HEALTH TIPS

ಡಿಸೆಂಬರ್ ನಲ್ಲಿ ನಡೆಯಲಿದೆಯೇ ಲೋಕಸಭಾ ಚುನಾವಣೆ ?

              ಒಂದೆಡೆ ಬಿಜೆಪಿ ವಿರುದ್ಧ ಪ್ರತಿಪಕ್ಷಗಳು​ ಇಂಡಿಯಾ ವೇದಿಕೆಯಡಿ ಒಗ್ಗೂಡಿ ರಣತಂತ್ರ ರೂಪಿಸುತ್ತಿರುವಾಗಲೇ ಬಿಜೆಪಿ ಬೇರೆಯದೇ ಲೆಕ್ಕಾಚಾರದಲ್ಲಿ ತೊಡಗಿದೆಯೆ?. ಇಂಥದೊಂದು ಅನುಮಾನ ಮೂಡುತ್ತಿರುವುದು, ಸಂಸತ್ತಿನ ವಿಶೇಷಾಧಿವೇಶನವನ್ನು ಸರ್ಕಾರ​ ದಿಢೀರ್ ಆಗಿ ಕರೆದಿರುವ ಕಾರಣದಿಂದಾಗಿ.

              ಸೆಪ್ಟೆಂಬರ್ 18ರಿಂದ ಐದು ದಿನ ಸಂಸತ್ತಿನ ವಿಶೇಷ ಅಧಿವೇಶನವನ್ನು​ ಸರ್ಕಾರ ಕರೆದಿದೆ ಎಂದು ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಶಿ ಗುರುವಾರ ತಿಳಿಸಿದ್ದಾರೆ. ಸೆಪ್ಟೆಂಬರ್ 9 ಮತ್ತು 10 ರಂದು ದೆಹಲಿಯಲ್ಲಿ ಜಿ- 20 ಶೃಂಗಸಭೆಯ ನಂತರ ಈ ಅಧಿವೇಶನ ನಡೆಯಲಿದ್ದು,​ ಅಧಿವೇಶನದ ಕಾರ್ಯಸೂಚಿ ಕುರಿತು ಯಾವುದೇ ಅಧಿಕೃತ ಹೇಳಿಕೆ ನೀಡಲಾಗಿಲ್ಲ.

                 ಅಮೃತ ಮಹೋತ್ಸವ ಸಂದರ್ಭದಲ್ಲಿ ಸಂಸತ್ತಿನಲ್ಲಿ ಫಲಪ್ರದ ಚರ್ಚೆಗಳನ್ನು ಎದುರು ನೋಡಲಾಗುತ್ತಿದೆ ಎಂದು ಮಾತ್ರವೇ ಜೋಶಿ ಎಕ್ಸ್ನಲ್ಲಿ ಹೇಳಿದ್ದಾರೆ. ಆದರೆ, ಒಂದು ವರದಿಯ ಪ್ರಕಾರ, ​"ಒಂದು ದೇಶ, ಒಂದು ಚುನಾವಣೆ, ಸಮಾನ ನಾಗರಿಕ ಸಂಹಿತೆ ಹಾಗೂ ಮಹಿಳಾ ಪ್ರಾತಿನಿಧ್ಯ​" ಕುರಿತು ಮಸೂದೆಗಳನ್ನು​ ಈ ವಿಶೇಷ ಅಧಿವೇಶನದಲ್ಲಿ ಮಂಡಿಸುವ ಸಾಧ್ಯತೆ ಇದೆ.

                 ಒಂದು ವೇಳೆ ನಿಜವಾಗಿಯೂ ​"ಒಂದು ದೇಶ, ಒಂದು ಚುನಾವಣೆ​" ಮಸೂದೆ ಮಂಡಿಸುವುದೇ ಈ ವಿಶೇಷಾಧಿವೇಶನದ ಉದ್ದೇಶವಾಗಿದ್ದರೆ, ಅದು ಪ್ರತಿಪಕ್ಷ ಮೈತ್ರಿಕೂಟ ವಿರುದ್ಧದ ಮೋದಿ ಸರ್ಕಾರದ ತಂತ್ರ ಎಂದೇ ಹೇಳಬೇಕಾಗುತ್ತದೆ. ಒಂದು ದೇಶ, ಒಂದು ಚುನಾವಣೆ ಪರಿಕಲ್ಪನೆ ಲೋಕಸಭೆ ಹಾಗೂ ಎಲ್ಲ ರಾಜ್ಯ ವಿಧಾನಸಭೆಗಳಿಗೂ ಏಕಕಾಲಕ್ಕೆ ಚುನಾವಣೆ ನಡೆಸುವುದಾಗಿದೆ.

ಈ ಮಸೂದೆ ಮಂಡನೆ ಮೂಲಕ ಸರ್ಕಾರ ಪ್ರತಿಪಕ್ಷಗಳನ್ನು ಕಟ್ಟಿಹಾಕಲು ಮುಂದಾಗಿದೆಯೆ, INDIA ಮೈತ್ರಿಕೂಟದ ಲೆಕ್ಕಾಚಾರಗಳನ್ನು ತಲೆಕೆಳಗೆ ಮಾಡುವುದು ಉದ್ದೇಶವೇ ಎಂಬ ಪ್ರಶ್ನೆಗಳು ಎದ್ದಿವೆ. ಹೊಸ ಸಂಸತ್ ಭವನಕ್ಕೆ ಸಂಸತ್ತಿನ ಕಾರ್ಯಚಟುವಟಿಕೆಗಳನ್ನು ಸ್ಥಳಾಂತರಿಸುವ ಪ್ರಕ್ರಿಯೆ ವಿಶೇಷಾಧಿವೇಶನದಲ್ಲಿ ಜರುಗಬಹುದು ಎಂದೂ ಹೇಳಲಾಗುತ್ತಿದೆ.

                 ಚಂದ್ರಯಾನ-3 ಯಶಸ್ವಿಯಾಗಿರುವ ಹಿನ್ನೆಲೆಯಲ್ಲಿ ಅದನ್ನು ಕೂಡ ಮೋದಿ ಇಮೇಜ್ ಹೆಚ್ಚಿಸುವ ವಿಚಾರವಾಗಿ ಬಿಂಬಿಸಲು ವಿಶೇಷಾಧಿವೇಶನ ಬಳಕೆಯಾಗಲೂಬಹುದು ಎಂಬ ಮತ್ತೊಂದು ಊಹೆಯೂ ಇದೆ.

                ಆದರೆ, ಪ್ರಮುಖ ಮಸೂದೆಗಳನ್ನೇ ಅಂಗೀಕರಿಸುವುದು ಉದ್ದೇಶವಾಗಿದ್ದಲ್ಲಿ ಇದು ಪಕ್ಕಾ ಚುನಾವಣಾ ತಂತ್ರದ ಭಾಗವೇ ಆಗಿರಲಿದೆ ಎಂಬುದಂತೂ ನಿಜ. ಒಂದು ದೇಶ ಒಂದು ಚುನಾವಣೆ ಮಸೂದೆಯಾಗಲೀ ಮಹಿಳಾ ಪ್ರಾತಿನಿಧ್ಯ ಕುರಿತ ಮಸೂದೆಯಾಗಲೀ ಮೋದಿ ಸರ್ಕಾರದ ದೃಷ್ಟಿಯಿಂದ ಮಹತ್ವ​ದ್ದಾಗಲಿರುವ ಹಿನ್ನೆಲೆಯಲ್ಲಿ, ಪ್ರತಿಪಕ್ಷ ಮೈತ್ರಿಕೂಟದ ವಿರುದ್ಧ ಬಳಸುವ ಇಂಗಿತವೂ ಇರಬಹುದು. ಮೈತ್ರಿಕೂಟ ಸಮ​ರ್ಥ ಸೂತ್ರ ರೂಪಿಸಿ ಸಜ್ಜಾಗುವ ಮೊದಲೇ ಕ್ಷಿಪ್ರ ಸಾರ್ವತ್ರಿಕ ಚುನಾವಣೆಗೆ ಮೋದಿ ಯೋಚಿಸುತ್ತಿದ್ದಾರೆಯೇ ಎಂಬ ಅನುಮಾನಗಳೂ ಇಲ್ಲದೆ ಇಲ್ಲ.

                  ಯಾಕೆಂದರೆ, ಮುಂಬೈನಲ್ಲಿ INDIA ಮೈತ್ರಿಕೂಟದ ಸಭೆ ನಡೆದಿರುವ ಹೊತ್ತಿನಲ್ಲಿಯೇ​ ಸಂಸತ್ತಿನ ವಿಶೇಷಾಧಿವೇಶನದ ಬಗ್ಗೆ ಪ್ರಕಟಿಸಲಾಗಿದೆ. ಈ ಮಧ್ಯೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಅದಾನಿ ಸಮೂಹದ ಮೇಲಿನ ಆರೋಪಗಳ ವಿಚಾರವಾಗಿ ಜಂಟಿ ಸದನ ಸಮಿತಿ ತನಿಖೆಗೆ ಹೊಸದಾಗಿ ಬೇಡಿಕೆ ಇಟ್ಟಿ​ದ್ದಾರೆ.

                ಶೃಂಗಸಭೆಗೆ ಜಿ-20 ನಾಯಕರು ಬಂದಿಳಿಯುವ ಮೊದಲೇ ಅದಾನಿ ಕಂಪನಿಗಳ ವಿರುದ್ಧ ಎದ್ದಿರುವ ಅನುಮಾನಗಳನ್ನು ಮೋದಿ ನಿವಾರಿಸಬೇಕಾಗಿದೆ ಎಂದು ರಾಹುಲ್​ ಮುಂಬೈಯಲ್ಲಿ ಗುರುವಾರ ಹೇಳಿ​ದ್ದಾರೆ. ಅದಾನಿ ವಿರುದ್ಧ ತನಿಖೆಗೆ ಪ್ರಧಾನಿ ಒಲವು ಹೊಂದಿಲ್ಲ. ಒಬ್ಬ ವ್ಯಕ್ತಿಯನ್ನು ಮೋದಿ ಏಕೆ ಈ ಮಟ್ಟಿಗೆ ರಕ್ಷಿಸುತ್ತಿದ್ದಾರೆ ಎಂಬುದೇ ನಮ್ಮನ್ನು ಕಾಡುತ್ತಿರುವ ಪ್ರಶ್ನೆಯಾಗಿದೆ ಎಂದೂ ರಾಹುಲ್ ಹೇಳಿ​ದ್ದಾರೆ.

              ಈ ನಡುವೆ, ಮುಂಬೈನಲ್ಲಿ ನಡೆದಿರುವ INDIA ಮೈತ್ರಿಕೂಟದ ಸಭೆಗೂ ಮುಂಚಿತವಾಗಿ ಮತ್ತೆರಡು ಪ್ರಾದೇಶಿಕ ಪಕ್ಷಗಳು ಬುಧವಾರ ಮೈತ್ರಿಕೂಟ ಸೇರಿವೆ. ಇದರೊಂದಿಗೆ ಪ್ರತಿಪಕ್ಷ ಮೈತ್ರಿಕೂಟದ ಪಕ್ಷಗಳ ಸಂಖ್ಯೆ 28ಕ್ಕೆ ಏರಿಕೆಯಾಗಿದೆ. ಮಹಾರಾಷ್ಟ್ರದ ರೈತರು ಮತ್ತು ಕಾರ್ಮಿಕರ ಪಕ್ಷ(PWP) ಹಾಗೂ​ ಅದೇ ರಾಜ್ಯದ ಇನ್ನೊಂದು ಪ್ರಾದೇಶಿಕ ಮಾರ್ಕ್ಸ್​ ವಾದಿ ರಾಜಕೀಯ ಪಕ್ಷ​, ಪ್ರತಿಪಕ್ಷಗಳ​ ಇಂಡಿಯಾ ಮೈತ್ರಿಕೂಟವನ್ನು ಸೇರಿವೆ.

                   ಗುರುವಾರದ​ ಮುಂಬೈ ಸಭೆಯಲ್ಲಿ ಖರ್ಗೆ, ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ಎನ್ಸಿಪಿಯ ಶರದ್ ಪವಾರ್, ಸುಪ್ರಿಯಾ ಸುಳೆ, ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ಬಿಹಾರ ಸಿಎಂ ನಿತೀಶ್ ಕುಮಾರ್, ಡಿಸಿಎಂ ತೇಜಸ್ವಿ ಯಾದವ್, ಆರ್ಜೆಡಿ ಮುಖ್ಯಸ್ಥ ಲಾಲೂ ಪ್ರಸಾದ್, ಜಮ್ಮು ಕಾಶ್ಮೀರ ಮಾಜಿ ಸಿಎಂ ಫಾರೂಖ್ ಅಬ್ದುಲ್ಲಾ, ತಮಿಳುನಾಡು ಸಿಎಂ ಎಂಕೆ ಸ್ಟಾಲಿನ್, ಎಸ್ಪಿ ನಾಯಕ ಅಖಿಲೇಶ್ ಯಾದವ್, ಆರ್‌ಎಲ್ಡಿ ಮುಖ್ಯಸ್ಥ ಜಯಂತ್ ಚೌಧರಿ ಮೊದಲಾದವರು ಪಾಲ್ಗೊಂಡಿದ್ದರು. ಶಿವಸೇನೆಯ ಉದ್ಧವ್ ಠಾಕ್ರೆ ಭೋಜನ ಕೂಟ ಏರ್ಪಡಿಸಿದ್ದರು.

                 ಸಂವಿಧಾನ ಮತ್ತು ಪ್ರಜಾಪ್ರಭುತ್ವವನ್ನು ರಕ್ಷಿಸುವ ಉದ್ಧೇಶದಿಂದ ಒಂದುಗೂಡಿರುವುದನ್ನು ಮತ್ತೊಮ್ಮೆ ಪ್ರತಿಪಾದಿಸಲಾಯಿತು. ಬಿಜೆಪಿಯನ್ನು ಎದುರಿಸಲು ಸಮಾನ ಕಾರ್ಯಕ್ರಮ ರೂಪಿಸಲಾಗುವುದು ಎಂದು ಮೈತ್ರಿಕೂಟದ ನಾಯಕರು ಘೋಷಿಸಿದರು. ಲೋಕಸಭೆ ಚುನಾವಣೆಗೆ ಸೀಟು ಹಂಚಿಕೆಯ ವಿಚಾರವನ್ನು ಸಭೆಯ ಕಾರ್ಯಸೂಚಿಯಿಂದ ಹೊರಗಿಡಲು ನಿರ್ಧರಿಸಲಾಗಿದೆ ಎಂದು ಕೆಲ ವರದಿಗಳು ಹೇಳಿವೆ.

                ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರ ಕೋರಿಕೆ ಮೇರೆಗೆ ಈ ತೀರ್ಮಾನ ತೆಗೆದುಕೊಳ್ಳಲಾಗಿದೆ ಎಂದು ತಿಳಿದುಬಂದಿದೆ. ಸೀಟು ಹಂಚಿಕೆ ವಿಚಾರದ ಕುರಿತು ನಿರ್ಧಾರವನ್ನು ಆಯಾ ರಾಜ್ಯಗಳ ನಾಯಕರಿಗೆ ಬಿಟ್ಟುಕೊಡಲಿದ್ದು, ಪ್ರಾದೇಶಿಕ ಪಕ್ಷಗಳು ತಮ್ಮ ತಮ್ಮ ರಾಜ್ಯಗಳಲ್ಲಿ ಸೀಟು ಹಂಚಿಕೆ ಕುರಿತು ಮಿತ್ರಪಕ್ಷಗಳೊಂದಿಗೆ ಚರ್ಚಿಸಿದ ನಂತರ, ಆ ಕುರಿತು ಅಂತಿಮ ನಿರ್ಧಾರವನ್ನು ರಾಷ್ಟ್ರಮಟ್ಟದಲ್ಲಿ ಕೈಗೊಳ್ಳಬಹುದು ಎನ್ನಲಾಗಿದೆ. ಇದಕ್ಕೆ ಕಾಂಗ್ರೆಸ್ ಕೂಡ ಒಪ್ಪಿರುವುದಾಗಿ ತಿಳಿದುಬಂದಿದಿದೆ.

               ಬಿಜೆಪಿಗೆ ಈಗಾಗಲೇ ಮೈತ್ರಿಕೂಟದ ವಿಚಾರವಾಗಿ ಭಯ ಶುರುವಾಗಿದೆ ಎಂಬ ಅಭಿಪ್ರಾಯಗಳೂ ಮುಂಬೈ ಸಭೆಯ ವೇಳೆ ವ್ಯಕ್ತವಾಗಿವೆ. ಮೈತ್ರಿಕೂಟದ ಹೆಸರಿನ ಕುರಿತೇ ಬಿಜೆಪಿ ಭಯಗೊಂಡಿದೆ ಎಂದು ನಾಯಕರು ಹೇಳಿದ್ದಾರೆ. ಈ ಅಭಿಪ್ರಾಯ ಸತ್ಯಕ್ಕೆ ದೂರವಾದುದಲ್ಲ. ಬಿಜೆಪಿ ಈಗ ಪ್ರತಿಪಕ್ಷ ಮೈತ್ರಿಕೂಟವನ್ನು ನೇರವಾಗಿ ಎದುರಿಸಲಿಕ್ಕಾಗದ ಆತಂಕಕ್ಕೆ ಒಳಗಾಗಿದೆಯೆ ಎಂಬ ಶಂಕೆಯೂ ಮೂಡುತ್ತಿದೆ.

               ನೇರವಾಗಿ ಎದುರಿಸಲಾರೆ ಎನ್ನಿಸಿದಾಗೆಲ್ಲ ಅದು ಮರೆಯಲ್ಲಿ ನಿಂತು ಬಾಣ ಹೂಡುವ ತಂತ್ರಕ್ಕೆ ಇಳಿಯುವುದು ಸಾಮಾನ್ಯ. ಈಗಾಗಲೇ ಛತ್ತಿಸ್ಘಡದಲ್ಲಿ ಕಾಂಗ್ರೆಸ್ ಅಧಿವೇಶನದ ವೇಳೆ ಅದು ಇಡಿ, ಐಟಿ ರೇಡ್ ಮಾಡಿಸಿತೆಂಬುದು ತಿಳಿದಿರುವ ವಿಚಾರ. ಹಲವು ಕಾಂಗ್ರೆಸ್ ನಾಯಕರ ಮೇಲೆ ರೇಡ್ ನಡೆದು, ಕಿರುಕುಳ ಕೊಡುವ ಯತ್ನ ಆಯಿತು.  ಸರ್ಕಾರ ಈಗ ಯಾವ ಉದ್ದೇಶವನ್ನು ಇಟ್ಟುಕೊಂಡಿದೆ ಎಂಬುದನ್ನು ನೋಡಬೇಕಿದೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries