ನವದೆಹಲಿ: ಜಮ್ಮು-ಕಾಶ್ಮೀರ ವಿಧಾನಸಭೆಯಲ್ಲಿ 2018ರಲ್ಲಿ 'ಪಾಕಿಸ್ತಾನ ಜಿಂದಾಬಾದ್' ಎಂದು ಘೋಷಣೆ ಕೂಗಿದ್ದ ನ್ಯಾಷನಲ್ ಕಾನ್ಫರೆನ್ಸ್ ನಾಯಕ ಮೊಹಮ್ಮದ್ ಅಕ್ಬರ್ ಲೋನ್ ಅವರು ಕ್ಷಮೆಯಾಚಿಸಬೇಕು ಎಂದು ಕೇಂದ್ರ ಸರ್ಕಾರ ಸೋಮವಾರ ಸುಪ್ರೀಂ ಕೋರ್ಟ್‌ಗೆ ತಿಳಿಸಿದೆ.
ನವದೆಹಲಿ: ಜಮ್ಮು-ಕಾಶ್ಮೀರ ವಿಧಾನಸಭೆಯಲ್ಲಿ 2018ರಲ್ಲಿ 'ಪಾಕಿಸ್ತಾನ ಜಿಂದಾಬಾದ್' ಎಂದು ಘೋಷಣೆ ಕೂಗಿದ್ದ ನ್ಯಾಷನಲ್ ಕಾನ್ಫರೆನ್ಸ್ ನಾಯಕ ಮೊಹಮ್ಮದ್ ಅಕ್ಬರ್ ಲೋನ್ ಅವರು ಕ್ಷಮೆಯಾಚಿಸಬೇಕು ಎಂದು ಕೇಂದ್ರ ಸರ್ಕಾರ ಸೋಮವಾರ ಸುಪ್ರೀಂ ಕೋರ್ಟ್‌ಗೆ ತಿಳಿಸಿದೆ.
ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್ ನೇತೃತ್ವದ ಐವರು ನ್ಯಾಯಮೂರ್ತಿಗಳನ್ನು ಒಳಗೊಂಡ ನ್ಯಾಯಪೀಠವು ಪ್ರಕರಣದ ವಿಚಾರಣೆ ನಡೆಸಿತು. ಈ ವೇಳೆ ಕೇಂದ್ರ ಸರ್ಕಾರದ ಪರ ಹಾಜರಿದ್ದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರು, ಅಕ್ಬರ್ ಲೋನ್ ಅವರು ಸಂವಿಧಾನಕ್ಕೆ ನಿಷ್ಠೆ ತೋರುವುದಾದರೆ ಸದನದಲ್ಲಿ ಘೋಷಣೆ ಕೂಗಿದ್ದಕ್ಕಾಗಿ ಕ್ಷಮೆಯಾಚಿಸಬೇಕು ಎಂದು ಹೇಳಿದರು.
'ಹಿರಿಯ ನಾಯಕರು ಇಂಥ ಹೇಳಿಕೆ ನೀಡುವುದು ಸರಿಯಲ್ಲ. ಕ್ಷಮೆಯಾಚಿಸದೇ ಇದ್ದಲ್ಲಿ ಇತರರಿಗೆ ಉತ್ತೇಜನ ನೀಡಿದಂತಾಗುತ್ತದೆ. ಜಮ್ಮು-ಕಾಶ್ಮೀರವನ್ನು ಸಹಜ ಸ್ಥಿತಿಗೆ ತರಲು ಕೈಗೊಳ್ಳುತ್ತಿರುವ ಕ್ರಮಗಳ ಮೇಲೂ ಪರಿಣಾಮ ಬೀರಲಿದೆ' ಎಂದು ಹೇಳಿದರು.
ಬಳಿಕ ನ್ಯಾಯಾಲಯವು, ಈ ಕುರಿತು ಅಕ್ಬರ್ ಲೋನ್ ಪ್ರತಿಕ್ರಿಯೆ ನೀಡಬೇಕು ಎಂದು ಆದೇಶಿಸಿತು. ಭಾರತದ ಸಂವಿಧಾನಕ್ಕೆ ನಿಷ್ಠೆ ತೋರುತ್ತೇನೆ ಮತ್ತು ದೇಶದ ಸಾರ್ವಭೌಮತೆಯನ್ನು ಗೌರವಿಸುತ್ತೇನೆ ಎಂದು ಅಕ್ಬರ್ ಲೋನ್ ಪ್ರಮಾಣಪತ್ರ ಸಲ್ಲಿಸಬೇಕು ಎಂದೂ ಸೂಚಿಸಿತು.
'ಅಕ್ಬರ್ ಲೋನ್ ಮಂಗಳವಾರ ಪ್ರಮಾಣಪತ್ರ ಸಲ್ಲಿಸಲಿದ್ದಾರೆ. ಅವರು ಸಲ್ಲಿಸದೇ ಇದ್ದಲ್ಲಿ ಅವರ ಪರ ವಾದ ಮಾಡುವುದಿಲ್ಲ' ಎಂದು ಹಿರಿಯ ವಕೀಲ ಕಪಿಲ್ ಸಿಬಲ್ ನ್ಯಾಯಪೀಠಕ್ಕೆ ತಿಳಿಸಿದರು.
ಜಮ್ಮು-ಕಾಶ್ಮೀರಕ್ಕೆ ಸಂವಿಧಾನದ 370ನೇ ವಿಧಿಯಡಿಯಲ್ಲಿ ನೀಡಿದ್ದ ವಿಶೇಷ ಸ್ಥಾನಮಾನವನ್ನು ರದ್ದು ಮಾಡಿರುವುದನ್ನು ಪ್ರಶ್ನಿಸಿ ಅರ್ಜಿ ಸಲ್ಲಿಸಿರುವವರ ಪೈಕಿ ಅಕ್ಬರ್ ಲೋನ್ ಪ್ರಮುಖರು.
ಈ ಮಧ್ಯೆ ಅಕ್ಬರ್ ಲೋನ್ ಪ್ರತ್ಯೇಕತಾವಾದಿಗಳ ಬೆಂಬಲಿಗರಾಗಿದ್ದು, ರಾಜ್ಯಕ್ಕೆ ನೀಡಿದ್ದ ವಿಶೇಷ ಸ್ಥಾನಮಾನವನ್ನು ಹಿಂಪಡೆದ ಕೇಂದ್ರದ ನಿರ್ಧಾರವನ್ನು ಪ್ರಶ್ನಿಸಲು ಅವರಿಗಿರುವ ಅರ್ಹತೆ ಏನು ಎಂದು ಕಾಶ್ಮೀರಿ ಪಂಡಿತರ ಗುಂಪೊಂದು ಕೇಳಿದೆ. ಈ ಕುರಿತು 'ರೂಟ್ಸ್ ಇನ್ ಕಾಶ್ಮೀರ್' ಎಂಬ ಕಾಶ್ಮೀರಿ ಪಂಡಿತ ಯುವಕರ ಗುಂಪು ಸುಪ್ರೀಂಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದೆ.