ಕಾಸರಗೋಡು: ರಾಜ್ಯದಲ್ಲಿ ಸಾಕು ಮತ್ತು ಬೀದಿನಾಯಿಗಳಿಗೆ ರೇಬಿಸ್ ಲಸಿಕೆ ಹಾಕುವ ನಿಟ್ಟಿನಲ್ಲಿ ಸೆಪ್ಟೆಂಬರ್ 1 ರಿಂದ ರಾಜ್ಯದಲ್ಲಿ ಸಮಗ್ರ ರೇಬಿಸ್ ನಿಯಂತ್ರಣ ಕಾರ್ಯಕ್ರಮ ಆರಂಭಿಸಲಾಗಿದೆ. ತಿಂಗಳ ಅವಧಿಯ ಈ ಯೋಜನೆಯನ್ನು ಸ್ಥಳೀಯಾಡಳಿತ ಸಂಸ್ಥೆಗಳ ಸಹಯೋಗದಲ್ಲಿ ಅನುಷ್ಠಾನಗೊಳಿಸಲಾಗುತ್ತಿದೆ. ಕಳೆದ ವರ್ಷವೂ ಸೆಪ್ಟಂಬರ್ ತಿಂಗಳಲ್ಲಿ ಅಭಿಯಾನ ನಡೆಸಲಾಗಿದ್ದು, ಇದರ ಮುಂದುವರಿದ ಭಾಗವಾಗಿ ಈ ವರ್ಷವೂ ರಾಜ್ಯಾದ್ಯಂತ ವ್ಯಾಪಕ ಸಿದ್ಧತೆ ನಡೆಸಿ ಯೋಜನೆ ಅನುಷ್ಠಾನಗೊಳಿಸಲಾಗುತ್ತಿದೆ.
ಈ ಬಾರಿ ಯೋಜನೆಗೆ ಪ್ರಾಣಿ ಕಲ್ಯಾಣ ಸಂಸ್ಥೆಯಾದ ಮಿಷನ್ ರೇಬೀಸ್‍ನ ತಾಂತ್ರಿಕ ಸಹಕಾರವೂ ದೊರೆಯಲಿದ್ದು, ರೇಬೀಸ್ ಲಸಿಕೆ ವಿತರಣೆಗೆ ಅಗತ್ಯ ಲಸಿಕೆ ಸ್ಕ್ವಾಡ್‍ಗಳನ್ನು ರಚಿಸಲಾಗಿದೆ. ಸ್ಕ್ವಾಡ್ ಸದಸ್ಯರಿಗೆ ಆರೋಗ್ಯ ಇಲಾಖೆಯಿಂದ ರೇಬಿಸ್ ಲಸಿಕೆ ಒದಗಿಸಲೂ ಕ್ರಮಕೈಗೊಳ್ಳಲಾಗಿದ್ದು, ರಾಜ್ಯಾದ್ಯಂತ ನಾಯಿಗಳಿಗೆ ಲಸಿಕೆ ನೀಡಲು ಅಗತ್ಯವಾದ ಆ್ಯಂಟಿ ರೇಬಿಸ್ ಲಸಿಕೆ ಮತ್ತು ಇತರ ಸಂಬಂಧಿತ ವಸ್ತುಗಳನ್ನು ಇಲಾಖೆ ಸಿದ್ಧಪಡಿಸಿದೆ. ಸಾಕು ನಾಯಿಗಳಿಗೆ ಲಸಿಕೆ ಹಾಕಿದ ನಂತರ ಪಶುವೈದ್ಯಕೀಯ ಆಸ್ಪತ್ರೆಗಳಿಂದ ಲಸಿಕೆ ಪ್ರಮಾಣಪತ್ರವನ್ನು ನೀಡಲಾಗುತ್ತದೆ. ಅದರ ಆಧಾರದ ಮೇಲೆ, ಸಾಕುನಾಯಿ ಮಾಲೀಕರು ಸ್ಥಳೀಯಾಡಳಿತ ಸಂಸ್ಥೆಗಳಿಂದ ಪರವಾನಗಿ ಪಡೆಯಬಹುದು. ಸ್ಥಳೀಯಾಡಳಿತ ಸಂಸ್ಥೆಗಳು ಸ್ಥಾಪಿಸಿರುವ ಯೋಜನೆಯ ಅಂಗವಾಗಿ ಬೀದಿನಾಯಿಗಳಿಗೆ ಲಸಿಕೆ ಹಾಕಲಾಗುತ್ತದೆ. ಎಲ್ಲಾ ಜಿಲ್ಲೆಗಳಲ್ಲಿ ಪ್ರಾಣಿ ಕಲ್ಯಾಣ ಸಂಸ್ಥೆಗಳು ಮತ್ತು ಸ್ಥಳೀಯಾಡಳಿತ ಸಂಸ್ಥೆಗಳ ಸಹಭಾಗಿತ್ವ ಖಾತ್ರಿಪಡಿಸುವ ಮೂಲಕ ಈ ಅಭಿಯಾನವನ್ನು ಜಾರಿಗೊಳಿಸಲಾಗುತ್ತಿದೆ. ಯೋಜನೆಯ ರಾಜ್ಯಮಟ್ಟದ ಉದ್ಘಾಟನೆಯನ್ನು ಕೊಲ್ಲಂ ಜಿಲ್ಲಾ ಪಶುವೈದ್ಯಕೀಯ ಕೇಂದ್ರದಲ್ಲಿ ಪಶುಸಂಗೋಪನಾ ಸಚಿವೆ ಚಿಂಚುರಾಣಿ ಶುಕ್ರವಾರ ನೆರವೇರಿಸಿದರು.