ನವದೆಹಲಿ : 'ಗಜ ಕ್ಯಾಪಿಟಲ್ ಬ್ಯುಸಿನೆಸ್ ಬುಕ್ ಫ್ರೈಸ್' ಪ್ರಶಸ್ತಿಗೆ ಆಯ್ಕೆ ಆಗಿರುವ 10 ಸಂಭಾವ್ಯ ಪುಸ್ತಕಗಳ ಪಟ್ಟಿಯು ಸೋಮವಾರ ಬಿಡುಗಡೆಯಾಗಿದ್ದು, ಆರ್‌ಬಿಐನ ಮಾಜಿ ಗವರ್ನರ್ ಸಿ. ರಂಗರಾಜನ್ ಅವರ ಆತ್ಮಕಥೆ 'ಫೋರ್ಕ್ಸ್ ಇನ್ ದಿ ರೋಡ್: ಮೈ ಡೇಸ್ ಎಟ್ ಆರ್‌ಬಿಐ ಆಯಂಡ್ ಬಿಯಾಂಡ್', ಲೇಖಕಿ ಮೀರಾ ಕುಲಕರ್ಣಿ ಅವರ 'ಎಸೆನ್ಶಿಯಲಿ ಮೀರಾ: ದಿ ಎಕ್ಸ್‌ಟ್ರಾರ್ಡಿನರಿ ಜರ್ನಿ ಬಿಹೈಂಡ್ ಫಾರೆಸ್ಟ್ ಎಸೆನ್ಶಿಯಲ್ಸ್' ಮತ್ತು ಕರಣ್ ಬಜಾಜ್ ಅವರ 'ದಿ ಫ್ರೀಡಂ ಮ್ಯಾನಿಫೆಸ್ಟೊ' ಪುಸ್ತಕಗಳು ಪಟ್ಟಿಯಲ್ಲಿ ಸೇರಿವೆ.
ಉದ್ಯಮಶೀಲತೆ, ಭಾರತೀಯ ಕುಟುಂಬಗಳ ಉದ್ಯಮಗಳು, ಭಾರತದ ಡಿಜಿಟಲ್ ತಂತ್ರಜ್ಞಾನ ಕ್ರಾಂತಿ, ಭಾರತೀಯ ಉದ್ಯಮದ ನೋಟ, ಅರ್ಥಶಾಸ್ತ್ರ ಮತ್ತು ವೈಯಕ್ತಿಕ ಯಶಸ್ಸಿಗೆ ಸಂಬಂಧಿಸಿದ ಮಾಹಿತಿಗಳ ಕುರಿತು ಬರೆಯಲಾಗಿರುವ ಪುಸ್ತಕಗಳು ಸಂಭಾವ್ಯ ಪಟ್ಟಿಯಲ್ಲಿ ಸ್ಥಾನಪಡೆದಿವೆ ಎಂದು ಪ್ರಶಸ್ತಿ ಆಯೋಜಕರಾಗಿರುವ ಗಜ ಕ್ಯಾಪಿಟಲ್ ಸಂಸ್ಥೆ ತಿಳಿಸಿದೆ.
ಇದು ಈ ಪ್ರಶಸ್ತಿಯ ಐದನೇ ಆವೃತ್ತಿಯಾಗಿದ್ದು ಉದ್ಯಮಶೀಲರು, ಉದ್ಯಮ ಕ್ಷೇತ್ರದ ನಾಯಕರು ಮತ್ತು ಭಾರತೀಯ ಅರ್ಥಶಾಸ್ತ್ರದ ಪಥದ ಕುರಿತು ತಿಳಿದುಕೊಳ್ಳಲು ಬಯಸುವವರಿಗಾಗಿ ಅತ್ಯುತ್ತಮ ಪುಸ್ತಕಗಳನ್ನು ಪ್ರಶಸ್ತಿ ತೀರ್ಪುಗಾರರ ಮಂಡಳಿಯು ಆರಿಸಲಿದೆ ಎಂಬ ವಿಶ್ವಾಸವಿದೆ ಎಂದು ಗಜ ಕ್ಯಾಪಿಟಲ್ ಪ್ರಕಟಣೆಯಲ್ಲಿ ಹೇಳಿದೆ.
ಪ್ರಶಸ್ತಿಯು ₹15 ಲಕ್ಷ ನಗದು ಬಹುಮಾನ ಹೊಂದಿದೆ. ಭಾರತದಲ್ಲಿ ಲೇಖಕರಿಗೆ ನೀಡುವ ಅತಿ ಹೆಚ್ಚು ಮೊತ್ತದ ನಗದು ಬಹುಮಾನ ಇದಾಗಿದೆ.