ನವದೆಹಲಿ: ಅದಾನಿ ವಿಷಯಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ಶನಿವಾರ ಕೇಂದ್ರ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದೆ. 'ಒಂದು ಭೂಮಿ, ಒಂದು ಕುಟುಂಬ, ಒಂದು ಭವಿಷ್ಯ' ಜಿ20 ಥೀಮ್. ಆದರೆ ಪ್ರಧಾನಿ ನರೇಂದ್ರ ಮೋದಿ ಅವರು "ಒಬ್ಬ ವ್ಯಕ್ತಿ, ಒಂದು ಸರಕಾರ, ಒಂದು ಉದ್ಯಮ ಸಮೂಹದಲ್ಲಿ ನಂಬಿಕೆ ಇಟ್ಟಿದ್ದಾರೆ ಎಂದು ಟೀಕಿಸಿದೆ.
ಯುಎಸ್ ಸಂಶೋಧನಾ ಸಂಸ್ಥೆ ಹಿಂಡೆನ್‌ಬರ್ಗ್ ಉದ್ಯಮಿ ಗೌತಮ್ ಅದಾನಿ ಸಮೂಹದ ಉದ್ಯಮಗಳ ಅಕ್ರಮ ವ್ಯವಹಾರ ಹಾಗೂ ತಿರುಚಿದ ಷೇರು ಮಾರುಕಟ್ಟೆ ದರಗಳನ್ನು ಕಾಂಗ್ರೆಸ್ ಪ್ರಶ್ನಿಸುತ್ತಿದ್ದು, ಹಿಂಡೆನ್‌ಬರ್ಗ್ ವರದಿಯಲ್ಲಿ ಮಾಡಲಾದ ಎಲ್ಲಾ ಆರೋಪಗಳನ್ನು ಅದಾನಿ ಗ್ರೂಪ್ ನಿರಾಕರಿಸಿದೆ ಮತ್ತು ತನ್ನ ಕಡೆಯಿಂದ ಯಾವುದೇ ತಪ್ಪು ನಡೆದಿಲ್ಲ ಎಂದು ಹೇಳಿಕೊಂಡಿದೆ.
ಜಿ20 ಶೃಂಗಸಭೆ ದೆಹಲಿಯಲ್ಲಿ ಆರಂಭವಾಗುತ್ತಿದ್ದಂತೆ, ಭ್ರಷ್ಟಾಚಾರ ಮತ್ತು ಅಕ್ರಮ ಹಣ ವರ್ಗಾವಣೆಗೆ ಕಡಿವಾಣ ಹಾಕಲು ಹಿಂದಿನ ಅಂತಾರಾಷ್ಟ್ರೀಯ ಸಮುದಾಯದ ಸಭೆಗಳಲ್ಲಿ ಮೋದಿ ನೀಡಿದ ಹಲವು ಉಪದೇಶಗಳನ್ನು ನೆನಪಿಸಿಕೊಳ್ಳುವುದು ಯೋಗ್ಯವಾಗಿದೆ ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.
2014 ರ ಬ್ರಿಸ್ಬೇನ್ ಜಿ- 20 ಸಭೆಯಲ್ಲಿ ಆರ್ಥಿಕ ಅಪರಾಧಿಗಳ ಪತ್ತೆ ಮತ್ತು ಭ್ರಷ್ಟರ ಕಾರ್ಯಗಳನ್ನು ಮರೆಮಾಚುವ ಬ್ಯಾಂಕಿಂಗ್ ನೀತಿ ಮತ್ತು ಅಂತಾರಾಷ್ಟ್ರೀಯ ನಿಯಮಗಳನ್ನು ರದ್ದುಗೊಳಿಸಲು ಅಂತಾರಾಷ್ಟ್ರೀಯ ಸಹಕಾರವನ್ನು ಕೋರಿದ್ದ ಪ್ರಧಾನಿ ಮೋದಿ, 2018 ರ ಬ್ಯೂನಸ್ ಐರಿಸ್ ಜಿ 20 ಶೃಂಗಸಭೆಯಲ್ಲಿ ಪರಾರಿಯಾಗಿರುವ ಆರ್ಥಿಕ ಅಪರಾಧಗಳ ವಿರುದ್ಧ ಕ್ರಮ ಮತ್ತು ಆಸ್ತಿ ಮರುಪಡೆಯುವಿಕೆಗಾಗಿ ಒಂಬತ್ತು ಅಂಶಗಳ ಕಾರ್ಯಸೂಚಿಯನ್ನು ಮಂಡಿಸಿದರು ಎಂದು ರಮೇಶ್ ಹೇಳಿದ್ದಾರೆ.
ಜಿ-20 ಜಾಗತಿಕ ಸಮಸ್ಯೆಗಳನ್ನು ಸಹಕಾರಿ ರೀತಿಯಲ್ಲಿ ನಿಭಾಯಿಸುವ ಗುರಿಯನ್ನು ಹೊಂದಿರುವ ಪ್ರಮುಖ ವಿಶ್ವ ಆರ್ಥಿಕತೆಗಳ ಉತ್ಪಾದಕ ಸಭೆಯಾಗಲು ಉದ್ದೇಶಿಸಲಾಗಿದೆ. "ಅಧ್ಯಕ್ಷ ಪುಟಿನ್ ದೂರ ಉಳಿದಿರಬಹುದು, ಆದರೆ ಕೊಳಗೇರಿಯನ್ನು ಧ್ವಂಸಗೊಳಿಸಿ ಅಥವಾ ಅವುಗಳ ಮೇಲೆ ಕವರ್ ಹಾಕಿ ಗಣ್ಯರಿಗೆ ತೋರಿಸಲಾಗುತ್ತಿದೆ. ಪ್ರಧಾನಿ ನರೇಂದ್ರ ಮೋದಿ ಅವರ ವರ್ಚಸ್ಸಿಗೆ ಧಕ್ಕೆ ಭಾರದಂತೆ ವಿಶ್ವ ನಾಯಕರನ್ನು ಒಟ್ಟುಗೂಡಿಸಲಾಗಿದೆ. 'ಒಂದು ಭೂಮಿ, ಒಂದು ಕುಟುಂಬ, ಒಂದು ಭವಿಷ್ಯ' ಜಿ-20 ಥೀಮ್ ಆದರೆ, ಇದು ನಿಜವಾಗಿ 'ಒಬ್ಬ ಮನುಷ್ಯ, ಒಂದು ಸರ್ಕಾರ, ಒಂದು ಉದ್ಯಮ ಗುಂಪು' ಎಂದು ನಂಬಿರುವಂತೆ ತೋರುತ್ತಿದೆ" ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಹೇಳಿದ್ದಾರೆ.