ಕಾಸರಗೋಡು: ಮೊಗ್ರಾಲ್‍ಪುತ್ತೂರು ಹೈಯರ್ ಸೆಕೆಂಡರಿ ಶಾಲೆಯಲ್ಲಿ ರ್ಯಾಗಿಂಗ್ ಹೆಸರಲ್ಲಿ ವಿದ್ಯಾರ್ಥಿಗಳ ಎರಡು ತಂಡಗಳ ಮಧ್ಯೆ ಹೊಡೆದಾಟ ನಡೆದಿದೆ. ಪೊಲೀಸರು ಆಗಮಿಸುತ್ತಿದ್ದಂತೆ ವಿದ್ಯಾರ್ಥಿಗಳು ಚದುರಿದ್ದಾರೆ.
ಶಾಲೆಯಲ್ಲಿ ಪ್ಲಸ್‍ಟು ತರಗತಿಯ ಹಿರಿಯ ವಿದ್ಯಾರ್ಥಿಗಳು ಕಿರಿಯ ವಿದ್ಯಾರ್ಥಿಗಳಿಗೆ ರ್ಯಾಗಿಂಗ್ ಕಿರುಕುಳ ನೀಡುತ್ತಿದ್ದು, ಹಿರಿಯ ವಿದ್ಯಾರ್ಥಿಗಳ ದಬ್ಬಾಳಿಕೆ ಹಾಗೂ ಮಾನಕ್ಕೆ ಅಂಜಿ ವಿದ್ಯಾರ್ಥಿಗಳು ದೂರು ನೀಡಲು ಹಿಂದೇಟು ಹಾಕಿದ್ದರು. ಈ ಮಧ್ಯೆ ಕಿರಿಯ ವಿದ್ಯಾರ್ಥಿಗಳ ಮೇಲೆ ಹಿರಿಯ ವಿದ್ಯಾರ್ಥಿಗಳ ಕಿರುಕುಳ ಸಹಿಸಲಾಗದಾದಾಗ ಕಿರಿಯ ವಿದ್ಯಾರ್ಥಿಗಳ ಒಂದು ತಂಡ ಇದನ್ನು ಪ್ರತಿಭಟಿಸಿತ್ತು. ಇದರಿಂದ ಹಿರಿಯ ವಿದ್ಯಾರ್ಥಿಗಳು ಕಿರಿಯರ ಮೇಲೆ ಹಲ್ಲೆಗೆ ಮುಂದಾಗಿದ್ದರು. ಗುರುವಾರ ಮಧ್ಯಾಹ್ನ ಎರಡೂ ತಂಡಗಳು ಹೊಡೆದಾಡಿಕೊಂಡಿದ್ದು, ಈ ಸಂದರ್ಭ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದರು. ದೂರು ನೀಡಲು ವಿದ್ಯಾರ್ಥಿಗಳು ಹಿಂದೇಟು ಹಾಕಿರುವುದರಿಂದ ಪೊಲೀಸರಿಗೂ ಕ್ರಮ ಕೈಗೊಳ್ಳಲಾಗದ ಸ್ಥಿತಿ ಎದುರಾಗಿದೆ. ಶಾಲಾ ಸಮಿತಿಯ ಮೂಲಕ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವಂತೆ ಸ್ಥಳೀಯರು ಆಗ್ರಹಿಸಿದ್ದಾರೆ.