ಬದಿಯಡ್ಕ: ಬಾಲಗೋಕುಲ ಶ್ರೀಕೃಷ್ಣ ಜನ್ಮಾಷ್ಟಮಿ ಸಮಿತಿ ಬದಿಯಡ್ಕ ಇವರ ನೇತೃತ್ವದಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿ ಉತ್ಸವವು ಇಂದು ಬದಿಯಡ್ಕ ಶ್ರೀ ಗಣೇಶ ಮಂದಿರದಲ್ಲಿ ಜರಗಲಿರುವುದು. ಬೆಳಗ್ಗೆ 9 ಗಂಟೆಗೆ ಶ್ರೀ ಪೂಮಾಣಿ ಕಿನ್ನಿಮಾಣಿ ದೈವಸ್ಥಾನದ ವಠಾರದಿಂದ ಶೋಭಾಯಾತ್ರೆ ಹೊರಡಲಿರುವುದು. 11 ಗಂಟೆಗೆ ಸಭಾಕಾರ್ಯಕ್ರಮ ನಡೆಯಲಿರುವುದು. ಸಮಿತಿಯ ಗೌರವಾಧ್ಯಕ್ಷ ಪೆರುಮುಂಡ ಶಂಕರನಾರಾಯಣ ಭಟ್ ಅಧ್ಯಕ್ಷತೆಯಲ್ಲಿ ಮಂಜೇಶ್ವರ ಬ್ಲಾಕ್ ಪಂಚಾಯಿತಿ ಸದಸ್ಯೆ, ಬಿಜೆಪಿ ಮಹಿಳಾ ಮೋರ್ಚಾ ರಾಷ್ಟ್ರೀಯ ಕಾರ್ಯಕಾರಿಣಿ ಸದಸ್ಯೆ ಅಶ್ವಿನಿ ಎಂ.ಎಲ್. ಉದ್ಘಾಟಿಸಲಿದ್ದಾರೆ. ನಂತರ ವಿವಿಧ ಸ್ಪರ್ಧೆಗಳು ನಡೆಯಲಿದೆ. ಸಂಜೆ 4.30ಕ್ಕೆ ನಡೆಯಲಿರುವ ಸಮಾರೋಪ ಸಮಾರಂಭದಲ್ಲಿ ಸಮಿತಿಯ ಅಧ್ಯಕ್ಷ ಜಯರಾಮ ಬಿ. ಅಧ್ಯಕ್ಷತೆಯಲ್ಲಿ ವಿಟ್ಲ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ನಿವೃತ್ತ ಪ್ರಾಂಶುಪಾಲ ಡಾ. ಶಂಕರ ಪಾಟಾಳಿ ಮುಖ್ಯ ಅತಿಥಿಗಳಾಗಿ ಮಾತನಾಡಲಿದ್ದಾರೆ.