ಬದಿಯಡ್ಕ: ಪಾಡಿ ಬೆಳ್ಳೂರು ಶ್ರೀ ಮಹಾವಿಷ್ಣು ಕ್ಷೇತ್ರದಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿ ವಿವಿಧ ಕಾರ್ಯಕ್ರಮಗಳೊಂದಿಗೆ ಬುಧವಾರ ನಡೆಯಿತು. ಬೆಳಗ್ಗೆ ಸಾಮೂಹಿಕ ಶ್ರೀಸತ್ಯನಾರಾಯಣ ಪೂಜೆ ಜರಗಿತು. ಸರೋಜ ಎಸ್. ಭಟ್ ಮತ್ತು ಶಿಷ್ಯಂದಿರಾದ ಕು.ವೈದೇಹಿ ಹೇರಳ, ಕು. ವೈಷ್ಣವಿ ಎಡನೀರು ಇವರಿಂದ ಭಕ್ತಿಗೀತೆ ಜರಗಿತು.
ಧಾರ್ಮಿಕ ಸಭೆ:
ಅಪರಾಹ್ನ ಶ್ರೀಕ್ಷೇತ್ರದ ಸಭಾಂಗಣದಲ್ಲಿ ಜರಗಿದ ಧಾರ್ಮಿಕ ಸಭೆಯಲ್ಲಿ ಶ್ರೀಹರಿಹರ ಸೇವಾಸಮಿತಿ ಅಧ್ಯಕ್ಷ ಎಂ.ಜೆ.ಹರಿಪ್ರಸಾದ್ ಅಧ್ಯಕ್ಷತೆ ವಹಿಸಿದ್ದರು. ಬ್ರಹ್ಮಶ್ರೀ ಇರುವೈಲ್ ಪದ್ಮನಾಭ ತಂತ್ರಿ ಉಪಸ್ಥಿತರಿದ್ದರು. ಕೊಡುಗೈದಾನಿ, ಧಾರ್ಮಿಕ ಸಾಮಾಜಿಕ ಮುಖಂಡ ಸದಾಶಿವ ಶೆಟ್ಟಿ ಕುಳೂರು ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿ ಧಾರ್ಮಿಕ ಆಚರಣೆಗಳು ನಿರಂತರ ನಡೆದಾಗ ಅದರ ಮಹತ್ವವನ್ನು ಮುಂದಿನ ಜನಾಂಗಕ್ಕೆ ತಿಳಿಸಿದಂತಾಗುತ್ತದೆ ಎಂದರು.
ಈ ಸಂದರ್ಭ ಇಸ್ರೋ ವಿಜ್ಞಾನಿ ಕೃಷ್ಣಮೋಹನ್ ಶ್ಯಾನುಭೋಗ್ ಎರಿಯಪಾಡಿ ಅವರನ್ನು ಸನ್ಮಾನಿಸಲಾಯಿತು. ಸನ್ಮಾನವನ್ನು ಸ್ವೀಕರಿಸಿ ಅವರು ಮಾತನಾಡಿ ಕನ್ನಡ ಮಾಧ್ಯಮದಲ್ಲಿ ಕಲಿತವರೂ ಸಾಧನೆಯನ್ನು ಮಾಡಲು ಸಾಧ್ಯವಿದೆ. ಆಂಗ್ಲ ಮಾಧ್ಯಮದಲ್ಲೇ ವ್ಯಾಸಂಗವನ್ನು ಮಾಡಬೇಕೆಂದಿಲ್ಲ. ನಮ್ಮೂರಿನ ಶಾಲೆಗಳಲ್ಲಿಯೇ ಕಲಿತು ನಾನು ಇಂದು ಈ ಹಂತದಲ್ಲಿದ್ದೇನೆ. ವಿದ್ಯಾರ್ಥಿಗಳಲ್ಲಿ ಆತ್ಮಸ್ಥೈರ್ಯವನ್ನು ತುಂಬಿಸುವ ಕಾರ್ಯವನ್ನು ಹೆತ್ತವರು ಮಾಡಬೇಕು. ಸಾರ್ವಜನಿಕವಾಗಿ ಎಲ್ಲರೊಂದಿಗೆ ಬೆರೆಯುವ ಜೀವನ ನಮ್ಮದಾಗಬೇಕು ಎಂದು ತಿಳಿಸಿದ ಅವರು ಇಸ್ರೋ ಸಾಧನೆ, ಚಂದ್ರಯಾನದ ಬಗ್ಗೆ ವಿವರಣೆಯನ್ನು ನೀಡಿದರು.
ಎಂ. ಮೋಹನವರ್ಮ ರಾಜ, ಶ್ರೀಜ ಟಿ.ಎಂ., ಪ್ರೊ.ಎ. ಶ್ರೀನಾಥ್ ಉಪಸ್ಥಿತರಿದ್ದರು. ಸಿ.ಕೆ.ವೇಣುಗೋಪಾಲನ್ ನಾಯರ್ ಸ್ವಾಗತಿಸಿ, ಕೆ. ಜಗನ್ನಾಥ ಶೆಟ್ಟಿ ವಂದಿಸಿದರು.