ಮಂಜೇಶ್ವರ: ಕರ್ನಾಟಕ ಗಮಕ ಕಲಾ ಪರಿಷತ್ತಿನ ಕೇರಳ ಗಡಿನಾಡ ಘಟಕ, ಕಾಸರಗೋಡು ಹಾಗೂ ಸಿರಿಗನ್ನಡ ವೇದಿಕೆಯ ಕೇರಳ ಗಡಿನಾಡ ಘಟಕದ ಸಂಯುಕ್ತ ಆಶ್ರಯದಲ್ಲಿ ಪ್ರಕೃತ ವರ್ಷದ "ಗಮಕ ಶ್ರಾವಣ" ಸರಣಿ ಕಾರ್ಯಕ್ರಮದ ಸಮಾರೋಪ ಸಮಾರಂಭ ದೈಗೋಳಿಯ ಶ್ರೀಸಾಯಿನಿಕೇತನ ಸೇವಾಶ್ರಮದ ಸಭಾಂಗಣದಲ್ಲಿ ತೆಕ್ಕೆಕೆರೆ ಶಂಕರನಾರಾಯಣ ಭಟ್ಟರ ಅಧ್ಯಕ್ಷತೆಯಲ್ಲಿ ಇತ್ತೀಚೆಗೆ ಸಂಪನ್ನಗೊಂಡಿತು.
ಸೇವಾಶ್ರಮದ ಸ್ಥಾಪಕರಾದ ಡಾ.ಉದಯಕುಮಾರ ದೀಪಬೆಳಗುವುದರೊಂದಿಗೆ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು. ಮುಖ್ಯ ಅತಿಥಿಗಳಾಗಿ ಡಾ. ಗೋವಿಂದ ಪ್ರಸಾದ ಕಜೆ ಗಮಕ ಕಲೆಯ ಮಹತ್ವ ಹಾಗೂ ಔಚಿತ್ಯಗಳ ಕುರಿತು ಮಾತನಾಡಿದರು. ವಿ.ಬಿ.ಕುಳಮರ್ವ "ಗಮಕ ಶ್ರಾವಣ" ಸರಣಿ ಕಾರ್ಯಕ್ರಮದ ಉದ್ದೇಶ ಹಾಗೂ ಹಿನ್ನೆಲೆಗಳನ್ನು ವಿವರಿಸಿ, ಪ್ರಸ್ತಾವಿಕವಾಗಿ ಮಾತನಾಡಿದರು. ವಾಲ್ಮೀಕಿ ರಾಮಾಯಣದ "ಶ್ರೀ ರಾಮ ಪರಂಧಾಮ" ಭಾಗವನ್ನು ಮಂಗಳೂರಿನ ಎಕ್ಸ್ಪರ್ಟ್ ಕಾಲೇಜಿನ ಕನ್ನಡ ಪ್ರಾಧ್ಯಾಪಕ ಡಾ. ಶ್ರೀಕೃಷ್ಣ ಭಟ್ ಸುಣ್ಣಂಗುಳಿ ಅವರು ಸುಶ್ರಾವ್ಯವಾಗಿ ವಾಚಿಸಿದರು. ಮೈಸೂರಿನ ಜೆ.ಎಸ್.ಎಸ್.ಆಯುರ್ವೇದ ಕಾಲೇಜಿನ ಸಂಸ್ಕೃತ ಪ್ರಾಧ್ಯಾಪಕ ವಿದ್ವಾನ್ ಪ್ರೊ. ರಘುಪತಿ ಭಟ್ ಸಸಿಹಿತ್ಲು ಅವರು ವಿದ್ವತ್ಪೂರ್ಣವಾಗಿ ವ್ಯಾಖ್ಯಾನಗೈದರು. ಡಾ. ಶಾರದಾ ಸ್ವಾಗತಿಸಿ, ಗೋವಿಂದರಾಮ್ ವಂದನಾರ್ಪಣೆಗೈದರು. ಕಲಾವಿದರನ್ನು ಶಾಲು ಹೊದೆಸಿ ಗೌರವಿಸಲಾಯಿತು. ಗಣೇಶ ಪ್ರಸಾದ ಪಾಣೂರು ಅತಿಥಿಗಳಿಗೆ ಮತ್ತು ಕಲಾವಿದರಿಗೆ ಗ್ರಂಥಗಳನ್ನು ಕಾಣಿಕೆಯಾಗಿ ನೀಡಿದರು.
ಈ ವರ್ಷ ಎಡನೀರು ಮಠದ ಸಭಾಂಗಣದಲ್ಲಿ ವಿಶೇಷ ಗಮಕ ಸಮ್ಮೇಳನವನ್ನು ದಿನಪೂರ್ತಿ ವ್ಯವಸ್ಥೆ ಗೊಳಿಸುವ ಬಗ್ಗೆ ಸಂಪೂರ್ಣ ಭರವಸೆಯನ್ನು ನೀಡಿದ ಶ್ರೀ ಸಚ್ಚಿದಾನಂದ ಭಾರತೀ ಶ್ರೀಪಾದಂಗಳವರು ಸಾಹಿತ್ಯ ಕಲೆಗಳ ಮೇಲಿರಿಸಿರುವ ಅಭಿಮಾನವನ್ನು ಸಾಕಾರಗೊಳಿಸುವ ನಿಟ್ಟಿನಲ್ಲಿ ನಿರ್ಧಾರವನ್ನು ಕೈಗೊಳ್ಳಲಾಯಿತು. ಕನ್ನಡ ಸಾಹಿತ್ಯ ಪರಿಷತ್ತಿನ ಕೇರಳ ಗಡಿನಾಡ ಘಟಕದ ಅಧ್ಯಕ್ಷ ಎಸ್.ವಿ.ಭಟ್ ಅವರ ಅಕಾಲಿಕ ನಿಧನಕ್ಕೆ ತೀವ್ರ ಸಂತಾಪವನ್ನು ಸೂಚಿಸುತ್ತಾ ವಿ.ಬಿ.ಕುಳಮರ್ವ ಅವರು ನುಡಿನಮನಗಳನ್ನು ಸಲ್ಲಿಸಿದರು.