ನವದೆಹಲಿ: ಇದೇ 18ರಿಂದ ಐದು ದಿನಗಳ ಕಾಲ ನಡೆಯಲಿರುವ ಸಂಸತ್‌ನ ವಿಶೇಷ ಅಧಿವೇಶನದ ಕಲಾಪಗಳಿಗೆ ತಪ್ಪದೆ ಹಾಜರಿರುವಂತೆ ಬಿಜೆಪಿ ತನ್ನ ಲೋಕಸಭಾ ಸಂಸದರಿಗೆ 'ವಿಪ್' ಜಾರಿ ಮಾಡಿದೆ.
ನವದೆಹಲಿ: ಇದೇ 18ರಿಂದ ಐದು ದಿನಗಳ ಕಾಲ ನಡೆಯಲಿರುವ ಸಂಸತ್‌ನ ವಿಶೇಷ ಅಧಿವೇಶನದ ಕಲಾಪಗಳಿಗೆ ತಪ್ಪದೆ ಹಾಜರಿರುವಂತೆ ಬಿಜೆಪಿ ತನ್ನ ಲೋಕಸಭಾ ಸಂಸದರಿಗೆ 'ವಿಪ್' ಜಾರಿ ಮಾಡಿದೆ.
ಸಂಸದರಿಗೆ ವಿಪ್ ಜಾರಿ ಮಾಡಿರುವ ಬಿಜೆಪಿ, ಸದನದಲ್ಲಿ ಚರ್ಚೆಯ ವೇಳೆ ಸರ್ಕಾರದ ನಿಲುವುಗಳನ್ನು ಬೆಂಬಲಿಸುವಂತೆ ಸೂಚಿಸಿದೆ.
ವಿರೋಧ ಪಕ್ಷಗಳ ಒಕ್ಕೂಟ 'ಇಂಡಿಯಾ'ದ ತೀವ್ರ ಒತ್ತಡದ ಮಧ್ಯೆ ಕೇಂದ್ರ ಸರ್ಕಾರ ಬುಧವಾರದಂದು ವಿಶೇಷ ಅಧಿವೇಶನದ ಕಾರ್ಯಸೂಚಿಯನ್ನು ಬಿಡುಗಡೆಗೊಳಿಸಿದೆ.
ವಿಧಾನಸಭೆಯಿಂದ ಸಂಸತ್‌ವರೆಗೆ ನಡೆದುಬಂದ ಹಾದಿಯಲ್ಲಿನ ಸಾಧನೆಗಳು, ಅನುಭವಗಳು, ನೆನಪುಗಳು ಮತ್ತು ಕಲಿಕೆ ಬಗ್ಗೆ ಮೊದಲ ದಿನ ಲೋಕಸಭೆ ಹಾಗೂ ರಾಜ್ಯಸಭೆಗಳಲ್ಲಿ ಚರ್ಚೆ ಆರಂಭವಾಗಲಿದೆ ಎಂದು ಪ್ರಕಟಣೆ ತಿಳಿಸಿದೆ.
ಇದರ ಜೊತೆಗೆ, ವಿವಾದಿತ ಮುಖ್ಯ ಚುನಾವಣಾ ಆಯುಕ್ತ ಮತ್ತು ಇತರ ಆಯುಕ್ತರು (ನೇಮಕಾತಿ, ಕರ್ತವ್ಯದ ನಿಬಂಧನೆಗಳು ಮತ್ತು ಅಧಿಕಾರಾವಧಿ) ಮಸೂದೆ ಸೇರಿದಂತೆ ಐದು ಮಸೂದೆಗಳಿಗೆ ಒಪ್ಪಿಗೆ ಪಡೆಯಲು ಸರ್ಕಾರ ನಿರ್ಧರಿಸಿದೆ.
ಸಂಸತ್ತಿನ ವಿಶೇಷ ಅಧಿವೇಶನ ಸೆಪ್ಟೆಂಬರ್ 18ರಿಂದ 22ರವರೆಗೆ ನಡೆಯಲಿದೆ. ವಿಶೇಷ ಅಧಿವೇಶನದ ಪೂರ್ವಭಾವಿಯಾಗಿ ಇದೇ 17ರಂದು ಸಂಜೆ 4.30ಕ್ಕೆ ಸರ್ವ ಪಕ್ಷಗಳ ನಾಯಕರ ಸಭೆ ಕರೆಯಲಾಗಿದೆ.