ನವದೆಹಲಿ (PTI): 'ರೈಲು ಚಾಲಕರಿಗೆ ನಿದ್ದೆಯ ಮಂಪರು ಕವಿಯುತ್ತಿದ್ದರೆ ಅಥವಾ ತೂಕಡಿಕೆ ಬರುತ್ತಿದ್ದರೆ, ಅವರ ಕಣ್ಣಿನ ಚಲನೆಯನ್ನು ಗಮನಿಸಿ ಎಚ್ಚರಿಸುವ ಕೃತಕ ಬುದ್ಧಿಮತ್ತೆ ಆಧಾರಿತ ಸಾಧನವೊಂದನ್ನು ಈಶಾನ್ಯ ಫ್ರಾಂಟಿಯರ್ ರೈಲ್ವೆಯು (ಎನ್‌ಎಫ್‌ಆರ್) ಅಭಿವೃದ್ಧಿಪಡಿಸುತ್ತಿದ್ದಾರೆ' ಎಂದು ಮೂಲಗಳು ಹೇಳಿವೆ.
ನವದೆಹಲಿ (PTI): 'ರೈಲು ಚಾಲಕರಿಗೆ ನಿದ್ದೆಯ ಮಂಪರು ಕವಿಯುತ್ತಿದ್ದರೆ ಅಥವಾ ತೂಕಡಿಕೆ ಬರುತ್ತಿದ್ದರೆ, ಅವರ ಕಣ್ಣಿನ ಚಲನೆಯನ್ನು ಗಮನಿಸಿ ಎಚ್ಚರಿಸುವ ಕೃತಕ ಬುದ್ಧಿಮತ್ತೆ ಆಧಾರಿತ ಸಾಧನವೊಂದನ್ನು ಈಶಾನ್ಯ ಫ್ರಾಂಟಿಯರ್ ರೈಲ್ವೆಯು (ಎನ್‌ಎಫ್‌ಆರ್) ಅಭಿವೃದ್ಧಿಪಡಿಸುತ್ತಿದ್ದಾರೆ' ಎಂದು ಮೂಲಗಳು ಹೇಳಿವೆ.
'ಈ ಸಾಧನದಿಂದ ಚಾಲಕರನ್ನು ಎಚ್ಚರಿಸುವುದು ಸುಲಭವಾಗುತ್ತದೆ. ಅಥವಾ ಅವರಿಗೆ ನಿದ್ದೆ ಬಂದಿದ್ದರೆ ರೈಲನ್ನು ನಿಲ್ಲಿಸಲು ಅನಕೂಲವಾಗುತ್ತದೆ' ಎಂದು ವಿವರಿಸಿವೆ.
'ಪ್ರಸ್ತುತ ಸಾಧನಕ್ಕೆ ರೈಲ್ವೆ ಚಾಲಕ ಸಹಾಯಕ ವ್ಯವಸ್ಥೆ (ರೈಲ್ವೆ ಡ್ರೈವರ್ ಅಸಿಸ್ಟನ್ಸ್ ಸಿಸ್ಟಮ್- ಆರ್‌ಡಿಎಎಸ್) ಎಂದು ಹೆಸರಿಡಲಾಗಿದೆ. ಚಾಲಕನು ಕೆಲವು ಸಮಯದವರೆಗೆ ಜಾಗರೂಕನಾಗಿರದ್ದರೆ ಎಚ್ಚರಿಕೆಯನ್ನು ನೀಡುವುದು ಮಾತ್ರವಲ್ಲ, ತುರ್ತು ಬ್ರೇಕ್‌ಗಳನ್ನು ಸಹ ಈ ಸಾಧನದ ಸಹಾಯದಿಂದ ಅನ್ವಯಿಸಬಹುದು' ಎಂದು ಅವು ವಿವರಿಸಿವೆ.
'ಸಾಧನವು ಅಭಿವೃದ್ಧಿ ಹಂತದಲ್ಲಿದ್ದು, ಅದರ ಸಮರ್ಪಕ ಕಾರ್ಯನಿರ್ವಹಣೆಯನ್ನು ಖಚಿತಪಡಿಸಿಕೊಳ್ಳಲು ಪ್ರಯೋಗಗಳನ್ನು ನಡೆಸಲಾಗುತ್ತಿದೆ. ಈ ಕುರಿತು ಎನ್‌ಎಫ್‌ಆರ್‌ನ ತಾಂತ್ರಿಕ ತಂಡ ಕಾರ್ಯನಿರ್ವಹಿಸುತ್ತಿದೆ. ಇನ್ನೂ ಕೆಲವೇ ದಿನಗಳಲ್ಲಿ ಸಾಧನವು ಸಂಪೂರ್ಣ ಪ್ರಮಾಣದಲ್ಲಿ ಅಭಿವೃದ್ಧಿಯಾಗಲಿದೆ ಎಂಬ ವಿಶ್ವಾಸವಿದೆ' ಎಂದು ಮಾಹಿತಿ ನೀಡಿವೆ.
'ರೈಲ್ವೆ ಮಂಡಳಿಯು ಆಗಸ್ಟ್ 2ರಂದು ಎನ್‌ಎಫ್‌ಆರ್‌ಗೆ ಪತ್ರವೊಂದನ್ನು ಬರೆದಿದ್ದು, ಆರ್‌ಡಿಎಎಸ್ ಅನ್ನು ಶೀಘ್ರವೇ ಅಭಿವೃದ್ಧಿಪಡಿಸುವಂತೆ ಸೂಚಿಸಿದೆ. ಸಾಧನ ಪೂರ್ಣ ಪ್ರಮಾಣದಲ್ಲಿ ತಯಾರಾದ ಬಳಿಕ, ಆರಂಭಿಕ ಹಂತವಾಗಿ ಆರ್‌ಡಿಎಸ್ ಅನ್ನು 20 ಗೂಡ್ಸ್ ರೈಲುಗಳ ಎಂಜಿನ್‌ಗಳಿಗೆ (ವಿಎಜಿ9) ಮತ್ತು ಪ್ರಯಾಣಿಕ ರೈಲುಗಳ ಎಂಜಿನ್‌ಗಳಿಗೆ (ವಿಎಪಿ7) ಅಳವಡಿಸುವ ಯೋಚನೆ ಇರುವುದಾಗಿ ಹೇಳಿದೆ' ಎಂದೂ ತಿಳಿಸಿವೆ.
'ಆರ್‌ಡಿಎಎಸ್ ಅನ್ನು ಬಳಸಿದ ನಂತರ ಅದರ ಕಾರ್ಯವಿಧಾನದ ಕುರಿತು ಸೂಕ್ತ ಪ್ರತಿಕ್ರಿಯೆ ನೀಡಬೇಕೆಂದೂ ಮಂಡಳಿ ಎಲ್ಲ ರೈಲ್ವೆ ವಲಯಗಳಿಗೆ ತಿಳಿಸಿದೆ. ಇದರಿಂದ ಅಗತ್ಯವಿದ್ದಲ್ಲಿ ಸಾಧನವನ್ನು ಇನ್ನೂ ಅಭಿವೃದ್ಧಿಗೊಳಿಸಬಹುದು ಎಂದಿದೆ' ಎಂದು ಹೇಳಿವೆ.
ರೈಲು ಚಾಲಕರ ಕಣ್ಣಿನ ಚಲನೆ ಗಮನಿಸಿ ಅವರನ್ನು ಎಚ್ಚರಿಸುವ ಸಾಧನವೊಂದನ್ನು ಅಭಿವೃದ್ಧಿಪಡಿಸುವಂತೆ ರೈಲ್ವೆ ಮಂಡಳಿಯು ಜೂನ್‌ನಲ್ಲಿ ಎನ್‌ಎಫ್‌ಆರ್‌ಗೆ ಸೂಚಿಸಿತ್ತು.