌ಗೆ ಜಿಪಿಎಸ್ ಸಾಧನ ಬಳಕೆ ಬಗ್ಗೆ ತರಬೇತಿ ನೀಡಲು ಅಮೆರಿಕ ಮೂಲದ ಹರ್ಜೊತ್ ಸಿಂಗ್‌ನನ್ನು ಕೆನಡಾಕ್ಕೆ ಕಳುಹಿಸಲಾಗಿತ್ತು. ನಿಜ್ಜರ್ ಕೂಡ ತಾರಾನಿಗೆ ₹ 2.90 ಲಕ್ಷ ಹಣ ರವಾನಿಸಿದ್ದ ಎಂದು ಮೂಲಗಳು ತಿಳಿಸಿವೆ.
ಈತನ ಅಣತಿಯಂತೆ ನಿಜ್ಜರ್ 2014ರಲ್ಲಿ ಹರಿಯಾಣದ ಸಿರ್ಸಾದಲ್ಲಿನ ಡೇರಾ ಸಚ್ಚಾ ಸೌದಾದ ಕೇಂದ್ರ ಕಚೇರಿ ಮೇಲೆ ದಾಳಿ ನಡೆಸಲು ಯೋಜಿಸಿದ್ದ. ಆದರೆ ಆತನಿಗೆ ಭಾರತದ ವೀಸಾ ಸಿಗದ ಕಾರಣ ಇದು ಸಾಧ್ಯವಾಗಿರಲಿಲ್ಲ ಎಂದು ಹೇಳಿವೆ.
ಈತನ ವಿರುದ್ಧ ಹಲವು ಪ್ರಕರಣಗಳನ್ನು ದಾಖಲಿಸಿದ್ದ ಎನ್‌ಐಎ, ಇಂಟರ್‌ಪೋಲ್ ರೆಡ್ ಕಾರ್ನರ್ ನೋಟಿಸನ್ನೂ ನೀಡಿತ್ತು. ಕೆನಡಾದಲ್ಲಿ ಭಾರತ ವಿರೋಧಿ ಪ್ರತಿಭಟನೆಗಳನ್ನು ಮಾಡಿದ್ದ ಮತ್ತು ಭಾರತದ ರಾಜತಾಂತ್ರಿಕರಿಗೆ ಬೆದರಿಕೆ ಒಡ್ಡಿದ್ದ ಎಂದು ಮೂಲಗಳು ತಿಳಿಸಿವೆ.
- ಡೇವಿಡ್ ಕೋಹೆನ್, ಕೆನಡಾದ ಅಮೆರಿಕ ರಾಯಭಾರಿQuote - ನಿಜ್ಜರ್ ಹತ್ಯೆಯಲ್ಲಿ ಭಾರತದ ಕೈವಾಡವಿದೆ ಎಂದು ಕೆನಡಾ ಪ್ರಧಾನಿ ಜಸ್ಟಿನ್ ಟ್ರುಡೊ ಆರೋಪ ಮಾಡಲು 'ಫೈವ್ ಐಸ್ ಇಟೆಲಿಜೆನ್ಸ್ ನೆಟ್‌ವರ್ಕ್' ಸಂಸ್ಥೆ ನೀಡಿದ್ದ ಗುಪ್ತಚರ ಮಾಹಿತಿಯೇ ಕಾರಣ 'ಆರೋಪ ಸಾಬೀತಾಗುವವರೆಗೆ ಪ್ರತಿಯೊಬ್ಬರೂ ಅಮಾಯಕರೇ ಮೊದಲು ಸತ್ಯ ಹೊರ ಬರಲಿ' ಎಂದು ಕೆನಡಾಕ್ಕೆ ಈ ಹಿಂದೆ ಭಾರತದ ರಾಜತಾಂತ್ರಿಕ ಅಧಿಕಾರಿಯಾಗಿದ್ದ ವಿಕಾಸ್ ಸ್ವರೂಪ್ ಹೇಳಿದ್ದಾರೆ. ಉಭಯ ರಾಷ್ಟ್ರಗಳ ರಾಜತಾಂತ್ರಿಕ ಬಿಕ್ಕಟ್ಟು ಉಲ್ಬಣಕ್ಕೆ ಕಾರಣರಾದ ಪ್ರಧಾನಿ ಟುಡ್ರೊ ಅವರ ಅಜಾಗರೂಕ ಹೇಳಿಕೆಯನ್ನು ಟೀಕಿಸಿದ ಅವರು ವಿವಾದವನ್ನು ತಣಿಸಲು ಕೆನಡಾ ಕ್ರಮ ಕೈಗೊಳ್ಳಬೇಕು ಮತ್ತು ಸತ್ಯ ಹೊರಬರಲು ಅವಕಾಶ ಮಾಡಿಕೊಡಬೇಕು ಎಂದು ಒತ್ತಾಯಿಸಿದರು. ಸ್ವರೂಪ್ ಅವರು 2017ರಿಂದ 2019ರವರೆಗೆ ಕೆನಡಾದಲ್ಲಿ ಭಾರತದ ಹೈಕಮಿಷನರ್ ಆಗಿ ಸೇವೆ ಸಲ್ಲಿದ್ದರು. ಖಾಲಿಸ್ತಾನಿ ಪ್ರತ್ಯೇಕತಾವಾದಿಗಳಿಗೆ ಸುರಕ್ಷಿತ ತಾಣ ಒದಗಿಸುವುದಕ್ಕೆ ಕೆನಡಾ ಮುಂಬರುವ ದಿನಗಳಲ್ಲಿ ವಿಷಾದಿಸಬೇಕಾಗುತ್ತದೆ ಎಂದರು.ಮೊದಲು ಸತ್ಯ ಹೊರ ಬರಲಿ ಖಂಡಿಸಿದ ಕೆನಡಾ ಅಧಿಕಾರಿಗಳು ಕೆನಡಾದ ಸಾರ್ವಜನಿಕ ಭದ್ರತೆ ಇಲಾಖೆಯ ಉನ್ನತಾಧಿಕಾರಿಗಳು ಮತ್ತು ರಾಜಕಾರಣಿಗಳು 'ಆನ್‌ಲೈನ್ ದ್ವೇಷಪೂರಿತ ವಿಡಿಯೊ'ವನ್ನು ಖಂಡಿಸಿದ್ದಾರೆ. ಜೊತೆಗೆ ಕೆನಡಾದಲ್ಲಿ ಹಿಂದೂಗಳು ಸುರಕ್ಷಿತರಾಗಿದ್ದಾರೆ ಎಂದು ಹೇಳಿದ್ದಾರೆ. 'ಕೆನಡಾದಲ್ಲಿ ನೆಲೆಸಿರುವ ಭಾರತೀಯ ಹಿಂದೂಗಳು ಸ್ವದೇಶಕ್ಕೆ ಮರಳಿ' ಎಂದು ಬೆದರಿಕೆಯೊಡ್ಡಿ ಖಾಲಿಸ್ತಾನಿ ಪರ ಸಂಘಟನೆಯೊಂದು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದ ವಿಡಿಯೊ ಭಾರಿ ಸದ್ದುಮಾಡಿದ ಬಳಿಕ ಈ ಬೆಳವಣಿಗೆ ನಡೆದಿದೆ. ಆದರೆ ಅಧಿಕಾರಿಗಳಾಗಲೀ ಅಥವಾ ರಾಜಕಾರಣಿಗಳಾಗಲೀ ವಿಡಿಯೊ ಕುರಿತ ನಿರ್ದಿಷ್ಟ ಗುರುತನ್ನು ಬಿಟ್ಟುಕೊಟ್ಟಿಲ್ಲ ಎಂದು ಈ ಕುರಿತು ವರದಿ ಮಾಡಿರುವ ಕೆನಡಾದ ಕೆನಡಿಯನ್ ಬ್ರಾಡ್‌ಕಾಸ್ಟಿಂಗ್ ಕಾರ್ಪೊರೇಷನ್ (ಸಿಬಿಸಿ) ಹೇಳಿದೆ.ಆನ್‌ಲೈನ್ ದ್ವೇಷಪೂರಿತ ವಿಡಿಯೊವಾಷಿಂಗ್ಟನ್: ಭಾರತ ಮತ್ತು ಕೆನಡಾ ನಡುವಣ ವ್ಯಾಪಾರ ಸಂಬಂಧ ಹದಗೆಡದಂತೆ ಕಾಪಾಡುವ ನಿಟ್ಟಿನಲ್ಲಿ ಉಭಯ ದೇಶಗಳು ಈ ವಿವಾದವನ್ನು ಇಲ್ಲಿಗೇ ಕೈಬಿಡಬೇಕು ಎಂದು ತಜ್ಞ ಕೆನಡಾ ಇನ್‌ಸ್ಟಿಟ್ಯೂಟ್‌ನ ವಿಶ್ಲೇಷಕ ಝವೇರ್ ಡೆಲ್ಗಾಡೊ ಅವರು ಸಲಹೆ ನೀಡಿದ್ದಾರೆ. ಈ ಕುರಿತ ಇವರ ಬರಹವನ್ನು ವಿಲ್ಸನ್ ಇನ್ಸ್ಟಿಟ್ಯೂಟ್ ಪೋಸ್ಟ್ ಶುಕ್ರವಾರ ಮಾಡಿದೆ. ಈ ದ್ವಿಪಕ್ಷೀಯ ಕಲಹದಿಂದ ಬಹುವಾಗಿ ಹೊಡೆತ ಬೀಳುವುದು ವ್ಯಾಪಾರ ವ್ಯವಹಾರಕ್ಕೆ. ಉಭಯ ದೇಶಗಳ ನಡುವಿನ 'ಅರ್ಲಿ ಪ್ರೋಗ್ರೆಸ್ ಟ್ರೇಡ್ ಅಗ್ರಿಮೆಂಟ್'ಗೆ (ಎರಡು ದೇಶಗಳ ನಡುವೆ ನಡೆವ ಸರಕು ವಹಿವಾಟಿಗೆ ಸುಂಕ ಕಡಿತಗೊಳಿಸುವ ಅಥವಾ ರದ್ದುಪಡಿಸುವ ಒಪ್ಪಂದ) ಈಗಾಗಲೇ ತಡೆ ನೀಡಲಾಗಿದೆ. ವಾಣಿಜ್ಯಕ್ಕೆ ಸಂಬಂಧಿಸಿದ ಮಾತುಕತೆಗಳು ಮುರಿದುಬಿದ್ದಿರುವುದರಿಂದ ವಾಣಿಜ್ಯ ವಹಿವಾಟು ಸಂಕಷ್ಟದಲ್ಲಿದೆ ಎಂದು ಹೇಳಿದ್ದಾರೆ. ವಾಣಿಜ್ಯ ಸಂಬಂಧ ಹದಗೆಟ್ಟರೆ ಭಾರತದಿಂದ ಕೆನಡಾಕ್ಕೆ ವಲಸೆ ಬರುವವರ ಸಂಖ್ಯೆಯೂ ಕಡಿಮೆಯಾಗಲಿದೆ. ಇದಲ್ಲದೇ ಭಾರತದ ಪ್ರಭಾವ ಹೆಚ್ಚಿರುವ ಇಂಡೋ-ಪೆಸಿಫಿಕ್ ಕಾರ್ಯತಂತ್ರದ ಭಾಗವಾಗುವ ಅವಕಾಶವೂ ಕೆನಡಾದ ಕೈತಪ್ಪಿ ಹೋಗಬಹುದು ಎಂದು ಹೇಳಿದ್ದಾರೆ. ಈಗಿನ ರಾಜತಾಂತ್ರಿಕ ಬಿಕ್ಕಟ್ಟಿನಿಂದ ಕೆನಡಾಕ್ಕೆ ಮಾತ್ರ ನಷ್ಟವಾಗುವುದಿಲ್ಲ. 'ಪ್ರಜಾಪ್ರಭುತ್ವವಾದಿ ರಾಷ್ಟ್ರ' ಎಂಬ ಭಾರತದ ಹೆಗ್ಗಳಿಕೆಗೆ ಈ ವಿವಾದದಿಂದ ಹಾನಿಯಾಗಬಹುದು. ಅಲ್ಲದೇ ಚೀನಾ ವಿರುದ್ಧದ ಸ್ಪರ್ಧೆಯಲ್ಲಿ ಭಾರತವು 'ನಂಬಿಕಸ್ಥ ಮಿತ್ರರಾಷ್ಟ್ರ' ಎಂಬ ವಿಶ್ವಾಸ ಗಳಿಸಿದೆ. ಈ ವಿಶ್ವಾಸಕ್ಕೆ ಧಕ್ಕೆ ಆಗಬಹುದು ಎಂದೂ ಡೆಲ್ಗಾಡೊ ಹೇಳಿದ್ದಾರೆ.ವಿವಾದ ಕೈಬಿಡಲು ಉಭಯದೇಶಗಳಿಗೆ ತಜ್ಞರ ಸಲಹೆ.