ಸಣ್ಣ ಮಕ್ಕಳಲ್ಲಿ ಆಗಾಗ ಶೀತ, ಜ್ವರ ಸಾಮಾನ್ಯ. ನಿಮ್ಮ ಮಗುವಿಗೆ ಪದೇ ಪದೇ ಮೂಗು ಸೋರುತ್ತಿದ್ದರೆ, ಕೆಮ್ಮು ಬಾಧಿಸುತ್ತಲೇ ಇದ್ದರೆ ಅಯ್ಯೋ ನನ್ನ ಮಗುವಿಗೆ ಯಾವಾಗ್ಲೂ ನೋಡಿದ್ರೆ ಅನಾರೋಗ್ಯ ಅನ್ನಬೇಡಿ. ಯಾಕಂದ್ರೆ ಆರೋಗ್ಯವಂತ ಮಕ್ಕಳಿಗೂ ಹುಟ್ಟಿದಾಗಿನಿಂದ ಎರಡು ವರ್ಷಗಳವರೆಗೂ ಎಂಟರಿಂದ ಹತ್ತು ಬಾರಿ ವೈರಲ್ ಸೋಂಕಿಗೆ ತುತ್ತಾಗೋದು ಸಹಜವೇ. ಅದರಲ್ಲೂ ಶಾಲೆಗೆ ಹೋಗಲು ಆರಂಭಿಸಿದ ಮಕ್ಕಳಿಗಂತೂ ವರ್ಷದಲ್ಲಿ ಆರರಿಂದ ಎಂಟು ಬಾರಿ ಶೀತ ಬಂದೇ ಬರಬಹುದು. ಇದಕ್ಕೆ ಕಾರಣಗಳು ಹಲವಿದೆ. ಇದನ್ನು ತಡೆಯೋಕೆ ಏನು ಮಾಡಬೇಕು ಎನ್ನುವ ಮಾಹಿತಿ ಈ ಲೇಖನದಲ್ಲಿದೆ.
ಮಕ್ಕಳಲ್ಲಿ ಶೀತಕ್ಕೆ ಏನು ಕಾರಣ..?
ಸಾಮಾನ್ಯವಾಗಿ ಶೀತವೆಂದರೆ ಮೂಗು, ಗಂಟಲಿನಲ್ಲಿ ಆಗುವಂತಹ ಸೋಂಕು. ಅದರಲ್ಲೂ ರೈನೋವೈರಸ್ ಶೀತಕ್ಕೆ ಕಾರಣವಾಗುತ್ತೆ. ಈ ಸೋಂಕು ಗಾಳಿಯಲ್ಲಿ ಮತ್ತು ಮೇಲ್ಮೈಯಲ್ಲಿ ವಾಸಿಸುತ್ತೆ. ಹಾಗಾಗಿಯೇ ಯಾರಾದರೂ ಶೀತವಿದ್ದವರು ನಿಮ್ಮನ್ನು ಸ್ಪರ್ಶಿಸಿದ್ರೆ, ಸೀನಿದ್ರೆ ಅವರ ಶೀತ ನಿಮಗೂ ಅಂಟುತ್ತೆ. ಮಕ್ಕಳಲ್ಲೇ ಯಾಕೆ ಶೀತ ಹೆಚ್ಚು ಎಂದರೆ ಅಂಬೆಗಾಲಿಡುವ, ಆಚೀಚೆ ಓಡಾಡುವ ಮಕ್ಕಳು ಈ ಸೂಕ್ಷ್ಮಾಣುಗಳಿಗೆ ಒಡ್ಡಿಕೊಳ್ಳುವುದು ಬೇಗ. ಅದರಲ್ಲೂ ಚಳಿಗಾಲದಲ್ಲಿ, ಶೀತ ವಾತಾವರಣದಲ್ಲಿ ಮಕ್ಕಳಿಗೆ ಶೀತವಾಗೋದು ಹೆಚ್ಚು.
ಮಕ್ಕಳಲ್ಲಿ ಶೀತಕ್ಕೆ ಕಾರಣವಾಗುವ ಇನ್ನೊಂದು ಗಂಭೀರ ಅಂಶವೆಂದರೆ ಮನೆಯಲ್ಲಿ ಧೂಮಪಾನ. ಮನೆಯಲ್ಲಿ ಯಾರಾದರೂ ಧೂಮಪಾನ ಮಾಡುತ್ತಿದ್ದರೆ ಆ ಹೊಗೆಯಲ್ಲಿನ ರಾಸಾಯನಿಕಗಳು ಮಗುವಿನ ಅಭಿವೃದ್ಧಿಹೊಂದುತ್ತಿರುವ ಶ್ವಾಸಕೋಶಕ್ಕೆ ಹಾನಿಯುಂಟು ಮಾಡಬಹುದು. ಹೆತ್ತವರು ಧೂಮಪಾನಿಗಳಾಗಿದ್ದರೆ ಅವರ ಮಕ್ಕಳಿಗೆ ಶೀತವಾಗೋದು ಹೆಚ್ಚು.
ಮಕ್ಕಳಲ್ಲಿ ಶೀತದ ಲಕ್ಷಣಗಳಿವು..
ಸಣ್ಣಮಕ್ಕಳಲ್ಲಿ ಶೀತದ ಸಾಮಾನ್ಯ ಲಕ್ಷಣವೆಂದರೆ ಸೀನುವುದು, ಮೂಗು ಸೋರುವುದು, ಗಂಟಲಿನಲ್ಲಿ ಕಿರಿಕಿರಿ ಉಂಟಾಗುತ್ತೆ. ಇದು ಮುಂದುವರಿದು ಕೆಮ್ಮಿಗೂ ಕಾರಣವಾಗುತ್ತೆ. ಮಕ್ಕಳಲ್ಲಿ ಕೆಮ್ಮು ಹೆಚ್ಚಾಗೋದು ರಾತ್ರಿ ಅದೂ ಕೂಡಾ ದೀರ್ಘಕಾಲದ ಕೆಮ್ಮು ಬಂದು ಸೋಂಕು ಕಡಿಮೆಯಾಗುತ್ತೆ.
ಮಕ್ಕಳಲ್ಲಿ ಶೀತದ ಲಕ್ಷಣಗಳು ಹೀಗಿರುತ್ತೆ..
* ಆರಂಭದಲ್ಲಿ ಮೂಗಿನಲ್ಲಿ ಸ್ರವಿಸುವಿಕೆಯು ನಿರಂತರವಾಗಿದ್ದು ನೀರಿನಂತಿರಬಹುದು. ನಂತರ ಲೋಳೆಯು ದಪ್ಪವಾಗಿ, ಕೆಲವೊಮ್ಮೆ ಹಳದಿ ಅಥವಾ ಹಸಿರು ಬಣ್ಣದಿಂದ ಕೂಡಿರುತ್ತದೆ.
* ಬಿಟ್ಟು ಬಿಟ್ಟು ಬರುವ ಒಣಕೆಮ್ಮು
* ಉಸಿರುಕಟ್ಟಿದಂತಾಗುವುದು
* ಕಣ್ಣಿನಿಂದ ನೀರು ಸುರಿಯುವುದು
* ಗಂಟಲಿನಲ್ಲಿ ಕಿರಿಕಿರಿಯಿಂದಾಗಿ ಅಳುವುದು
* ಜ್ವರ ಸಾಮಾನ್ಯವಾಗಿ 101ರಿಂದ 102ರವರೆಗೆ ವಿಶೇಷವಾಗಿ ಸಂಜೆ
* ಹಸಿವಿಲ್ಲದಿರುವುದು, ಏನೂ ತಿನ್ನದಿರುವುದು
* ಆಯಾಸ ಮತ್ತು ಹಠ ಮಾಡುವುದು
* ಸ್ವಲ್ಪ ಊದಿಕೊಂಡ ಗ್ರಂಥಿಗಳು
ಮಕ್ಕಳಲ್ಲಿ ಶೀತ ಎಷ್ಟು ದಿನಗಳವರೆಗೆ ಇರುತ್ತೆ ಎಂದರೆ, ಸಾಮಾನ್ಯವಾಗಿ ಏಳರಿಂದ ಹತ್ತು ದಿನಗಳವರೆಗೂ ಇರಬಹುದು. ಇದು ಕೆಲವೊಮ್ಮೆ ಕಡಿಮೆಯಾಗಲು ಎರಡು ವಾರವೂ ಆಗಬಹುದು. ಅಥವಾ ಶೀತದ ಲಕ್ಷಣಗಳಲ್ಲಿ ಒಂದಾದ ಕೆಮ್ಮು ಕಡಿಮೆಯಾಗುವ ಮೂಲಕ ಶೀತವೂ ನಿಲ್ಲಬಹುದು. ಕೆಲವೊಮ್ಮೆ ಮಕ್ಕಳಲ್ಲಿ ಶೀತ, ಕೆಮ್ಮು ಒಂದು ತಿಂಗಳವರೆಗೂ ಮುಂದುವರಿಯಬಹುದು.
ವೈರಲ್ ಶೀತ ಅಥವಾ ಜ್ವರವನ್ನು ಗುರುತಿಸೋದು ಹೇಗೆ..?
ವೈರಲ್ ನೆಗಡಿ ಮತ್ತು ಬದಲಾದ ವಾತಾವರಣದಿಂದ ಉಂಟಾಗುವ ಜ್ವರ ಒಂದೇ ರೀತಿಯಾಗಿರಬಹುದು. ಯಾಕೆಂದರೆ ಇವೆರಡೂ ಉಸಿರಾಟದ ಸಮಸ್ಯೆಗಳಾಗಿರುತ್ತವೆ. ಶೀತ ಮತ್ತು ಜ್ವರದ ನಡುವಿನ ದೊಡ್ಡ ವ್ಯತ್ಯಾಸವೆಂದರೆ ರೋಗಲಕ್ಷಣಗಳು ಕಾಣಿಸಿಕೊಳ್ಳುವ ವೇಗ ಮತ್ತು ಅವುಗಳ ತೀವ್ರತೆ. ಸಾಮಾನ್ಯ ಶೀತದಲ್ಲಿ ಜ್ವರದ ಮಟ್ಟ ಕಡಿಮೆಯಾಗಿರುತ್ತೆ. ಆದರೆ ಇತರ ಕಾರಣದಿಂದ ಬರುವ ಜ್ವರದಲ್ಲಿ ತಾಪಮಾನದ ಮಟ್ಟದಲ್ಲಿ ಏರಿಕೆಯಿರುತ್ತೆ. ಸಾಮಾನ್ಯ ಶೀತಕ್ಕಿಂತ ಹೆಚ್ಚು ಮಗು ಅನಾರೋಗ್ಯಕ್ಕೆ ಒಳಗಾಗುವುದು ಹೆಚ್ಚು.
ಶೀತಕ್ಕೆ ಏನು ಮದ್ದು..?
ನೆಗಡಿ, ಶೀತ ಬಾರದಂತೆ ತಡೆಯಲು ಯಾವ ಮದ್ದೂ ಇಲ್ಲ ಎನ್ನುವುದು ಎಲ್ಲರಿಗೂ ಗೊತ್ತು. ಆದರೆ ಶೀತದ ಪರಿಣಾಮವನ್ನು ಕಡಿಮೆ ಮಾಡಲು ಕೆಲವೊಂದು ಪರಿಹಾರಗಳನ್ನು ಮಾಡಬಹುದು. ಮೊದಲನೆಯದಾಗಿ ದೇಹವನ್ನು ಹೈಡ್ರೇಟ್ ಆಗಿರುವಂತೆ ನೋಡಿಕೊಳ್ಳುವುದು. ನೀರಿನ ಜೊತೆಗೆ ದ್ರವಾಹಾರ, ಸೂಪ್, ಪೆಡಿಯಾಲೈಟ್ ನೀಡಬಹುದು. ಮೂಗು ಕಟ್ಟಿದಲ್ಲಿ ಮೂಗಿನ ಸುತ್ತ ಮುಲಾಮುಗಳನ್ನು ಹಚ್ಚಬಹುದು. ಶೀತಕ್ಕೆಂದು ಮಾಡುವ ಅನೇಕ ಮನೆಮದ್ದುಗಳು ನಿಮಗೂ ಗೊತ್ತಿರಬಹುದು. ನಿಂಬೆರಸವನ್ನು ಬೆಚ್ಚಗಿನ ನೀರಿಗೆ ಸೇರಿಸಿ ಒಂದು ವರ್ಷ ಮೇಲ್ಪಟ್ಟ ಮಕ್ಕಳಾದರೆ ಜೇನುತುಪ್ಪ ಬೆರೆಸಿ ಕೊಡಬಹುದು. ಇದು ದೇಹವನ್ನು ಹೈಡ್ರೇಟ್ ಆಗಿರಿಸುತ್ತೆ ಮಾತ್ರವಲ್ಲ ಗಂಟಲು ನೋವಿಗೂ ಶಮನ ನೀಡುತ್ತೆ.
ಒಂದು ವರ್ಷದ ಮಗುವಿಗೆ ಶೀತವಿದ್ದರೆ ಹೀಗೆ ಮಾಡಿ
ಒಂದು ವರ್ಷದ ಮಕ್ಕಳಿಗೆ ಮೂಗಿನಿಂದ ಸೀನುವ ವಿಧಾನ ತಿಳಿದಿಲ್ಲವಾದ್ದರಿಂದ ಲೋಳೆ ಗಟ್ಟಿಯಾಗಿ, ಬ್ಲಾಕ್ ಆಗಿರುವ ಮೂಗನ್ನು ಸಡಿಲಗೊಳಿಸಲು ವೈದ್ಯರು ತಿಳಿಸಿರುವ ನೋಸ್ ಡ್ರಾಪ್ಸ್ ಹಾಕಬಹುದು. ಅಥವಾ ಹೆಚ್ಚುವರಿ ಲೋಳೆಯನ್ನು ತೆಗೆಯಲು ಹೀರುವ ಬಲ್ಬ್ ಅಥವಾ ನೋಸ್ಪಿಡ್ರಾವನ್ನು ಬಳಸಬಹುದು. ಮಗು ಮಲಗುವಾಗ ತಲೆ ಎತ್ತರವಿರುವ ಹಾಗೆ ದಿಂಬನ್ನು ಇಡಬಹುದು. ಇದು ಉಸಿರಾಟವನ್ನು ಸರಾಗವಾಗಿಸುತ್ತೆ. ಆದರೆ ದಿಂಬುಗಳನ್ನು ಒಂದು ವರ್ಷ ಮೇಲ್ಪಟ್ಟ ಮಕ್ಕಳಿಗೆ ಮಾತ್ರವೇ ಬಳಸಿ.
ಎರಡು ವರ್ಷದ ಮಗುವಿಗೆ ಶೀತಕ್ಕೆ ಪರಿಹಾರ
ಎರಡು ವರ್ಷದ ಮಗು ಸಾಮಾನ್ಯವಾಗಿ ನಾವು ಹೇಳುವುದನ್ನು ಅನುಸರಿಸುತ್ತದೆ. ಇದರಂತೆ ಮಗುವಿಗೆ ಮೂಗಿಗೆ ಕೈ ಹಿಡಿದುಕೊಂಡು ಊದಲು ಕಲಿಸಿ. ಲೋಳೆ ಗಟ್ಟಿಯಾಗಿದ್ದರೆ ಲವಣಯುಕ್ತ ಡ್ರಾಪ್ಸ್ ಹಾಕಿ. ತಲೆ ಮೇಲಕ್ಕೆ ಇಟ್ಟುಕೊಳ್ಳಲು ಹೆಚ್ಚುವರಿ ದಿಂಬು ಬಳಸಿ.
ಮೂರು ವರ್ಷ ಮತ್ತು ಅದಕ್ಕಿಂತ ಹೆಚ್ಚಿನ ವರ್ಷ ಮೇಲ್ಪಟ್ಟ ಮಕ್ಕಳಿಗೆ
ಮೂರು ವರ್ಷ ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಸಿನ ಮಕ್ಕಳಿಗೆ ಕೆಮ್ಮು ಮತ್ತು ಶೀತದ ಔಷಧಿಯನ್ನು ಎಂದಿಗೂ ನೀಡಬಾರದು. ಇದು ಮಕ್ಕಳಿಗೆ ಪರಿಣಾಮಕಾರಿಯಾಗಿರದು ಮಾತ್ರವಲ್ಲ ಅದರಿಂದ ಗಂಭೀರ ಅಡ್ಡಪರಿಣಾಮಗಳೂ ಆಗಬಹುದು. ನಿಮ್ಮ ಮಕ್ಕಳು ಆರು ವರ್ಷಕ್ಕಿಂತ ಕೆಳಗಿನವರಾಗಿದ್ದರೆ ಕೆಮ್ಮಿನ ಔಷಧಿ ನೀಡುವ ಮುನ್ನ ವೈದ್ಯರ ಸಲಹೆ ಖಂಡಿತವಾಗಿಯೂ ಪಡೆಯಿರಿ. ವೈದ್ಯರು ತಿಳಿಸಿದ ಪ್ರಮಾಣದಷ್ಟೇ ಔಷಧಿಯನ್ನು ಮಕ್ಕಳಿಗೆ ನೀಡಿ.
ಮಕ್ಕಳಲ್ಲಿ ಶೀತವಾಗದಂತೆ ನೋಡಿಕೊಳ್ಳುವುದು ಹೇಗೆಂದರೆ..
ಶೀತವಾದ ನಂತರ ಔಷಧಿ ಕೊಡುವ ಮೊದಲು, ಶೀತವಾಗದಂತೆ ನೋಡಿಕೊಳ್ಳುವುದು ಎಷ್ಟೋ ಉತ್ತಮ. ಇದಕ್ಕೆ ಮೊದಲು ಮಾಡಬೇಕಾದ ಪರಿಹಾರವೆಂದರೆ ನಿಮ್ಮ ಮಗುವಿನ ಕೈಯನ್ನು ಆಗಾಗ ತೊಳೆಯುವುದು. ಮೂರು ವರ್ಷದ ಮಕ್ಕಳಾಗಿದ್ದರೆ ಕೈತೊಳೆಯುವುದರ ಮಹತ್ವವನ್ನು ಅವರಿಗರ್ಥವಾಗುವಂತೆ ತಿಳಿ ಹೇಳಬಹುದು ಕೂಡಾ. ಇದರೊಂದಿಗೆ ಶೀತವಿರುವವರಿಂದ ದೂರವಿರುವುದು ಮತ್ತು ಅವರಿಂದ ಇತರ ವಸ್ತುಗಳನ್ನು ಹಂಚಿಕೊಳ್ಳುವುದನ್ನು ತಪ್ಪಿಸಬೇಕು.