ನವದೆಹಲಿ: ದೇಶದ ವಿಜ್ಞಾನ, ತಂತ್ರಜ್ಞಾನ ಹಾಗೂ ಆವಿಷ್ಕಾರ ವಿಭಾಗದಲ್ಲಿ ಅಸಾಧಾರಣ ಸಾಧನೆ ಮಾಡಿದ ವಿಜ್ಞಾನಿಗಳಿಗೆ ಪ್ರತಿವರ್ಷವು 'ರಾಷ್ಟ್ರೀಯ ವಿಜ್ಞಾನ ಪುರಸ್ಕಾರ' ನೀಡಲು ಕೇಂದ್ರ ಸರ್ಕಾರ ನಿರ್ಧರಿಸಿದೆ. ಒಟ್ಟು ನಾಲ್ಕು ವಿಭಾಗಗಳಲ್ಲಿ ಈ ಪ್ರಶಸ್ತಿ ನೀಡಲಾಗುತ್ತದೆ.
ಉಳಿದಂತೆ 45 ವರ್ಷದ ಒಳಗಿನ ವಿಜ್ಞಾನಿಗಳಿಗೆ 'ವಿಜ್ಞಾನ ಶ್ರೀ' ಹಾಗೂ 'ವಿಜ್ಞಾನ ಯುವ ಶಾಂತಿ ಸ್ವರೂಪ್ ಭಟ್ನಾಗರ್' ಪ್ರಶಸ್ತಿಯನ್ನು ಕೊಡಮಾಡಲಾಗುತ್ತದೆ. ಸಂಶೋಧನೆ ಅಥವಾ ಅನ್ವೇಷಣೆಗೆ ನೀಡಿದ ಕೊಡುಗೆ ಅವಲೋಕಿಸಿ ಮೂವರು ಸಂಶೋಧಕರನ್ನು ಒಳಗೊಂಡ ತಂಡವನ್ನು 'ವಿಜ್ಞಾನ ತಂಡ' ಪ್ರಶಸ್ತಿಗೆ ಪರಿಗಣಿಸಲಾಗುತ್ತದೆ.
ಕೇಂದ್ರ ಗೃಹ ಸಚಿವಾಲಯದ ಸೂಚನೆ ಮೇರೆಗೆ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯಿಂದ ಕೊಡಮಾಡುತ್ತಿದ್ದ ಪ್ರಶಸ್ತಿಗಳನ್ನು ಸ್ಥಗಿತಗೊಳಿಸಲಾಗಿತ್ತು. ಒಂದು ವರ್ಷದ ಬಳಿಕ ಸಾಧಕರಿಗೆ ಪ್ರಶಸ್ತಿ ನೀಡುವ ಕಾರ್ಯಕ್ಕೆ ಮತ್ತೆ ಚಾಲನೆ ಸಿಕ್ಕಿದೆ.
ಪ್ರಶಸ್ತಿ ಪ್ರದಾನ ಎಂದು?:
ಪ್ರತಿ ವರ್ಷದ ಮೇ 11ರ ರಾಷ್ಟ್ರೀಯ ತಂತ್ರಜ್ಞಾನ ದಿನದಂದು ಈ ಪ್ರಶಸ್ತಿಗಳನ್ನು ಘೋಷಿಸಲಾಗುತ್ತದೆ. 'ಚಂದ್ರಯಾನ 3'ರ ಯಶಸ್ಸಿಗಾಗಿ ಘೋಷಿಸಿರುವ ಆಗಸ್ಟ್ 23ರ ಬಾಹ್ಯಾಕಾಶ ದಿನದಂದು ರಾಷ್ಟ್ರಪತಿ ಅವರು ಪ್ರದಾನ ಮಾಡಲಿದ್ದಾರೆ.
ಜನವರಿ 14ರಿಂದ ಪ್ರಶಸ್ತಿಗೆ ನಾಮನಿರ್ದೇಶನ ಪ್ರಕ್ರಿಯೆ ಆರಂಭವಾಗಲಿದ್ದು, ಫೆಬ್ರುವರಿ 28ರ ರಾಷ್ಟ್ರೀಯ ವಿಜ್ಞಾನ ದಿನದಂದು ಮುಕ್ತಾಯಗೊಳ್ಳಲಿದೆ.
'ವಿಜ್ಞಾನ ಶ್ರೀ' ಹಾಗೂ 'ವಿಜ್ಞಾನ ಯುವ ಶಾಂತಿ ಸ್ವರೂಪ್ ಭಟ್ನಾಗರ್' ವಿಭಾಗದಲ್ಲಿ ತಲಾ 25 ವಿಜ್ಞಾನಿಗಳಿಗೆ ಪ್ರಶಸ್ತಿ ನೀಡಲಾಗುತ್ತದೆ. 'ವಿಜ್ಞಾನ ತಂಡ' ವಿಭಾಗದಲ್ಲಿ ಮೂರು ತಂಡಗಳನ್ನಷ್ಟೇ ಆಯ್ಕೆ ಮಾಡಲಾಗುತ್ತದೆ.
ಭೌತ ವಿಜ್ಞಾನ, ರಸಾಯನ ವಿಜ್ಞಾನ, ಜೈವಿಕ ವಿಜ್ಞಾನ, ಗಣಿತ, ಕಂಪ್ಯೂಟರ್ ವಿಜ್ಞಾನ, ಭೂವಿಜ್ಞಾನ, ಔಷಧಿ ವಿಜ್ಞಾನ, ಎಂಜಿನಿಯರಿಂಗ್, ಕೃಷಿ, ಪರಿಸರ, ತಂತ್ರಜ್ಞಾನ ಮತ್ತು ಅನ್ವೇಷಣೆ, ಪರಮಾಣು ಶಕ್ತಿ, ಬಾಹ್ಯಾಕಾಶ ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರಗಳಲ್ಲಿನ ಸಾಧನೆಯನ್ನು ಪ್ರಶಸ್ತಿಗೆ ಪರಿಗಣಿಸಲಾಗುತ್ತದೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ.
ಪ್ರಧಾನ ವೈಜ್ಞಾನಿಕ ಸಲಹೆಗಾರರ ನೇತೃತ್ವದ 17 ಸದಸ್ಯರ ಸಮಿತಿಯ ಅರ್ಹರನ್ನು ಆಯ್ಕೆ ಮಾಡಲಿದೆ. ವಿಜ್ಞಾನ ಕಾರ್ಯದರ್ಶಿಗಳು, ವಿಜ್ಞಾನ ಮತ್ತು ಎಂಜಿನಿಯರಿಂಗ್ ಅಕಾಡೆಮಿಯ ಅಧ್ಯಕ್ಷರು ಹಾಗೂ ಪ್ರಸಿದ್ಧ ವಿಜ್ಞಾನಿಗಳು ಈ ಸಮಿತಿಯಲ್ಲಿ ಇದ್ದಾರೆ.
ನೊಬೆಲ್ ಮಾದರಿಯ ಪ್ರಶಸ್ತಿ (ವಿಜ್ಞಾನ ರತ್ನ) ಸೇರಿದಂತೆ ಉನ್ನತ ಮಟ್ಟದ ಹೊಸ ಪ್ರಶಸ್ತಿಗಳನ್ನು ನೀಡಬೇಕು. ಹಾಗಾಗಿ, ಇಲಾಖೆಯಿಂದ ನೀಡುತ್ತಿರುವ 200ಕ್ಕೂ ಹೆಚ್ಚು ಪ್ರಶಸ್ತಿಗಳನ್ನು ಸ್ಥಗಿತಗೊಳಿಸುವಂತೆ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಗೆ ಹಿಂದಿನ ವರ್ಷ ಕೇಂದ್ರ ಗೃಹ ಸಚಿವಾಲಯವು ಸೂಚಿಸಿತ್ತು.
ವಿಜ್ಞಾನ ಮತ್ತು ಕೈಗಾರಿಕಾ ಸಂಶೋಧನಾ ಪರಿಷತ್‌ನಿಂದ ನೀಡುವ ಪ್ರತಿಷ್ಠಿತ 'ಶಾಂತಿ ಸ್ವರೂಪ್ ಭಟ್ನಾಗರ್' ಪ್ರಶಸ್ತಿಯನ್ನಷ್ಟೇ ಮುಂದುವರಿಸಲು ನಿರ್ದೇಶನ ನೀಡಿತ್ತು.
'ಪ್ರತಿವರ್ಷ ವೈಜ್ಞಾನಿಕ ವಿಷಯಕ್ಕೆ ಸಂಬಂಧಿಸಿದಂತೆ ಸಂಬಂಧಪಟ್ಟ ಇಲಾಖೆಗಳು 300ಕ್ಕೂ ಹೆಚ್ಚು ಪ್ರಶಸ್ತಿಗಳನ್ನು ನೀಡಲು ಸಾಕಷ್ಟು ಸಮಯ ಮತ್ತು ಸಂಪನ್ಮೂಲವನ್ನು ವ್ಯಯ ಮಾಡುತ್ತಿದ್ದವು. ಇದನ್ನು ತಪ್ಪಿಸಲು ನಾಲ್ಕು ವಿಭಾಗಗಳಲ್ಲಿ ಪ್ರಶಸ್ತಿ ನೀಡಲು ನಿರ್ಧರಿಸಲಾಗಿದೆ' ಎಂದು ಕೇಂದ್ರ ವಿಜ್ಞಾನ ಸಚಿವಾಲಯದ ಮೂಲಗಳು ತಿಳಿಸಿವೆ.