ಶಿಮ್ಲಾ: ಹಿಮಾಚಲ ಪ್ರದೇಶದ ನಿಗುಲ್ಸಾರಿಯ ರಾಷ್ಟ್ರೀಯ ಹೆದ್ದಾರಿ 5ರಲ್ಲಿ ಗುರುವಾರ ರಾತ್ರಿ ಭಾರಿ ಭೂಕುಸಿತ ಸಂಭವಿಸಿದ್ದು, ಕಿನ್ನೌರ್ ಜಿಲ್ಲೆ ಮತ್ತು ಶಿಮ್ಲಾ ನಡುವೆ ರಸ್ತೆ ಸಂಪರ್ಕ ಕಡಿತಗೊಂಡಿದೆ.
ಭೂಕುಸಿತದಿಂದಾಗಿ ರಾಷ್ಟ್ರೀಯ ಹೆದ್ದಾರಿಯ ಸುಮಾರು 150-300 ಮೀಟರ್‌ವರೆಗಿನ ವಿಸ್ತಾರದ ರಸ್ತೆಯೂ ಭಾರಿ ಹಾನಿಗೊಳಗಾಗಿದ್ದು, ನಡೆದುಕೊಂಡು ಹೋಗುವ ಪರಿಸ್ಥಿತಿಯಲ್ಲಿಲ್ಲ ಎಂದು ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ (ಎನ್‌ಎಚ್‌ಎಐ) ಕಾರ್ಯನಿರ್ವಾಹಕ ಎಂಜಿನಿಯರ್ ಕೆ.ಎಲ್ ಸುಮನ್ ಹೇಳಿದ್ದಾರೆ.
ಕಿನ್ನೌರ್‌ನಿಂದ ಬಂದಿರುವ ಸೇಬು ತುಂಬಿದ ಟ್ರಕ್‌ಗಳು ಸೇರಿದಂತೆ ಹೆಚ್ಚಿನ ಸಂಖ್ಯೆಯ ವಾಹನಗಳು ರಸ್ತೆಯಲ್ಲಿ ಸಿಲುಕಿಕೊಂಡಿವೆ. ಕೂಡಲೇ ರಸ್ತೆ ತೆರವುಗೊಳಿಸದಿದ್ದರೆ ಹಣ್ಣು ಕೊಳೆಯುವ ಆತಂಕದಲ್ಲಿ ಸೇಬು ಬೆಳೆಗಾರರಿದ್ದಾರೆ. ಸ್ಥಳದಲ್ಲಿ ಕಾರ್ಯಾಚರಣೆ ನಡೆಸಲು ಯಂತ್ರೋಪಕರಣಗಳು ಮತ್ತು ಸಿಬ್ಬಂದಿಯನ್ನು ನಿಯೋಜಿಸಲಾಗಿದೆ, ಆದರೆ, ದೊಡ್ಡ ಗಾತ್ರದ ಬಂಡೆಗಳು ಕೂಡ ಉರುಳಿ ಬಿದ್ದಿರುವುದರಿಂದ ಅವುಗಳನ್ನು ತೆರವುಗೊಳಿಸುವ ಕಾರ್ಯ ವಿಳಂಬವಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಕಿನ್ನೌರ್ ಶಾಸಕ ಹಾಗೂ ಕಂದಾಯ, ತೋಟಗಾರಿಕೆ ಮತ್ತು ಗಿರಿಜನ ಅಭಿವೃದ್ಧಿ ಸಚಿವ ಜಗತ್ ಸಿಂಗ್ ನೇಗಿ ಘಟನಾ ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲಿಸಿದ್ದು, ರಸ್ತೆಯನ್ನು ತೆರವುಗೊಳಿಸುವಂತೆ, ಪ್ರಯಾಣಿಕರು ಹಾಗೂ ಸರಕು ತುಂಬಿರುವ ಟ್ರಕ್‌ಗಳನ್ನು ಸಾಗಿಸಲು ಪರ್ಯಾಯ ವ್ಯವಸ್ಥೆಯನ್ನು ಏರ್ಪಡಿಸುವಂತೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ಹಿಮಾಚಲ ಪ್ರದೇಶದಲ್ಲಿ ಜೂನ್ 24ರಿಂದ ಮಾನ್ಸೂನ್ ಪ್ರಾರಂಭವಾದಾಗಿನಿಂದ ಇಲ್ಲಿಯವರೆಗೆ ಸುಮಾರು 164 ಭೂಕುಸಿತಗಳಲ್ಲಿ 111 ಜನರು ಮೃತಪಟ್ಟಿದ್ದಾರೆ. ಈವರೆಗೆ ಮಳೆ ಸಂಬಂಧಿತ ಘಟನೆಗಳಲ್ಲಿ 263 ಮಂದಿ ಮೃತಪಟ್ಟಿದ್ದಾರೆ ಎಂದು ರಾಜ್ಯ ತುರ್ತು ಕಾರ್ಯಾಚರಣೆ ಕೇಂದ್ರ ತಿಳಿಸಿದೆ.