ಒಡಿಶಾ: ಅಕ್ಕಿಗಳ ರಾಜ ಎಂದೇ ಹೆಸರುವಾಸಿಯಾಗಿರುವ ಕೋರಾಪುಟ್ ಜಿಲ್ಲೆಯ 'ಕಾಲಾ ಜೀರಾ ಅಕ್ಕಿ'ಗೆ ಭೌಗೋಳಿಕ ಮಾನ್ಯತೆ (ಜಿಐ ಟ್ಯಾಗ್) ನೀಡಿರುವುದರ ಕುರಿತು ಎಂ.ಎಸ್. ಸ್ವಾಮಿನಾಥನ್ ರಿಸರ್ಚ್ ಫೌಂಡೇಶನ್ (ಎಂಎಸ್‌ಎಸ್‌ಆರ್‌ಎಫ್) ಆಕ್ಷೇಪ ವ್ಯಕ್ತಡಿಸಿದೆ.
ಖಾಸಗಿ ಸಂಸ್ಥೆ 'ಜೈವಿಕ್ ಶ್ರೀ ಫಾರ್ಮರ್ಸ್ ಪ್ರೊಡ್ಯೂಸರ್ಸ್ ಕಂಪನಿ' (ಜೆಎಸ್‌ಎಫ್‌ಪಿಸಿ) ಜಿಐ ಟ್ಯಾಗ್‌ಗಾಗಿ ಅರ್ಜಿ ಸಲ್ಲಿಸಿತ್ತು.
'ಕಾಲಾ ಜೀರಾ ಅಕ್ಕಿ ಕೋರಾಪುಟ್ ಜಿಲ್ಲೆಯ ವಿಶೇಷ ಧಾನ್ಯವಾಗಿದೆ. ಜಿಐ ಟ್ಯಾಗ್‌ಗಾಗಿ ಅರ್ಜಿಯನ್ನು ಸರ್ಕಾರಿ ಏಜೆನ್ಸಿಯಿಂದ ಮಾಡಬೇಕೇ ಹೊರತು ಯಾವುದೇ ಖಾಸಗಿ ಸಂಸ್ಥೆಯಿಂದಲ್ಲ. ಖಾಸಗಿ ಸಂಸ್ಥೆ ಜಿಐ ಟ್ಯಾಗ್ ಪಡೆದರೆ ಆ ಕಂಪನಿಯೇ ಉತ್ಪನ್ನದ ಏಕೈಕ ಫಲಾನುಭವಿಯಾಗಿಬಹುದು. ಇದರಿಂದ ಆ ಬೆಳೆಯನ್ನು ಬೆಳೆಯುವ ರೈತರಿಗೆ ತೊಂದರೆಯಾಗಬಹುದು. ಈ ಬಗ್ಗೆ ಶೀಘ್ರದಲ್ಲೇ ನಾವು ಆಕ್ಷೇಪ ಸಲ್ಲಿಸುತ್ತೇವೆ' ಎಂದು ಎಂಎಸ್‌ಎಸ್‌ಆರ್‌ಎಫ್‌ನ ನಿರ್ದೇಶಕ ಪ್ರಶಾಂತ್ ಪರಿದಾ ಹೇಳಿದ್ದಾರೆ.
'ಕಾಲಾ ಜೀರ ಅಕ್ಕಿ ಸಂರಕ್ಷಣೆ ಮತ್ತು ಪ್ರಚಾರಕ್ಕಾಗಿ ಎಂಎಸ್‌ಎಸ್‌ಆರ್‌ಎಫ್ ವ್ಯಾಪಕವಾಗಿ ಕೆಲಸ ಮಾಡಿದೆ. ಇಷ್ಟಾದರೂ ನಾವು ಎಂದಿಗೂ ಜಿಐ ಟ್ಯಾಗ್‌ಗೆ ಅರ್ಜಿ ಸಲ್ಲಿಸಿರಲಿಲ್ಲ. ಯಾಕೆಂದರೆ ಜಿಲ್ಲೆಯ ರೈತ ಸಮುದಾಯದ ಪ್ರಯೋಜನ ಪಡೆಯುವಂತೆ ಸರ್ಕಾರವೇ ಆ ಕೆಲಸ ಮಾಡಲಿ ಎಂಬುವುದು ನಮ್ಮ ಉದ್ದೇಶವಾಗಿತ್ತು. ಜಿಐ ಟ್ಯಾಗ್‌ಗಾಗಿ ಅರ್ಜಿದಾರ ಕಂಪನಿ ಕಾಲ ಜೀರಾ ಅಕ್ಕಿ ಬಗ್ಗೆ ಎಂಎಸ್‌ಎಸ್‌ಆರ್‌ಎಫ್ ನಡೆಸಿದ ಸಂಶೋಧನೆಯನ್ನು ಬಳಸಿಕೊಂಡಿತ್ತು' ಎಂದು ಪರಿದಾ ಅಸಮಾಧಾನ ಹೊರಹಾಕಿದರು.
ಏತನ್ಮಧ್ಯೆ ಜೆಎಸ್‌ಎಫ್‌ಪಿಸಿ ಕಂಪನಿಯ ಪ್ರತಿನಿಧಿ ಪ್ರಭಾಕರ ಅಧಿಕಾರಿ, ಪರಿದಾ ಅವರ ಹೇಳಿಕೆಯನ್ನು ಅಲ್ಲಗೆಳೆದಿದ್ದಾರೆ. 'ಜೆಎಸ್‌ಎಫ್‌ಪಿಸಿ ಒಂದು ರೈತರ ಸಂಘಟನೆಯಾಗಿದೆ. ಜಿಲ್ಲೆಯ 14 ಬ್ಲಾಕ್‌ಗಳ ರೈತರು ಇದರಲ್ಲಿದ್ದಾರೆ. ಆ ರೈತರೇ 'ಕಾಲಾ ಜೀರ ಅಕ್ಕಿ'ಗೆ ಜಿಐ ಟ್ಯಾಗ್ ಪಡೆಯಲು ಅರ್ಜಿ ಸಲ್ಲಿಸಿರುವುದು. ಜಿಐ ಟ್ಯಾಗ್ ಪಡೆದರೆ ಇಡೀ ರೈತ ಸಮುದಾಯಕ್ಕೆ ಲಾಭವಾಗುತ್ತದೆಯೇ ಹೊರತು ಯಾವುದೇ ಒಂದು ಸಂಸ್ಥೆಗಲ್ಲ' ಎಂದು ಹೇಳಿದರು.
'ಕಾಲಾ ಜೀರಾ ಅಕ್ಕಿ' ಜಿಐ ಟ್ಯಾಗ್‌ಗೆ ಸಂಬಂಧಿಸಿದಂತೆ ಆಕ್ಷೇಪಣೆಗಳನ್ನು ಸಲ್ಲಿಸಲು ಜಿಐ ಅಧಿಕಾರಿಗಳು ಜಾಹೀರಾತು ಪ್ರಕಟವಾದ ದಿನಾಂಕದಿಂದ ಮೂರು ತಿಂಗಳ ಗಡುವು ನೀಡಿದ್ದಾರೆ.