ವಾರಣಾಸಿ: ಉತ್ತರ ಪ್ರದೇಶದ ವಾರಣಾಸಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಭೇಟಿ ವೇಳೆ ಭದ್ರತಾ ಲೋಪ ಉಂಟಾಗಿದ್ದು, ಭದ್ರತೆಯನ್ನು ಉಲ್ಲಂಘಿಸಿದ ವ್ಯಕ್ತಿಯನ್ನು ಬಂಧಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಆ ವ್ಯಕ್ತಿ ವಾರಣಾಸಿಯಲ್ಲಿ ಮೋದಿ ಅವರ ಬೆಂಗಾವಲು ಪಡೆಯ ಮುಂದೆ ಹಾರಿ, ಕೆಲಸ ಬೇಕು ಎಂದು ಕೇಳಿದ್ದಾನೆ.
ಶನಿವಾರ ಸಂಜೆ ಮೋದಿ ಅವರ ಬೆಂಗಾವಲು ಪಡೆ ಲಾಲ್ ಬಹದ್ದೂರ್ ಶಾಸ್ತ್ರಿ ವಿಮಾನ ನಿಲ್ದಾಣಕ್ಕೆ ತೆರಳುತ್ತಿದ್ದಾಗ ವಾರಣಾಸಿಯ ರುದ್ರಾಕ್ಷಿ ಕೇಂದ್ರದ ಹೊರಗೆ ಈ ಘಟನೆ ನಡೆದಿದೆ.
ಕೃಷ್ಣ ಕುಮಾರ್ ಎಂದು ಗುರುತಿಸಲಾದ ವ್ಯಕ್ತಿ ಬಿಜೆಪಿ ಕಾರ್ಯಕರ್ತನಾಗಿದ್ದು, ಬಳಿಕ ಆತನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ.
ಗಾಜಿಪುರದ ನಿವಾಸಿಯಾಗಿರುವ ಈ ವ್ಯಕ್ತಿ ಪ್ರಧಾನಿ ಬೆಂಗಾವಲು ಪಡೆಯಿಂದ ಕೇವಲ 20 ಮೀಟರ್ ದೂರದಲ್ಲಿದ್ದರು. ಪೊಲೀಸರು ಮತ್ತು ಭದ್ರತಾ ಅಧಿಕಾರಿಗಳು ತಕ್ಷಣ ಆತನನ್ನು ಹಿಡಿದರು. ಆ ವ್ಯಕ್ತಿ ಮೋದಿ ಬೆಂಗಾವಲು ಪಡೆಯತ್ತ ಓಡುತ್ತಿರುವುದು ಕಂಡು ಬಂತು.
ಪೊಲೀಸರ ಪ್ರಕಾರ, ಕೃಷ್ಣ ಅವರು ಪ್ರಧಾನಿ ಮೋದಿ ಅವರನ್ನು ಭೇಟಿಯಾಗಲು ಬಯಸಿದ್ದರು.
'ಭರತ್ ಕುಮಾರ್ ಅವರ ಪುತ್ರ ಕೃಷ್ಣ ಕುಮಾರ್ ಅವರು ಬಿಜೆಪಿಯ ಹಿರಿಯ ಕಾರ್ಯಕರ್ತರಾಗಿದ್ದಾರೆ. ಅವರು ಮಾನಸಿಕವಾಗಿ ತೊಂದರೆಗೀಡಾಗಿದ್ದು, ಪ್ರಧಾನಿ ಮೋದಿ ಅವರನ್ನು ಭೇಟಿಯಾಗಲು ಬಯಸಿದ್ದರು' ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.